ADVERTISEMENT

ಬೆಂಗಳೂರು: ದೀಪಾ ಭಾಸ್ತಿ ಸೇರಿ 7 ಮಂದಿಗೆ ‘ಜಾಕಿಯಾ ಶಂಕರ್ ಪಾಠಕ್ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 14:01 IST
Last Updated 21 ನವೆಂಬರ್ 2025, 14:01 IST
   

ಬೆಂಗಳೂರು: ಭಾರತೀಯ ವಿದ್ಯಾಭವನ ನೀಡುವ ‘ಭವನ್–ಜಾಕಿಯಾ ಶಂಕರ್ ಪಾಠಕ್ ಪ್ರಶಸ್ತಿ’ಗೆ ಲೇಖಕಿ ದೀಪಾ ಭಾಸ್ತಿ ಸೇರಿ ಏಳು ಮಂದಿಯನ್ನು ಆಯ್ಕೆ ಮಾಡಲಾಗಿದೆ.

ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದ ಜಾಕಿಯಾ ಶಂಕರ್ ಪಾಠಕ್ ಸ್ಮರಣಾರ್ಥ ಅವರ ಕುಟುಂಬ ದತ್ತಿ ಸ್ಥಾಪಿಸಿದೆ. ಸಾಹಿತ್ಯ, ಶಿಕ್ಷಣ ಹಾಗೂ ವಿದ್ಯಾರ್ಥಿ ವಿಭಾಗದಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. 2024ನೇ ಸಾಲಿಗೆ ಸಾಹಿತ್ಯ ವಿಭಾಗದಲ್ಲಿ ಲೇಖಕಿ ಹಾಗೂ ಶಿಕ್ಷಣ ತಜ್ಞೆ ಡಿ.ಆರ್. ದೇವಿಕಾ, ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ಶುಭಾ ಮದನ್ ಹಾಗೂ ವಿದ್ಯಾರ್ಥಿ ವಿಭಾಗದಲ್ಲಿ ಆನಂದಿ ಆಯ್ಕೆಯಾಗಿದ್ದಾರೆ. 

2025ನೇ ಸಾಲಿಗೆ ಕ್ರಮವಾಗಿ ಅನುವಾದಕಿ ದೀಪಾ ಭಾಸ್ತಿ, ಕಮ್ಮಾಜೆಯ ಮೊರಾರ್ಜಿ ದೇಸಾಯಿ ವಸತಿ ಶಿಕ್ಷಣ ಸಂಸ್ಥೆಯ ಇಂಗ್ಲಿಷ್ ಅಧ್ಯಾಪಕಿ ಆರಾಧನಾ, ವಿದ್ಯಾರ್ಥಿನಿಯರಾದ ಅಪ್ಸರಾ ಹಾಗೂ ನಿಸರ್ಗಾ ನಾರಾಯಣ್ ಅವರು ಭಾಜನರಾಗಿದ್ದಾರೆ. ಈ ಪ್ರಶಸ್ತಿ ಸಾಹಿತ್ಯ ವಿಭಾಗದಲ್ಲಿ ₹10 ಸಾವಿರ, ಶಿಕ್ಷಣ ವಿಭಾಗದಲ್ಲಿ ₹5 ಸಾವಿರ ಹಾಗೂ ವಿದ್ಯಾರ್ಥಿ ವಿಭಾಗದಲ್ಲಿ ₹3 ಸಾವಿರ ನಗದು ಒಳಗೊಂಡಿದೆ.   

ADVERTISEMENT

ಡಿ.4ರಂದು ಸಂಜೆ 4 ಗಂಟೆಗೆ ಭಾರತೀಯ ವಿದ್ಯಾಭವನದ ಕೆ.ಆರ್.ಜಿ. ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದ್ದು, ಐಎಎಸ್ ಅಧಿಕಾರಿ ರಿತೇಶ್ ಕುಮಾರ್ ಸಿಂಗ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಭಾರತೀಯ ವಿದ್ಯಾಭವನದ ಅಧ್ಯಕ್ಷ ಕೆ.ಜಿ. ರಾಘವನ್ ಅಧ್ಯಕ್ಷತೆ ವಹಿಸಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.