ADVERTISEMENT

‘ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಹಾರ ಧಾನ್ಯ ಹಾಳು’

ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎನ್‌.ಕೃಷ್ಣಮೂರ್ತಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 6:30 IST
Last Updated 12 ಅಕ್ಟೋಬರ್ 2017, 6:30 IST

ಬೀದರ್‌: ‘ಗೋದಾಮುಗಳಲ್ಲಿ ವೈಜ್ಞಾನಿಕ ಪದ್ಧತಿಯಲ್ಲಿ ಆಹಾರ ಧಾನ್ಯಗಳನ್ನು ಸಂಗ್ರಹಿಸಿ ಇಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಸರ್ಕಾರದ ಸುತ್ತೋಲೆಗಳನ್ನೂ ಓದಿಲ್ಲ. ಹೀಗಾಗಿ ಗೋದಾಮುಗಳಲ್ಲಿನ ಸಾವಿರಾರು ಕ್ವಿಂಟಲ್‌ ಆಹಾರ ಧಾನ್ಯ ಹಾಳಾಗುತ್ತಿದೆ’ ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎನ್‌.ಕೃಷ್ಣಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

‘ಮೈಲೂರಿನಲ್ಲಿರುವ ಉಗ್ರಾಣ ನಿಗಮದ ಗೋದಾಮುಗಳಲ್ಲಿ ಬೇಳೆ, ಉಪ್ಪು, ಸಕ್ಕರೆ, ಎಣ್ಣೆ ಹಾಳಾಗುತ್ತಿದೆ. ಇವುಗಳನ್ನು ಸಂಗ್ರಹಿಸಿಡಲು ವೈಜ್ಞಾನಿಕ ವಿಧಾನ ಅನುಸರಿಸಿಲ್ಲ. ಅಧಿಕಾರಿಗಳು ಆದೇಶಗಳನ್ನು ಸರಿಯಾಗಿ ಪಾಲನೆಯನ್ನೂ ಮಾಡುತ್ತಿಲ್ಲ. ಹೀಗಾಗಿ ದೊಡ್ಡಮಟ್ಟದಲ್ಲಿ ಹಾನಿ ಉಂಟಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

‘ಉಗ್ರಾಣ ನಿಗಮ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಅಕ್ಷರ ದಾಸೋಹ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅವ್ಯವಸ್ಥೆಯನ್ನು ಅವರ ಗಮನಕ್ಕೆ ತರಲಾಗು ವುದು. ಆಡಳಿತ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಹೇಳಿದರು.

‘ಪಡಿತರ ವಿತರಣೆಯಲ್ಲಿ ಅನ್ಯಾಯ ಆಗದಂತೆ ನೋಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬೀದರ್ ಜಿಲ್ಲೆಯ ಶೇ 78 ರಷ್ಟು ಕುಟುಂಬಗಳಿಗೆ ಬಯೊಮೆಟ್ರಿಕ್‌ ಮೂಲಕ ಆಹಾರ ಧಾನ್ಯ ಪೂರೈಕೆ ಮಾಡಲಾಗುತ್ತಿದೆ. ಸರಿಯಾಗಿ ಪಡಿತರ ವಿತರಣೆ ಮಾಡದ 21 ಅಂಗಡಿಗಳ ಪರವಾನಗಿ ಅಮಾನತು ಮಾಡಲಾಗಿದೆ’ ಎಂದು ತಿಳಿಸಿದರು.

‘ನ್ಯಾಯಬೆಲೆ ಅಂಗಡಿಗಳಿಂದ ಸಮರ್ಪಕವಾಗಿ ಪಡಿತರ ವಿತರಣೆ ಆಗದಿದ್ದರೆ ನೇರವಾಗಿ ಶುಲ್ಕ ರಹಿತ ದೂರವಾಣಿ 1067 ಅಥವಾ 1800 425 9339ಗೆ ಸಂಪರ್ಕಿಸಿ ದೂರು ನೀಡಬಹುದು’ ಎಂದು ಹೇಳಿದರು.

ಆಯೋಗದ ಸದಸ್ಯರಾದ ವಿ.ಬಿ.ಪಾಟೀಲ, ಎಚ್‌.ವಿ.ಶಿವಶಂಕರ, ಡಿ.ಜಿ.ಹಸಬಿ, ಬಿ.ಎ. ಮಹಮ್ಮದ್ ಅಲಿ, ಮಂಜುಳಾಬಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.