ADVERTISEMENT

ಜೊಮೆಟೊ ಡೆಲಿವರಿ ಬಾಯ್‌ಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2019, 19:33 IST
Last Updated 16 ಸೆಪ್ಟೆಂಬರ್ 2019, 19:33 IST
ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಸೋಮವಾರ ಸೇರಿದ್ದ ಡೆಲಿವರಿ ಬಾಯ್‌ಗಳ ಜೊತೆ ಪೊಲೀಸರು ಮಾತನಾಡಿದರು
ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಸೋಮವಾರ ಸೇರಿದ್ದ ಡೆಲಿವರಿ ಬಾಯ್‌ಗಳ ಜೊತೆ ಪೊಲೀಸರು ಮಾತನಾಡಿದರು   

ಬೆಂಗಳೂರು: ಮೊಬೈಲ್ ಆ್ಯಪ್ ಆಧರಿತವಾಗಿ ಆಹಾರ ಸರಬರಾಜು ಮಾಡುತ್ತಿರುವ ‘ಜೊಮೆಟೊ’ ಕಂಪನಿ ತನ್ನ ನಿಯಮಗಳಲ್ಲಿ ಹಲವು ಬದಲಾವಣೆ ಮಾಡಿದ್ದು, ಅದನ್ನು ಖಂಡಿಸಿ ಡೆಲಿವರಿ ಬಾಯ್‌ಗಳು ಪ್ರತಿಭಟನೆ ಆರಂಭಿಸಿದ್ದಾರೆ.

ಎಚ್‌ಎಸ್‌ಆರ್‌ ಲೇಔಟ್‌ ಬಳಿ ಇರುವ ಕಂಪನಿಯ ಮುಖ್ಯ ಕಚೇರಿ ಎದುರು ಸೋಮವಾರ ಸೇರಿದ್ದ ಡೆಲಿವರಿ ಬಾಯ್‌ಗಳು, ‘ಮೊದಲಿದ್ದ ನಿಯಮಗಳನ್ನೇ ಯಥಾಪ್ರಕಾರ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ಆಹಾರ ಸರಬರಾಜು ಮಾಡಿದ್ದಕ್ಕೆ ನೀಡುವ ಪ್ರೋತ್ಸಾಹ ಧನ ಸೇರಿದಂತೆ ಹಲವು ಸೌಲಭ್ಯಗಳಿಗೆ ಕಂಪನಿ ಕತ್ತರಿ ಹಾಕಿದೆ. ಇದನ್ನು ಖಂಡಿಸಿ ಎಲೆಕ್ಟ್ರಾನಿಕ್ ಸಿಟಿ ಹಾಗೂ ಸುತ್ತಮುತ್ತಲ ಡೆಲಿವರಿ ಬಾಯ್‌ಗಳು ಮೂರು ದಿನಗಳಿಂದ ಪ್ರತಿಭಟನೆ ಆರಂಭಿಸಿದ್ದಾರೆ. ಸುಮಾರು 3,000 ಮಂದಿ ಲಾಗ್‌–ಇನ್ ಆಗದೇ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ’ ಎಂದು ಡೆಲಿವರಿ ಬಾಯ್‌ಗಳು ಹೇಳಿದರು.

ADVERTISEMENT

‘ಒಂದು ಬಾರಿ ಡೆಲಿವರಿಗೆ ಆರಂಭದಲ್ಲಿ ₹ 40 ಸಿಗುತ್ತಿತ್ತು. ಅದು ಈಗ ₹ 30 ಆಗಿದೆ. ಡೆಲಿವರಿ ಸ್ಥಳವು 5.5 ಕಿ.ಮೀ.ಗಿಂತ ಹೆಚ್ಚಿದ್ದರೆ, ಪ್ರತಿ ಕಿ.ಮೀ.ಗೆ ₹10 ಹೆಚ್ಚುವರಿಯಾಗಿ ಸಿಗುತ್ತಿತ್ತು. ಆದರೀಗ ಕೇವಲ ₹ 4 ನೀಡಲಾಗುತ್ತಿದೆ’ ಎಂದು ದೂರಿದರು.

‘ಕಂಪನಿಯು ದಿನಕ್ಕೊಂದು ನಿಯಮ ರೂಪಿಸುತ್ತಿದೆ. ಇದರಿಂದ ಡೆಲಿವರಿ ಬಾಯ್‌ಗಳ ಸಂಪಾದನೆ ಕಡಿಮೆ ಆಗುತ್ತಿದೆ. ಈ ಕೆಲಸವನ್ನೇ ನಂಬಿಕೊಂಡವರು ಜೀವನ ನಡೆಸುವುದೂ ಕಷ್ಟವಾಗುತ್ತಿದೆ. ಇದನ್ನು ಕೇಳಲೆಂದೇ ಕಂಪನಿಗೆ ಬಂದಿದ್ದೇವೆ’ ಎಂದು ಹೇಳಿದರು.

ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ‘ಜೊಮೆಟೊ’ ಕಂಪನಿಯವರು ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.