ADVERTISEMENT

ಈ ರಸ್ತೆಗೆ ಕಾಯಕಲ್ಪ ಯಾವಾಗ?

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 9:05 IST
Last Updated 7 ಸೆಪ್ಟೆಂಬರ್ 2011, 9:05 IST

ಜನವಾಡ: ಬೀದರ್ ತಾಲ್ಲೂಕಿನ ಚಿಮಕೋಡ್‌ನಿಂದ ಚಿಲ್ಲರ್ಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಯಕಲ್ಪದ ನಿರೀಕ್ಷೆಯಲ್ಲಿದೆ.

ಚಿಮಕೋಡ್- ಚಿಲ್ಲರ್ಗಿ ರಸ್ತೆಯ ಉದ್ದ ಸುಮಾರು 5 ಕಿ.ಮೀ. ಆಗಿದೆ. ಆದರೆ, ರಸ್ತೆ ಹದಗೆಟ್ಟು ಹೋಗಿದ್ದರಿಂದ ಸಂಚಾರ ದುರಸ್ತವಾಗಿ ಪರಿಣಮಿಸಿದೆ.

ಚಿಮಕೋಡ್ ಮತ್ತು ಚಿಲ್ಲರ್ಗಿ ಮಧ್ಯೆ ಇರುವ ಡಾಂಬರು ರಸ್ತೆ ಅಲ್ಲಲ್ಲಿ ಕಿತ್ತು ಹೋಗಿದೆ. ಹೀಗಾಗಿ ಪ್ರಯಾಣ ಆಯಾಸಕರವಾಗಿದೆ.

ಮಳೆಯಿಂದಾಗಿ ರಸ್ತೆ ಹಾಳಾಗಿ ಹೋಗಿದೆ. ರಸ್ತೆಯ ನಡುವೆ ಅಲ್ಲಲ್ಲಿ ತಗ್ಗು ಗುಂಡಿಗಳು ನಿರ್ಮಾಣ ಆಗಿವೆ. ಹೀಗಾಗಿ ಈ ಮಾರ್ಗದಲ್ಲಿ ವಾಹನಗಳು ಕುಂಟುತ್ತಾ ಸಾಗಬೇಕಾದ ಪರಿಸ್ಥಿತಿ ಉಂಟಾಗಿದೆ.

ಕೆಲ ವರ್ಷಗಳಿಂದ ಕಿತ್ತು ಹೋಗಿರುವ ಸ್ಥಿತಿಯಲ್ಲಿ ಇರುವ ರಸ್ತೆಯಲ್ಲಿ ಗುಂಡಿ ತುಂಬುವ ಅಥವಾ ದುರಸ್ತಿ ಕೆಲಸ ನಡೆದಿಲ್ಲ. ಕೆಲ ಕಡೆಗಳಲ್ಲಂತೂ ದೊಡ್ಡ ಗಾತ್ರದ ತಗ್ಗುಗಳು ಬಿದ್ದಿವೆ. ಇದರಿಂದಾಗಿ ಅಪಘಾತಗಳು ಕೂಡ ನಡೆದಿದೆ. ವಾಹನ ಸವಾರರು ಬಿದ್ದು ಸಂಕಟ ಅನುಭವಿಸಿದ್ದಾರೆ ಎಂದು ತಿಳಿಸುತ್ತಾರೆ ನಾಗರಿಕರು.|

ರಾತ್ರಿ ಹೊತ್ತು ಈ ರಸ್ತೆಯಲ್ಲಿ ಸಂಚರಿಸಬೇಕಾದರೆ ಮೈಯೆಲ್ಲ ಕಣ್ಣಾಗಿಸಿಕೊಳ್ಳಬೇಕಾಗುತ್ತದೆ. ಎಲ್ಲಿ ಯಾವಾಗ ತಗ್ಗು- ಗುಂಡಿಗಳು ಪ್ರತ್ಯಕ್ಷ ಆಗುತ್ತವೆಯೋ ಹೇಳಲಾಗದು ಎನ್ನುತ್ತಾರೆ.

ರಸ್ತೆಯ ದುಸ್ಥಿತಿ ಇದಾದರೆ ಇನ್ನು ರಸ್ತೆಯ ಎರಡು ಬದಿಗಳಲ್ಲಿ ಮುಳ್ಳು ಕಂಟಿಗಳು ಕೂಡ ಬೆಳೆದಿವೆ. ಕೆಲ ಕಡೆ ರಸ್ತೆಯ ಮೇಲೆಯೇ ಜೋತಾಡುತ್ತಿವೆ. ಹೀಗಾಗಿ ಮುಳ್ಳುಗಳು ತಾಗುವ ಭೀತಿಯು ಇರುತ್ತದೆ ಎಂದು ಹೇಳುತ್ತಾರೆ.

ಮುಳ್ಳು ಕಂಟಿಗಳು ಅನೇಕ ಸ್ಥಳಗಳಲ್ಲಿ ವ್ಯಾಪಕವಾಗಿ ಬೆಳೆದಿವೆ. ದ್ವಿಚಕ್ರ ವಾಹನ ಸವಾರರು ತೆರಳುವಾಗ ಮುಳ್ಳುಕಂಟಿಗಳ ಹಿಂದಿನಿಂದ ಒಮ್ಮಮ್ಮೆ ಕಾಡುಹಂದಿ, ಮೊಲ, ಬೆಕ್ಕುಗಳು ಏಕಾಏಕಿ ಎದುರಾಗುತ್ತವೆ ಎಂದು ಅಳಲು ತೋಡಿಕೊಳ್ಳುತ್ತಾರೆ.

ಚಿಲ್ಲರ್ಗಿಯಿಂದ ಜಾಂಪಾಡ್ ಮತ್ತು ಚಿಮಕೋಡ್‌ನಿಂದ ಬಸಂತಪುರ, ಗುಮ್ಮಾ ಕ್ರಾಸ್‌ನಿಂದ ಮಾಳೆಗಾಂವ್ ಹಾಗೂ ಗಾದಗಿಯಿಂದ ಖಾಜಾಪುರ ನಡುವಿನ ರಸ್ತೆಗಳ ಬದಿಯಲ್ಲಿಯು ಮುಳ್ಳುಕಂಟಿಗಳು ಬೆಳೆದಿದ್ದು, ವಾಹನ ಸವಾರರು ಸಮಸ್ಯೆ ಅನುಭವಿಸಬೇಕಾಗಿದೆ ಎಂದು ವಿವರಿಸುತ್ತಾರೆ. 

ಸಂಬಂಧಪಟ್ಟವರು ಕೂಡಲೇ ಚಿಮಕೋಡ್- ಚಿಲ್ಲರ್ಗಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ರಸ್ತೆಯ ಎರಡೂ ಬದಿಯಲ್ಲಿ ಬೆಳೆದು ನಿಂತಿರುವ ಮುಳ್ಳುಕಂಟಿಗಳನ್ನು ಕಡಿದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಚಿಲ್ಲರ್ಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ  ಶ್ರೀನಿವಾಸರೆಡ್ಡಿ ಚಿಲ್ಲರ್ಗಿ ಮತ್ತಿತರರು ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.