ADVERTISEMENT

ಅಭಿವೃದ್ಧಿ ಪ್ರಸ್ತಾಪಕ್ಕೆ ಅನುಮೋದನೆಗೆ ವಿಳಂಬ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2012, 7:20 IST
Last Updated 6 ಅಕ್ಟೋಬರ್ 2012, 7:20 IST

ಬೀದರ್: `ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡಬಾರದು. ಕುರಿಕೋಟಾ ಸೇತುವೆ ಸೇರಿ ಹೈದರಾಬಾದ್ ಕರ್ನಾಟಕದ ಭಾಗದ ಅಭಿವೃದ್ಧಿ ಕುರಿತು ತಾವು ಸಲ್ಲಿಸಿದ ಪ್ರಸ್ತಾಪಗಳಿಗೆ ಅನುಮೋದನೆ ನೀಡಲು ರಾಜಕೀಯ ಕಾರಣಗಳಿಗಾಗಿ ವಿಳಂಬ ಮಾಡಲಾಗುತ್ತಿದೆ~ ಎಂದು ನೈಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ ಶುಕ್ರವಾರ ಆಪಾದಿಸಿದರು.

ತಮ್ಮ63ನೇ ಜನ್ಮದಿನ ನಿಮಿತ್ತ ನಗರದಲ್ಲಿ ನಡೆದ ಸರ್ವಧರ್ಮ ಸಮ್ಮೇಳನ, ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನೀಡಲಾದ ಅಭಿನಂದನೆ ಸ್ವೀಕರಿಸಿದ ಮಾತನಾಡಿದ ಅವರು, `ಆದರೆ, ಅಭಿವೃದ್ಧಿ ವಿಷಯದಲ್ಲಿ ತಮ್ಮ ನಿಲುವು ಅಚಲವಾಗಿದ್ದು, ಹೋರಾಟ ನಡೆಸುತ್ತೇನೆ. ಎರಡು ವರ್ಷದಲ್ಲಿ ಈ ಭಾಗದ ಚಿತ್ರಣ ಬದಲಿಸುತ್ತೇನೆ~ ಎಂದರು.

ಅಭಿವೃದ್ಧಿಗೆ ಅಧಿಕಾರಿಗಳ ಧೋರಣೆಯೂ ಎಂದು ಟೀಕಿಸಿದ ಅವರು, ಮುಖ್ಯ ಕಾರ್ಯದರ್ಶಿಗಳಿಗೆ ಅಭಿವೃದ್ಧಿ ಚಿಂತನೆಯಿಲ್ಲ. ಕಾರಿನಲ್ಲಿ ಓಡಾಡುವ ಅವರಿಗೆ ಸಮಸ್ಯೆಯ ಅರಿವು ಇರುವುದಿಲ್ಲ. ಅಧಿಕಾರಿಗಳ ವರ್ಗವನ್ನು ಕೆಲ ಕಾಲ ಜೋಪಡಿಯಲ್ಲಿ ಇರಿಸಬೇಕು. ಆಗಲಾದರೂ ಸಾಮಾನ್ಯ ಜನರ ಕಷ್ಟ ಅರಿವಿಗೆ ಬರಬಹುದು ಎಂದು ಟೀಕಿಸಿದರು.

ಬೀದರ್ ಸೇರಿದಂತೆ ರಾಜ್ಯದ ಪ್ರಮುಖ ಜಿಲ್ಲೆಗಳ ಕೇಂದ್ರ ಸ್ಥಾನವನ್ನು ಬೆಂಗಳೂರು ಜೊತೆಗೆ ಸಂಪರ್ಕ ಒದಗಿಸುವ ನೈಸ್ ರಸ್ತೆ ಅಭಿವೃದ್ಧಿ ನಮ್ಮ ಗುರಿ. ಈ ಕುರಿತು ಪ್ರಸ್ತಾಪ ಸಲ್ಲಿಸಿ ವರ್ಷಗಳೇ ಕಳೆದಿವೆ. ಇದು, ಜಾರಿಗೆ ಬಂದರೆ ಬೀದರ್‌ನಿಂದ ಬೆಂಗಳೂರಿಗೆ 6 ಗಂಟೆಯಲ್ಲಿ ತೆರಳಬಹುದು ಎಂದು ಹೇಳಿಕೊಂಡರು.

ಆದರೆ, ಈ ಯೋಜನೆಗೆ ಅನುಮೋದನೆ ನೀಡಿಲ್ಲ. ಬೀದರ್-ಗುಲ್ಬರ್ಗ ನಡುವಣ ಕುರಿಕೋಟಾ ಸೇತುವೆ ಹಾಳಾಗಿ ತಿಂಗಳುಗಳೇ ಕಳೆದಿವೆ. ಇದಕ್ಕೂ ಅನುಮತಿ ನೀಡಿಲ್ಲ. ಹಣ ಮಾಡುವ ಉದ್ದೇಶವಿದೆ ಎನ್ನುತ್ತಾರೆ. ಬೇಕಿದ್ದರೆ ನಾನು ಹಣ, ಭೂಮಿ ಮಾಡುವುದಿಲ್ಲ ಎಂದ ರಕ್ತದಲ್ಲಿ ಬರೆದುಕೊಡುತ್ತೇನೆ. ನನಗೆ ಅಭಿವೃದ್ಧಿ ಮುಖ್ಯ. ಹಣ, ಅಧಿಕಾರದ ಆಸೆ ನನಗಿಲ್ಲ ಎಂದರು.

ಕೃಷಿ ಉತ್ಪನ್ನಗಳಿಗೂ ಉತ್ತಮ ಬೆಲೆ ಸಿಗಬೇಕು ಎಂದು ಒತ್ತಾಯಿಸಿದ ಅವರು, ಕಬ್ಬಿಗೆ ಆರಂಭದಲ್ಲಿಯೇ ಬೆಲೆ ಘೋಷಿಸಬೇಕು ಎಂದು ಸಂಜಯ ಖೇಣಿ ಅಧ್ಯಕ್ಷರಾಗಿ ಬಿಎಸ್‌ಎಸ್‌ಕೆ ಕಾರ್ಖಾನೆಗೆ ತಾವು ಸಲಹೆ ನೀಡಿರುವುದಾಗಿಯೂ ಹೇಳಿದರು.

ಸಾಮೂಹಿಕ ವಿವಾಹ, ಸರ್ವಧರ್ಮ ಸಮ್ಮೇಳನ: ಇದೇ ಸಂದರ್ಭದಲ್ಲಿ ನಡೆದ ಸಾಮೂಹಿಕ ವಿವಾಹ ಸಂದರ್ಭದಲ್ಲಿ ಸುಮಾರು 35 ಜೋಡಿಗಳು ದಾಂಪತ್ಯ ಬದುಕಿಗೆ ಹೆಜ್ಜೆಇಟ್ಟರು. ಮದುವೆಗೆ ಬೇಕಾದ ವಯಸ್ಸು ಆಗಿಲ್ಲ ಎಂದು ದಾಖಲೆ ಪರಿಶೀಲಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಒಂದು ಜೋಡಿಯನ್ನು ವಾಪಸು ಕಳುಹಿಸಿದರು.

ಸರ್ವಧರ್ಮ ಸಮ್ಮೇಳನಕ್ಕಾಗಿ ವಿವಿಧ ಜಿಲ್ಲೆಗಳಿಂದ ಸ್ವಾಮೀಜಿಗಳು ಆಗಮಿಸಿದ್ದು, ಪ್ರಮುಖ ಮಠಗಳನ್ನು ಪ್ರತಿನಿಧಿಸಿದ ಸ್ವಾಮೀಜಿಗಳು ಖೇಣಿ ಅವರಿಗೆ ಶುಭಕೋರಿದರು.

ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ದಿಗಂಬರ ಜೈನ ಮಠದ ಚಾರುಕೀರ್ತಿ ಪಂಡಿತಾಚಾರ್ಯ ಶ್ರೀಗಳು, ಭಾಲ್ಕಿ ಮಠದ ಬಸವಲಿಂಗ ಪಟ್ಟದ್ದೇವರು, ರಾಷ್ಟ್ರೀಯ ಬಸವ ದಳದ ಮಾತೆ ಮಹಾದೇವಿ, ಸೈಯದ್ ಅಜಿ ನಿಜಾಮಿ, ಮೌಲಾನಾ ಅತಹಜ್ ಇಬ್ರಾಹಿಂ,ಅಮೃತಸರದ ಜಗತಾರ್ ಸಿಂಗ್ ಅಲ್ಲದೆ, ವಿವಿಧ ಜಿಲ್ಲೆಗಳ ಮಠಾಧೀಶರು ಭಾಗವಹಿಸಿದ್ದರು. ಸಂಸದ ಎಚ್. ವಿಶ್ವನಾಥ್, ಸಚಿವರಾದ ರೇಣುಕಾಚಾರ್ಯ, ರಾಜುಗೌಡ, ಶಾಸಕರಾದ ರಹೀಂ ಖಾನ್, ನಟರಾದ ರಾಧಿಕಾ, ದ್ವಾರಕೀಶ್ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.