ADVERTISEMENT

ಆಸ್ಪತ್ರೆಗೆ ಅಧಿಕಾರಿಗಳ ದಿಢೀರ್ ಭೇಟಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2012, 9:10 IST
Last Updated 19 ಏಪ್ರಿಲ್ 2012, 9:10 IST

ಔರಾದ್: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಮಣರೆಡ್ಡಿ ಮತ್ತು ಇತರೆ ಹಿರಿಯ ಅಧಿಕಾರಿಗಳು ಮಂಗಳವಾರ ಇಲ್ಲಿಯ ಸಾರ್ವಜನಿಕ ಆಸ್ಪತ್ರೆಗೆ ಆಕಸ್ಮಿಕವಾಗಿ ಭೇಟಿ ನೀಡಿ ಪರಿಶೀಲಿಸಿದರು.ತಾಲ್ಲೂಕಿನ ಬರಪೀಡಿತ ಗ್ರಾಮಗಳ ವೀಕ್ಷಣೆ ನಂತರ ನೇರವಾಗಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಕುಂದು ಕೊರತೆ ಆಲಿಸಿದರು.

ಆಸ್ಪತ್ರೆ ಕಟ್ಟಡ ಸೇರಿದಂತೆ ಆರೋಗ್ಯ ಸೌಲಭ್ಯಗಳಿಗೆ ಹೆಚ್ಚಿನ ಕೊರತೆ ಇಲ್ಲ. ಆದರೆ ತಜ್ಞ ವೈದ್ಯರು ಸೇರಿದಂತೆ ಸಿಬ್ಬಂದಿ ಕೊರತೆಯಿಂದ ಜನರಿಗೆ ಉತ್ತಮ ಸೇವೆ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಆಡಳಿತ ವೈದ್ಯಾಧಿಕಾರಿ ಪ್ರವೀಣಕುಮಾರ ಮಾಹಿತಿ ನೀಡಿದರು.

ಈ ಆಸ್ಪತ್ರೆಯಲ್ಲಿ ಕೆಲಸ ಮಾಡಬೇಕಾದ 11 ವೈದ್ಯರ ಪೈಕಿ ಆರು ಜನ ಮಾತ್ರ ಇದ್ದಾರೆ. ಎರಡೂ ದಂತ ವೈದ್ಯರ ಹುದ್ದೆ ಖಾಲಿ ಇದ್ದ ಕಾರಣ ರೋಗಿಗಳು ಬಂದು ಇಲ್ಲಿ ಕಿರಿಕಿರಿ ಮಾಡುತ್ತಿದ್ದಾರೆ ಎಂದು ಹೇಳಿದರು. 18 ನರ್ಸ್‌ಗಳ ಪೈಕಿ ಮೂವರು ಮಾತ್ರ ಕೆಲಸ ಮಾಡುತ್ತಿದ್ದು, ಇಷ್ಟು ಹುದ್ದೆಗಳು ಖಾಲಿ ಇದ್ದರೆ ಜನರಿಗೆ ಹೇಗೆ ಸೇವೆ ಕೊಡಲು ಸಾಧ್ಯ ಎಂದು ಉಸ್ತುವಾರಿ ಕಾರ್ಯದರ್ಶಿಗಳು ಅಲ್ಲಿದ್ದ ಹಿರಿಯ ಅಧಿಕಾರಿಗಳ ಎದುರು ಅಸಮಾಧಾನ ವ್ಯಕ್ತಪಡಿಸಿದರು.

ವೈದ್ಯರು ಸೇರಿದಂತೆ ತೀರಾ ಅನಿವಾರ್ಯ ಇರುವ ಹುದ್ದೆ ತಂಬಲು ಸರ್ಕಾರಕ್ಕೆ ಬರೆಯಬೇಕು. ಈ ವಿಷಯದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳು ಕಾಳಜಿ ವಹಿಸುವಂತೆ ಸಲಹೆ ನೀಡಿದರು. ಯಾವುದೇ ಕಾರಣಕ್ಕೂ ರೋಗಿಗಳಿಗೆ ತೊಂದರೆಯಾಗಬಾರದು ಎಂದು ಸೂಚಿಸಿದರು.
 ನಂತರ ಪ್ರವಾಸಿ ಮಂದಿರದಿಂದ ಉದಗೀರ್ ರಸ್ತೆಗೆ ಸಂಪರ್ಕಿಸುವ ರಿಂಗ್ ರಸ್ತೆ ಮತ್ತು ಅಲ್ಲಿನ ಸೇತುವೆ ಕಾಮಗಾರಿ ವೀಕ್ಷಿಸಿದರು. ಜಿಲ್ಲಾಧಿಕಾರಿ ಸಮೀರ್ ಶುಕ್ಲ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಅನೀಸ್ ಅಹಮ್ಮದ್, ಹಿರಿಯ ವೈದ್ಯ ಮಾರ್ತಂಡ್ ಕಾಶೆಂಪುರಕರ್, ತಹಸೀಲ್ದಾರ್ ಶಿವಕುಮಾರ ಶೀಲವಂತ, ತಾಲ್ಲೂಕು ಪಂಚಾಯ್ತಿ ಮುಖ್ಯಾಧಿಕಾರಿ ಅಶೋಕ ಕಾಳಗಿ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಮಹಮ್ಮದ್ ಯೂಸುಫ್ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.