ADVERTISEMENT

ಮಾರಕಾಸ್ತ್ರಗಳಿಂದ ಹಲ್ಲೆ: ತುಂಡಾದ ಕಾಲು

ರುದ್ರಪ್ಪ ಗಾರ್ಡನ್‌ನ ಬಾರ್‌ನಲ್ಲಿ ಮದ್ಯ ಸೇವನೆ ವೇಳೆ ಗಲಾಟೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 16:16 IST
Last Updated 14 ಜುಲೈ 2025, 16:16 IST
ತೇಜಸ್‌ 
ತೇಜಸ್‌    

ಬೆಂಗಳೂರು: ರುದ್ರಪ್ಪ ಗಾರ್ಡನ್‌ನ ಬಾರ್‌ವೊಂದರಲ್ಲಿ ಪಾರ್ಟಿ ನಡೆಸುತ್ತಿದ್ದ ವೇಳೆ ನಡೆದ ಗಲಾಟೆಯಲ್ಲಿ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದ್ದು, ಹಲ್ಲೆಗೆ ಒಳಗಾದ ತೇಜಸ್‌ (24) ಗಂಭೀರವಾಗಿ ಗಾಯಗೊಂಡಿದ್ದಾನೆ.

ಚಾಮರಾಜಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ರುದ್ರಪ್ಪ ಗಾರ್ಡನ್‌ನಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದ್ದು, ದುಷ್ಕರ್ಮಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ತೇಜಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಉಳಿದ ಇಬ್ಬರ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಆಟೊ ಚಾಲಕನಾಗಿರುವ ತೇಜಸ್, ಶುಕ್ರವಾರ ರಾತ್ರಿ ಕೆಲಸ ಮುಗಿಸಿಕೊಂಡು ತನ್ನ ಸ್ನೇಹಿತ ಸಂತೋಷ್ ಜೊತೆ ರುದ್ರಪ್ಪ ಗಾರ್ಡನ್‌ನಲ್ಲಿರುವ ಮಂಜು ಬಾರ್‌ಗೆ ತೆರಳಿದ್ದ. ಇಬ್ಬರೂ ಪಾರ್ಟಿ ಮಾಡುತ್ತಿದ್ದಾಗ ಸಂತೋಷ್‍ನ ಸ್ನೇಹಿತರಾದ ರಾಹುಲ್, ಪ್ರಜ್ವಲ್ ಹಾಗೂ ಅಭಿಷೇಕ್ ಅದೇ ಬಾರ್‌ಗೆ ಬಂದಿದ್ದರು. ಒಂದೇ ಟೇಬಲ್‌ನಲ್ಲಿ ಕುಳಿತು ಐವರೂ ಮದ್ಯ ಸೇವನೆ ಮಾಡುತ್ತಿದ್ದರು. ಆಗ ಮಾತಿಗೆ ಮಾತು ಬೆಳೆದು ಗಲಾಟೆ ವಿಕೋಪಕ್ಕೆ ಹೋಗಿತ್ತು. ಈ ವೇಳೆ ಸಂತೋಷ್‍ನ ಪರವಾಗಿ ತೇಜಸ್ ಮಾತನಾಡಿದ್ದ ಎಂದು ಮೂಲಗಳು ತಿಳಿಸಿವೆ.

ಸ್ವಲ್ಪ ಹೊತ್ತಿನ ನಂತರ ಬಾರ್‌ನ ಸಿಬ್ಬಂದಿ ಗಲಾಟೆ ಬಿಡಿಸಿದ್ದರು. ರಾಹುಲ್, ಪ್ರಜ್ವಲ್ ಹಾಗೂ ಅಭಿಷೇಕ್ ಬಾರ್‌ನಿಂದ ಹೊರಕ್ಕೆ ಹೋಗಿದ್ದರು. ಆಮೇಲೆ ಸಂತೋಷ್ ಹಾಗೂ ತೇಜಸ್ ಪಾರ್ಟಿ ಮುಗಿಸಿ ಹೊರಡಲು ಸಿದ್ಧ ಆಗುತ್ತಿದ್ದಂತೆ ಮಾರಕಾಸ್ತ್ರಗಳ ಸಮೇತ ಬಂದ ಆರೋಪಿಗಳು, ತೇಜಸ್‌ ಮೇಲೆ ಹಲ್ಲೆ ನಡೆಸಿದರು. ದಾಳಿಯಿಂದ ಕಾಲು ತುಂಡಾಗಿದೆ. ಕುತ್ತಿಗೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದೆ ಎಂದು ಮೂಲಗಳು ತಿಳಿಸಿವೆ.

ತೇಜಸ್‌ ಸಹೋದರ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಚಾಮರಾಜಪೇಟೆ ಠಾಣೆ ಪೊಲೀಸರು, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.