ADVERTISEMENT

ಯುವಕನ ಕೊಲೆ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 25 ಮೇ 2020, 19:57 IST
Last Updated 25 ಮೇ 2020, 19:57 IST
   

ಬೆಂಗಳೂರು: ನಟ ಸುದೀಪ್ ಅಭಿಮಾನಿ ಬಳಗದಲ್ಲಿ ಗುರುತಿಸಿಕೊಂಡಿದ್ದ ವಿಜಯ್ ಕುಮಾರ್‌ (30) ಎಂಬಾತನ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ನಾಲ್ವರನ್ನು ಬಂಧಿಸಿದ್ದಾರೆ.

ಬ್ಯಾಟರಾಯನಪುರದ ರಂಜು ಅಲಿಯಾಸ್ ರಂಜಿತ್ (30), ಬಂಗಾರಪ್ಪನಗರದ ಚೇತನ್ (30), ಚನ್ನಪಟ್ಟಣದ ರೋಹಿತ್ ಅಲಿಯಾಸ್ ಜಾಕಿ (24) ಮತ್ತು ನವೀನ್ (29) ಬಂಧಿತರು. ಮೇ 16ರಂದು ಆರ್.ಆರ್. ನಗರದಲ್ಲಿ ವಿಜಯ್‌ ಕುಮಾರ್‌ ಕೊಲೆಯಾಗಿತ್ತು.

’ಬ್ಯಾಟರಾಯನಪುರದ ಬ್ಯಾಂಕ್ ಕಾಲೊನಿಯಲ್ಲಿ ನಿರ್ಗತಿಕರಿಗೆ ಊಟ ವಿತರಿಸುತ್ತಿದ್ದ ಎಲ್ಲರೂ, ಅದೇ ದಿನ ರಾತ್ರಿ 10 ಗಂಟೆಗೆ ಪಾರ್ಟಿ ಮಾಡಿದ್ದರು. ಆಗ ಕ್ಷುಲ್ಲಕ ವಿಷಯಕ್ಕೆ ಆರಂಭವಾದ ಜಗಳ, ಕೊಲೆಯಲ್ಲಿ ಅಂತ್ಯ ಕಂಡಿದೆ.ಆರೋಪಿಗಳ ತೀವ್ರ ವಿಚಾರಣೆ ನಡೆಯುತ್ತಿದೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

ಚೇತನ್ ಮತ್ತು ವಿಜಯ್ ನಡುವೆ ಗಲಾಟೆ ನಡೆದಾಗ ಬಿಡಿಸಲು ಬಂದ ರಂಜುಗೂ ಒದೆ ಬಿದ್ದು ಎರಡು ಹಲ್ಲು ಉದುರಿದ್ದವು. ತನ್ನ ಹಲ್ಲು ಮುರಿದವು ಎಂಬ ಕಾರಣಕ್ಕೆ ವಿಜಯ್ ಮೇಲೆ ರಂಜು ಕೂಡ ಆಕ್ರೋಶಗೊಂಡಿದ್ದ. ಹೀಗಾಗಿ ರಂಜು, ಚೇತನ್ ಜತೆ ಉಳಿದವರೂ ಸೇರಿ ವಿಜಯ್ ಕುಮಾರ್‌ನ ಕೊಲೆಗೆ ಸಂಚು ರೂಪಿಸಿದ್ದಾರೆ. ಬಳಿಕ ಚೇತನ್ ತನ್ನ ಆಟೊದಲ್ಲಿ ಮೂವರ ಜತೆ ಸುಬ್ರಹ್ಮಣ್ಯನಗರದಲ್ಲಿರುವ ವಿಜಯ್ ಮನೆಗೆ ಹೋಗಿದ್ದಾನೆ. ವಿಜಯ್‌ನನ್ನು ಪುಸಲಾಯಿಸಿ ಆರ್. ಆರ್. ನಗರದ ಬಿಇಎಂಎಲ್ ಲೇಔಟ್‌ನ ಅರ್ಮುಗಂ ದೇವಸ್ಥಾನದ ಸಮೀಪ ಕರೆದುಕೊಂಡು ಬಂದು ಮೂವರೂ ಸೇರಿ ಹಲ್ಲೆ ನಡೆಸಿದ್ದಾರೆ. ಬಳಿಕ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ.

‘ಕೊಲೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ವಶಕ್ಕೆ ಪಡೆದು ಆರ್.ಆರ್. ನಗರ ಠಾಣೆಯ ಪೊಲೀಸರು ಪರಿಶೀಲಿಸಿದ್ದರು. ಆಗ ಆರೋಪಿಗಳು ತಡರಾತ್ರಿ ಆಟೊದಲ್ಲಿ ಬಂದು ಹೋಗಿರುವುದು ಗೊತ್ತಾಗಿದೆ. ಆಟೋ ನಂಬರ್‌ ಆಧರಿಸಿ ತನಿಖೆ ನಡೆಸಿದಾಗ, ಆಟೊದಲ್ಲಿ ಚೇತನ್ ಇದ್ದದ್ದು ಗೊತ್ತಾಗಿದೆ. ಚೇತನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಉಳಿದವರ ಹೆಸರು ಬಾಯಿ ಬಿಟ್ಟಿದ್ದಾನೆ’ ಎಂದೂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.