ADVERTISEMENT

ಅಪಘಾತ: 3 ಸಾವು, 25ಕ್ಕೂ ಹೆಚ್ಚು ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2012, 6:15 IST
Last Updated 14 ಅಕ್ಟೋಬರ್ 2012, 6:15 IST

ಬೀದರ್: ನಗರದ ಹೊರವಲಯದ ನೌಬಾದ್ ಬಳಿ ಶನಿವಾರ ರಾತ್ರಿ ಕಲ್ಲು ಸಾಗಣೆ ಟ್ರ್ಯಾಕ್ಟರ್ ಮತ್ತು ಟೆಂಪೋ ಟ್ರ್ಯಾಕ್ಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬಾಲಕ ಸೇರಿದಂತೆ ಮೂವರು ಮೃತಪಟ್ಟಿದ್ದು, ಸುಮಾರು 25 ಮಂದಿ ಗಾಯಗೊಂಡಿದ್ದಾರೆ.

ಟ್ರ್ಯಾಕ್ಟರ್ ಬೀದರ್ ಕಡೆಗೆ ಬರುತ್ತಿದ್ದರೆ, ಟೆಂಪೋ ಭಾಲ್ಕಿ ಕಡೆಗೆ ತೆರಳುತ್ತಿತ್ತು. ಟೆಂಪೊದಲ್ಲಿ ಇದ್ದವರು ಮೃತಪಟ್ಟಿದ್ದು, ಅಪಘಾತದ ಬಳಿಕ ಟೆಂಪೋ ರಸ್ತೆ ಬದಿಗೆ ಉರುಳಿ ಬಿದ್ದಿದ್ದು,  ಅಪಘಾತದ ರಭಸಕ್ಕೆ ವಾಹನ ಬಹುತೇಕ ನಜ್ಜುಗುಜ್ಜಾಗಿದೆ.

ಸ್ಥಳದಲ್ಲಿಯೇ ಸುಮಾರು 70 ವರ್ಷ ವಯಸ್ಸಿನ ಬಸವರಾಜ ಕೊಪ್ಟೆ  ಮೃತಪಟ್ಟಿದ್ದಾರೆ. ಉಳಿದಂತೆ ಆಸ್ಪತ್ರೆಗೆ ಹೋಗುವ ಮಾರ್ಗದಲ್ಲಿ ಶಿವಮ್ಮ (55) ಮತ್ತು ಕೇಶವ್ (9) ಮೃತಪಟ್ಟರು ಎಂದು ತಿಳಿದುಬಂದಿದೆ.

ಗಾಯಾಳುಗಳು ಮತ್ತು ಮೃತರು ಮೂಲತಃ ಬಸವಕಲ್ಯಾಣ ತಾಲ್ಲೂಕು ಬೇಲೂರು ಗ್ರಾಮದವರಾಗಿದ್ದು, ಎರಡು ಕುಟುಂಬಕ್ಕೆ ಸೇರಿದವರು. ಧಾರ್ಮಿಕ ಕಾರ್ಯಕ್ಕಾಗಿ ನರಸಿಂಹ ಝರಣಿಗೆ ಆಗಮಿಸಿದ್ದು, ಬಳಿಕ ಊರಿಗೆ ಮರಳುವಾಗ ದುರಂತ ಸಂಭವಿಸಿದೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಬಳಿಕ ಕ್ರೇನ್ ಬಳಸಿ ರಸ್ತೆ ಬದಿಯಲ್ಲಿ ಉರುಳಿದ್ದ ಟೆಂಪೋ ತೆಗೆಯಲಾಯಿತು. ಅಪಘಾತದ ತೀವ್ರತೆಯ ಹಿನ್ನೆಲೆಯಲ್ಲಿ ಬೀದರ್-ಭಾಲ್ಕಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಧಕ್ಕೆಯಾಯಿತು.

ಟೆಂಪೋ ಚಾಲಕ ಆತುರದಿಂದ ಮುನ್ನುಗ್ಗಿದಾಗ  ಎದುರಿನಿಂದ ಬರುತ್ತಿದ್ದ ಟ್ರಾಕ್ಟರ್‌ನ ಹಿಂಬದಿಗೆ ಟೆಂಪೋ ಢಿಕ್ಕಿ ಹೊಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಾಯಾಳುಗಳನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಹೆಚ್ಚಿನವರು ಅಪಾಯದಿಂದ ಪಾರಾಗಿದ್ದಾರೆ. ಬೀದರ್‌ನ ನ್ಯೂ ಟೌನ್ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.