ADVERTISEMENT

ವಂಚನೆ ಪ್ರಕರಣದಲ್ಲಿ ಯುವರಾಜ್ ಬಂಧನ: ₹ 70 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಆದೇಶ

ಪತ್ನಿ ಹೆಸರಿನಲ್ಲಿ ಸ್ವತ್ತು

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 19:00 IST
Last Updated 22 ಜನವರಿ 2021, 19:00 IST
ಯುವರಾಜ್
ಯುವರಾಜ್   

ಬೆಂಗಳೂರು: ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಮುಖಂಡರ ಹೆಸರು ಹೇಳಿಕೊಂಡು ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ್ದ ಪ್ರಕರಣದ ಆರೋಪಿ ಆರ್. ಯುವರಾಜ್ ಅಲಿಯಾಸ್ ಸಂಗನಬಸವ ಸೇವಾಲಾಲ್ ಸ್ವಾಮೀಜಿ ಅವರಿಗೆ ಸೇರಿದ್ದ ಸುಮಾರು ₹ 70 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಿದೆ.

ನಗರದ ಹಲವು ಠಾಣೆಗಳಲ್ಲಿ ದಾಖಲಾಗಿದ್ದ 14 ವಂಚನೆ ಪ್ರಕರಣದಡಿ ಆರೋಪಿ ಯುವರಾಜ್‌ ಅವರನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಆರೋಪಿ ಹಾಗೂ ಅವರ ಪತ್ನಿ ಎನ್‌.ಪ್ರೇಮಾ ಅವರ ಹೆಸರಿಗಿದ್ದ 26 ಆಸ್ತಿಗಳನ್ನು ಪಟ್ಟಿ ಮಾಡಿ 67ನೇ ಸಿಸಿಎಚ್ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಎಸ್. ಪಾಟೀಲ, ‘ಸಾರ್ವಜನಿಕರನ್ನು ವಂಚಿಸಿ ಗಳಿಸಿದ್ದ ಹಣದಲ್ಲೇ ಆರೋಪಿ, ಪತ್ನಿ ಹೆಸರಿನಲ್ಲಿ ಸುಮಾರು ₹ 60 ಕೋಟಿಯಿಂದ ₹ 70 ಕೋಟಿ ಮೌಲ್ಯದ ಆಸ್ತಿ ಸಂಪಾದನೆ ಮಾಡಿದ್ದಾರೆ. ಸಿಸಿಬಿ ಅಧಿಕಾರಿಗಳು ಈ ಸಂಬಂಧ ದಾಖಲೆ ಹಾಗೂ ಪುರಾವೆಗಳನ್ನು ಸಂಗ್ರಹಿಸಿದ್ದಾರೆ. ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ಹೊರಡಿಸಿ, ವಂಚನೆಗೀಡಾದವರಿಗೆ ನ್ಯಾಯ ಒದಗಿಸಬೇಕು’ ಎಂದು ಕೋರಿದ್ದರು.

ADVERTISEMENT

ವಾದ ಆಲಿಸಿ ದಾಖಲೆ ಪರಿಶೀಲನೆ ನಡೆಸಿದ ನ್ಯಾಯಾಲಯ, ಆರೋಪಿಗೆ ಸೇರಿದ್ದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಶುಕ್ರವಾರ ಮಧ್ಯಂತರ ಆದೇಶ ಹೊರಡಿಸಿದೆ.

ಆದೇಶದ ಬಗ್ಗೆ ಮಾತನಾಡಿದ ಬಿ.ಎಸ್.ಪಾಟೀಲ, ‘ ಪ್ರಕರಣ ದಾಖಲಾದ ಕೆಲವೇ ದಿನಗಳಲ್ಲೇ ತ್ವರಿತವಾಗಿ ವಿಚಾರಣೆ ನಡೆಸಿ ನ್ಯಾಯಾಲಯ ಹೊರಡಿಸಿರುವ ಮಧ್ಯಂತರ ಆದೇಶವನ್ನು ಸ್ವಾಗತಿಸುತ್ತೇನೆ. ಇದು ವಂಚನೆ ಪ್ರಕರಣದ ಆರೋಪಿಗಳಿಗೆ ಎಚ್ಚರಿಕೆ ಗಂಟೆಯಾಗಿದೆ’ ಎಂದರು.

14 ವಂಚನೆ ಪ್ರಕರಣ; ‘ಸರ್ಕಾರದ ವಿವಿಧ ಮಂಡಳಿಗಳಲ್ಲಿ ಅಧ್ಯಕ್ಷ ಹುದ್ದೆ, ಸರ್ಕಾರದ ಇಲಾಖೆಗಳಲ್ಲಿ ಕೆಲಸ, ಪ್ರತಿಷ್ಠಿತ ಕಾಲೇಜುಗಳಲ್ಲಿ ಎಂಬಿಬಿಎಸ್ ಸೀಟು ಹಾಗೂ ಸರ್ಕಾರದಲ್ಲಿ ಉನ್ನತ ಹುದ್ದೆ ಕೊಡಿಸುವುದಾಗಿ ಆಮಿಷವೊಡ್ಡಿದ್ದ ಆರೋಪಿ ಯುವರಾಜ್, ಕೋಟ್ಯಂತರ ರೂಪಾಯಿ ಪಡೆದಿದ್ದರು’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಬಿಜೆಪಿ ಮುಖಂಡರನ್ನು ನೇರವಾಗಿ ಭೇಟಿಯಾಗಿದ್ದ ಆರೋಪಿ, ಅವರ ಜೊತೆ ಫೋಟೊಗಳನ್ನು ತೆಗೆಸಿಕೊಂಡಿದ್ದರು. ಅದೇ ಫೋಟೊಗಳನ್ನು ಸಾರ್ವಜನಿಕರಿಗೆ ತೋರಿಸಿ ನಂಬಿಕೆ ಬರುವಂತೆ ಮಾಡುತ್ತಿದ್ದರು. ತಮ್ಮ ಕೆಲಸ ಮಾಡಿಕೊಡದಿದ್ದಾಗ ಕೆಲವರು ಪ್ರಶ್ನಿಸಿದ್ದರು. ಅವರಿಗೂ ಆರೋಪಿ ಜೀವ ಬೆದರಿಕೆಯೊಡ್ಡಿದ್ದರು’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.