ADVERTISEMENT

ಅಪೌಷ್ಟಿಕ ಮಕ್ಕಳು:ಕಾಣದ ಸುಧಾರಣೆ

ಪಾಲಕರ ನಿರುತ್ಸಾಹ–ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ: ಆರೋಪ

ಚಂದ್ರಕಾಂತ ಮಸಾನಿ
Published 9 ಏಪ್ರಿಲ್ 2018, 6:39 IST
Last Updated 9 ಏಪ್ರಿಲ್ 2018, 6:39 IST
ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಗು
ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಗು   

ಬೀದರ್: ಅಪೌಷ್ಟಿಕ ಮಕ್ಕಳ ಆರೋಗ್ಯ ವೃದ್ಧಿಗೆ ಸರ್ಕಾರ ಹಲವು ಸೌಲಭ್ಯಗಳನ್ನು ಒದಗಿಸುತ್ತಿದ್ದರೂ ಪಾಲಕರ ನಿರುತ್ಸಾಹ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿ ನಿರ್ಲಕ್ಷ್ಯದಿಂದ ಸರ್ಕಾರದ ಯೋಜನೆಗಳು ತೆವಳುತ್ತ ಸಾಗಿವೆ. ಕಳೆದ ವರ್ಷದ ಅಂಕಿ ಅಂಶಗಳಿಗೆ ಹೋಲಿಸಿದರೆ ಅಪೌಷ್ಟಿಕ ಮಕ್ಕಳ ಸಂಖ್ಯೆಯಲ್ಲಿ ಗಮನಾರ್ಹ ಬದಲಾವಣೆ ಆಗಿಲ್ಲ.

ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡಬೇಕು. ಆದರೆ, ಜಿಲ್ಲೆಯಲ್ಲಿ ಇದಾವ ಕೆಲಸವೂ ನಡೆಯುತ್ತಿಲ್ಲ. ತೀವ್ರ ಅನಾರೋಗ್ಯದಿಂದ ಬಳಲಿದ ನಂತರ ಆಸ್ಪತ್ರೆಗೆ ಬರುವ ಮಗುವಿನ ಹೆಸರು ದಾಖಲಿಸಿಕೊಂಡು ದಾಖಲೆ ಇಡುವ ಕಾರ್ಯ ಮಾತ್ರ ನಡೆದಿದೆ.

ನಗರದ ಮಕ್ಕಳ ಆರೋಗ್ಯ ಪುನಃಶ್ಚೇತನ ಕೇಂದ್ರದಲ್ಲಿ ವೈದ್ಯಕೀಯ ಅಧಿಕಾರಿಯೇ ಇಲ್ಲ. ಡೈಟಿಷನ್‌ ಹುದ್ದೆ ಸಹ ಖಾಲಿ ಇದೆ. ಒಬ್ಬರು ನೋಡೆಲ್‌ ಅಧಿಕಾರಿ, ತಲಾ ಇಬ್ಬರು ನರ್ಸ್, ಅಡುಗೆಯವರು ಹಾಗೂ ಅಟೆಂಡರ್‌ಗಳಿದ್ದಾರೆ. ಪ್ರಸ್ತುತ ಇವರಾರಿಗೂ ಕೆಲಸ ಇಲ್ಲ. ಕೇಂದ್ರದಲ್ಲಿರುವ ಎಲ್ಲ ಹಾಸಿಗೆಗಳು ಖಾಲಿ ಇವೆ. ಜನವರಿಯಲ್ಲಿ ಎರಡು ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ. ಫೆಬ್ರುವರಿ ಹಾಗೂ ಮಾರ್ಚ್‌ನಲ್ಲಿ ಒಂದು ಮಗುವೂ ಕೇಂದ್ರಕ್ಕೆ ಬಂದ ದಾಖಲೆಗಳಿಲ್ಲ.

ADVERTISEMENT

‘ತಾಲ್ಲೂಕು ಕೇಂದ್ರಗಳಲ್ಲಿರುವ ವೈದ್ಯರು ಚಿಕಿತ್ಸೆಗೆ ಶಿಫಾರಸು ಮಾಡಿದ ಮಕ್ಕಳು ಬರುತ್ತಿಲ್ಲ. ಜಿಲ್ಲಾ ಆಸ್ಪತ್ರೆಗೆ ನೇರವಾಗಿ ಬರುವ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿನ ಆರೋಗ್ಯ ಪರಿಶೀಲಿಸಿ ಕನಿಷ್ಠ 4 ರಿಂದ ಗರಿಷ್ಠ 10 ದಿನಗಳ ವರೆಗೆ ಚಿಕಿತ್ಸೆ ನೀಡಲಾಗುತ್ತಿದೆ’ ಎನ್ನುತ್ತಾರೆ ಎನ್‌ಆರ್‌ಸಿ ನೋಡೆಲ್‌ ಅಧಿಕಾರಿ ಶಾಂತಲಾ ಕೌಜಲಗಿ.

‘ಚಿಕಿತ್ಸೆಗೆ ಬರುವ ಮಗುವಿನ ಉಪಚಾರಕ್ಕೆ ಪ್ರತಿ ದಿನ ₹ 125 ಹಾಗೂ ತಾಯಿಗೆ ₹ 174 ಪರಿಹಾರ ಭತ್ಯೆ ನೀಡಲಾಗುತ್ತಿದೆ. ಕೂಲಿ ಮಾಡುವವರ ಮಕ್ಕಳೇ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಕೆಲಸ ಮಾಡದಿದ್ದರೆ ಅವರ ಹೊಟ್ಟೆ ತುಂಬುವುದಿಲ್ಲ. ಹೀಗಾಗಿ ಅವರು ಹೆಚ್ಚು ದಿನ ಆಸ್ಪತ್ರೆಯಲ್ಲಿ ಉಳಿದುಕೊಳ್ಳಲು ಹಿಂಜರಿಯುತ್ತಾರೆ’ ಎಂದು ಹೇಳುತ್ತಾರೆ.

‘ಅಪೌಷ್ಟಿಕತೆಯಿಂದ ಬಳಲುವ ಮಗುವನ್ನು ಆಸ್ಪತ್ರೆಗೆ ತಂದರೂ ತಾಂತ್ರಿಕ ಕಾರಣ ನೀಡಿ ಬೇರೆ ಕಡೆಗೆ ಕಳಿಸಿಕೊಡಲಾಗುತ್ತದೆ. ಹೀಗಾಗಿ ನಮ್ಮ ಮಗನನ್ನು  ಹೈದರಾಬಾದ್‌ ಸರ್ಕಾರಿ ಆಸ್ಪತ್ರೆಗೆ ಒಯ್ಯುತ್ತಿದ್ದೇನೆ. ಇಲ್ಲಿಯೇ ಸೌಲಭ್ಯ ದೊರೆತಿದ್ದರೆ ಹೈದರಾಬಾದ್‌ಗೆ ಹೋಗುತ್ತಿರಲಿಲ್ಲ’ ಎನ್ನುತ್ತಾರೆ ಬಸವಕಲ್ಯಾಣ ತಾಲ್ಲೂಕಿನ ನಾರಾಯಣಪುರದ ಗ್ರಾಮದ ನಾರಾಯಣರಾವ್.

ಮಾಹಿತಿ ಕೊರತೆ:
2012ರ ಅಕ್ಟೋಬರ್‌ನಲ್ಲಿ ಬೀದರ್‌ ಜಿಲ್ಲಾ ಆಸ್ಪತ್ರೆಯಲ್ಲಿ ಮಕ್ಕಳ ಆರೋಗ್ಯ ಪುನಃಶ್ಚೇತನ ಕೇಂದ್ರ ಆರಂಭವಾಗಿದೆ. ಆರು ವರ್ಷಗಳ ಅವಧಿಯಲ್ಲಿ ಕೇವಲ 279 ಅಪೌಷ್ಟಿಕ ಮಕ್ಕಳಿಗೆ ಮಾತ್ರ ಚಿಕಿತ್ಸೆ ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಇದ್ದರೂ ಮಾಹಿತಿ ಕೊರತೆಯಿಂದ ಚಿಕಿತ್ಸೆ ದೊರೆಯುತ್ತಿಲ್ಲ.

‘ಬಸವಕಲ್ಯಾಣ ಹಾಗೂ ಔರಾದ್‌ ತಾಲ್ಲೂಕಿನ ಸಂತಪುರದ ಎಂಎನ್‌ಆರ್‌ಸಿ ಹೊರತುಪಡಿಸಿ ಉಳಿದ ತಾಲ್ಲೂಕುಗಳಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಅಧಿಕ ಇದೆ.ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮಕ್ಕಳಿಗೆ ಆಹಾರ ಪೂರೈಕೆ ಮಾಡಲಾಗುತ್ತಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಈಶ್ವರಪ್ಪ ಪಾಂಚಾಳ ಹೇಳುತ್ತಾರೆ.‘ಜಿಲ್ಲಾ ಕೇಂದ್ರದಲ್ಲಿ ಮಕ್ಕಳ ಆರೋಗ್ಯ ಪುನಃಶ್ಚೇತನ ಕೇಂದ್ರ(ಎನ್‌ಆರ್‌ಸಿ) ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಎಂಎನ್‌ಆರ್‌ಸಿ ಇವೆ. ಅಪೌಷ್ಟಿಕತೆ ಸುಧಾರಣೆ ಕಂಡು ಬಾರದ ಮಕ್ಕಳಿಗೆ ನಿತ್ಯ ಹಾಲು, ಮೊಟ್ಟೆ ಎರಡನ್ನೂ ನೀಡಲು ಸೂಚಿಸಲಾಗಿದೆ’ ಎನ್ನುತ್ತಾರೆ ಅವರು.

ಅಂಗನವಾಡಿ ಕಾರ್ಯಕರ್ತೆಯರು ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಅವರಿಗೆ ಪೌಷ್ಟಿಕ ಆಹಾರ ಕೊಡಲು ಹಾಗೂ ಸರಿಯಾದ ಮಾರ್ಗದರ್ಶನ ನೀಡಲು ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಜನವರಿ ಮೊದಲ ವಾರದಲ್ಲಿ ಔರಾದ್‌ನ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ್ದ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಕೇಂದ್ರಗಳಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಮಾತೃಪೂರ್ಣ ಯೋಜನೆಯ ಪ್ರಗತಿ ಸಮರ್ಪಕವಾಗಿರದ ಬಗೆಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯವೈಖರಿ ಬಗೆಗೆ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವಾಗುತ್ತಲೇ ಇರುತ್ತದೆ. ಎರಡು ತಿಂಗಳ ಹಿಂದೆ ಒಬ್ಬ ಅಧಿಕಾರಿಯನ್ನು ಅಮಾನತುಗೊಳಿಸಲಾಗಿತ್ತು. ಆದರೆ ಇಲಾಖೆಯಲ್ಲಿ ಸುಧಾರಣೆ ಕಂಡು ಬಂದಿಲ್ಲ.

‘ಮಕ್ಕಳ ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ಪತ್ತೆಯಾಗುವ ಅಪೌಷ್ಟಿಕ ಮಕ್ಕಳನ್ನು ಎನ್‌ಆರ್‌ಸಿಯಲ್ಲಿ ದಾಖಲಿಸುವ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿಲ್ಲ. ಅಂಗನವಾಡಿ ಹಾಗೂ ಆಸ್ಪತ್ರೆಯಲ್ಲಿ ಉಚಿತ ಊಟ, ಟಾನಿಕ್‌ ಹಾಗೂ ಇತರೆ ಔಷಧಿ ಸೌಲಭ್ಯಗಳ ದುರುಪಯೋಗ ಆಗುತ್ತಿದೆ’ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಕವಿತಾ ಹುಷಾರೆ ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.