ADVERTISEMENT

ಆಕಾಶವಾಣಿ ಹಬ್ಬ ಜನಸಾಮಾನ್ಯರ ಹಬ್ಬ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2012, 6:15 IST
Last Updated 16 ಮಾರ್ಚ್ 2012, 6:15 IST

ಬಸವಕಲ್ಯಾಣ: ಆಕಾಶವಾಣಿ ಎಂದರೆ ಸಾಮಾನ್ಯ ಜನರ ದನಿ. ಆದ್ದರಿಂದ ಗುಲ್ಬರ್ಗ ಆಕಾಶವಾಣಿಗೆ 45 ವರ್ಷಗಳಾದ ಹಿನ್ನೆಲೆಯಲ್ಲಿ ಆಕಾಶವಾಣಿ ಕೇಂದ್ರದಿಂದ ಹಮ್ಮಿಕೊಂಡಿರುವ ಹಬ್ಬ ಜನಸಾಮಾನ್ಯರ ಹಬ್ಬವಾಗಿದೆ ಎಂದು ಸುನಂದಾಮೂರ್ತಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಹಾರಕೂಡ ಹಿರೇಮಠದಲ್ಲಿ ಮಂಗಳವಾರ ಸಂಜೆ ಆಕಾಶವಾಣಿ ಹಬ್ಬದ ಅಂಗವಾಗಿ ಹಮ್ಮಿಕೊಂಡ ಕೃಷಿ ವಿಚಾರವಾಣಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿವಿಧ ವಿಷಯಗಳನ್ನು ತಿಳಿಯಲು ರೇಡಿಯೋ ಸುಲಭ ಸಾಧನವಾಗಿದ್ದು ಅದನ್ನು ಪ್ರತಿಯೊಬ್ಬರ ಮನೆಯಲ್ಲಿಡಬೇಕು ಎಂದರು.

ಬೀದರ ಪಶು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಬಿ.ವಿ.ಶಿವಪ್ರಕಾಶ ಜಾನುವಾರುಗಳಲ್ಲಿ ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಬಗ್ಗೆ ಮಾತನಾಡಿ ಪಶು ಸಂಪತ್ತು ರೈತನ ನಿಜವಾದ ಸಂಪತ್ತಾಗಿದೆ. ಅದನ್ನು ಸಂರಕ್ಷಿಸಬೇಕಾಗಿದೆ ಎಂದರು. ಉದ್ಘಾಟನೆ ನೆರವೆರಿಸಿದ ಚೆನ್ನವೀರ ಶಿವಾಚಾರ್ಯರು ಮಾತನಾಡಿ ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು. ಆದ್ದರಿಂದ ಕೃಷಿಕರ ಮತ್ತು ಕೃಷಿ ಕಾರ್ಯದ ಕಡೆ ಹೆಚ್ಚಿನ ಲಕ್ಷ ವಹಿಸಬೇಕಾಗಿದೆ ಎಂದರು.

ಆಕಾಶವಾಣಿಯು ಕಲೆ, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಕ್ಕೆ ಮಹತ್ವ ಕೊಟ್ಟಿದೆ. ಕಲಾಕಾರರನ್ನು ಪೋಷಿಸುತ್ತಿದೆ. ಆದ್ದರಿಂದ ಪ್ರತಿದಿನ ಆಕಾಶವಾಣಿ ಕಾರ್ಯಕ್ರಮಗಳನ್ನು ಆಲಿಸಬೇಕು ಎಂದು ಹೇಳಿದರು.
ನಿವೃತ್ತ ಕೃಷಿ ವಿಜ್ಞಾನಿ ಡಾ.ಶಾಮಸುಂದರ ಜೋಶಿ, ಬಿ.ವಿ.ಕುಲಕರ್ಣಿ ಗುಲ್ಬರ್ಗ, ಕುಪೇಂದ್ರ ಶಾಸ್ತ್ರೀ, ಪ್ರಗತಿಪರ ರೈತ ಶರಣಬಸಪ್ಪ ಪಾಟೀಲ ಮಾತನಾಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ ಉಪಸ್ಥಿತರಿದ್ದರು. ಅಕ್ಕಮಹಾದೇವಿ ಶಿವಕುಮಾರ ಮತ್ತು ಶೈಲಜಾ ಪಾಟೀಲ ಅವರಿಂದ ಸಂಪ್ರದಾಯದ ಹಾಡುಗಳನ್ನು ಹಾಡಲಾಯಿತು. ರಾಜೇಂದ್ರ ನಿರೂಪಿಸಿದರು. ಸುತ್ತಲಿನ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.