
ಬೆಂಗಳೂರು: ವಿಕ್ಟೋರಿಯಾದ ಟ್ರಾಮಾ ಕೇರ್ ಸೆಂಟರ್‌ಗೆ ದಾಖಲಾಗಿದ್ದ ಯುವಕನ ಅಂಗಾಂಗ ದಾನಕ್ಕೆ ಕುಟುಂಬಸ್ಥರು ಸಮ್ಮತಿಸಿದ್ದರಿಂದ, ಆರು ಮಂದಿಗೆ ಅಂಗಾಂಗ ಕಸಿ ಸಾಧ್ಯವಾಗಿದೆ.
ಮಂಡ್ಯ ಜಿಲ್ಲೆಯ ಚಿಕ್ಕಮಂಡ್ಯ ಗ್ರಾಮದ ದರ್ಶನ್ ಅವರು ಫೆಬ್ರುವರಿ 22ರಂದು ದ್ವಿಚಕ್ರ ವಾಹನದಿಂದ ಬಿದ್ದು ಗಾಯಗೊಂಡಿದ್ದರು. ಅವರನ್ನು ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ತಲೆಯೊಳಗೆ ರಕ್ತಸ್ರಾವ ಆಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾದ ಟ್ರಾಮಾ ಕೇರ್ ಸೆಂಟರ್‌ಗೆ ಶಿಫಾರಸು ಮಾಡಲಾಗಿತ್ತು.
ಟ್ರಾಮಾ ಕೇರ್ ಸೆಂಟರ್‌ಗೆ ದಾಖಲಾದ ಯುವಕನಿಗೆ ವೈದ್ಯರ ತಂಡವು ವಿವಿಧ ಪರೀಕ್ಷೆಗಳನ್ನು ನಡೆಸಿ, ಚಿಕಿತ್ಸೆ ಒದಗಿಸಿದರೂ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡಿರಲಿಲ್ಲ. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡಾ. ಕಾವ್ಯಾ, ಡಾ. ದೀಪಕ್, ಡಾ. ಆಸೀಮಾ ಬಾನು ಅವರನ್ನು ಒಳಗೊಂಡ ವೈದ್ಯರ ತಂಡವು ಎರಡು ದಿನಗಳ ಬಳಿಕ ಯುವಕನ ಮಿದುಳು ನಿಷ್ಕ್ರಿಯಗೊಂಡಿರುವುದಾಗಿ ಘೋಷಿಸಿತು.
ಯುವಕನ ಕುಟುಂಬಸ್ಥರಿಗೆ ಅಂಗಾಂಗ ದಾನದ ಮಹತ್ವ ಬಗ್ಗೆ ತಿಳಿಸಿದ ವೈದ್ಯರು, ಅವರಿಂದ ಅನುಮತಿ ಪಡೆದುಕೊಂಡರು. ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಜೀವಸಾರ್ಥಕತೆ ಸಂಸ್ಥೆಯು, ಅಂಗಾಂಗಕ್ಕಾಗಿ ಹೆಸರು ನೋಂದಾಯಿಸಿದವರಿಗೆ ಅಂಗಾಂಗಗಳನ್ನು ಕಸಿ ಮಾಡಲು ಒದಗಿಸಿತು.
‘ಮಿದುಳು ನಿಷ್ಕ್ರಿಯಗೊಂಡ ಯಾವುದೇ ವ್ಯಕ್ತಿಯ ಅಂಗಾಂಗಗಳನ್ನು ದಾನ ಮಾಡಬಹುದಾಗಿದೆ. ಇದು ಕಾನೂನು ಬದ್ಧವಾಗಿದೆ. ನೋವಿನ ಸಮಯದಲ್ಲೂ ಮತ್ತೊಬ್ಬರ ಬಾಳಿಗೆ ಬೆಳಕಾಗುವ ನಿರ್ಧಾರವನ್ನು ದರ್ಶನ್ ಕುಟುಂಬದವರು ತೆಗೆದುಕೊಂಡರು. ಅವರ ನಡೆ ಮಾದರಿಯಾಗಿದೆ’ ಎಂದು ವಿಕ್ಟೋರಿಯಾದ ಟ್ರಾಮಾ ಕೇರ್ ಸೆಂಟರ್‌ನ ವೈದ್ಯರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.