ADVERTISEMENT

ಉತ್ತಮ ಮಳೆ: ಮನೆ, ರಸ್ತೆಗಳಿಗೆ ಹಾನಿ

ಬಸವಕಲ್ಯಾಣ: ತುಂಬಿ ಹರಿದ ಬೆಣ್ಣೆತೊರಾ ನದಿ, ಐದು ಮನೆಗಳ ಗೋಡೆ ಕುಸಿತ

​ಪ್ರಜಾವಾಣಿ ವಾರ್ತೆ
Published 9 ಜೂನ್ 2018, 9:45 IST
Last Updated 9 ಜೂನ್ 2018, 9:45 IST
ಬಸವಕಲ್ಯಾಣ ತಾಲ್ಲೂಕಿನ ಹತ್ತರ್ಗಾ ಗ್ರಾಮದ ರಸ್ತೆ ಮಳೆ ನೀರಿನಿಂದ ಕೊಚ್ಚಿಕೊಂಡು ಹೋಗಿರುವುದು
ಬಸವಕಲ್ಯಾಣ ತಾಲ್ಲೂಕಿನ ಹತ್ತರ್ಗಾ ಗ್ರಾಮದ ರಸ್ತೆ ಮಳೆ ನೀರಿನಿಂದ ಕೊಚ್ಚಿಕೊಂಡು ಹೋಗಿರುವುದು   

ಬಸವಕಲ್ಯಾಣ: ತಾಲ್ಲೂಕಿನಲ್ಲಿ ಗುರುವಾರ ರಾತ್ರಿ ಮತ್ತು ಶುಕ್ರವಾರ ಬೆಳಗಿನ ಜಾವ ಸುರಿದ ಮಳೆಯಿಂದಾಗಿ ಹತ್ತರ್ಗಾ ಸಮೀಪದ ಬೆಣ್ಣೆತೊರಾ ನದಿ ತುಂಬಿ ಹರಿದಿದ್ದು, ಪಟ್ಟಣ ಮ ತ್ತು ಗ್ರಾಮೀಣ ಭಾಗದಲ್ಲಿನ ಕೆಲ ಮನೆಗಳ ಗೋಡೆಗಳು ಕುಸಿದು ಹಾನಿಯಾಗಿದೆ.

ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆ ಆಗಿದ್ದರಿಂದ ಬೆಣ್ಣೆತೊರಾ ನದಿಯಲ್ಲಿಯೂ ಹೆಚ್ಚಿನ ನೀರು ಹರಿಯಿತು. ಹೀಗಾಗಿ ತಾಲ್ಲೂಕಿನ ಶಿರಗುರ, ಬಟಗೇರಾವಾಡಿ, ಹತ್ತರ್ಗಾ, ಗಿಲಗಿಲಿ ಗ್ರಾಮಗಳ ವ್ಯಾಪ್ತಿಯ ಕೆಲ ಹೊಲಗಳಿಗೆ ನೀರು ನುಗ್ಗಿತು.

‘ನದಿ ನೀರು ನುಗ್ಗಿ ಕೆಲ ಜಮೀನುಗಳ ಮಣ್ಣು ಕೊಚ್ಚಿಕೊಂಡು ಹೋಗಿದೆ ಮತ್ತು ಹತ್ತರ್ಗಾ ಹಾಗೂ ಹಿಪ್ಪರ್ಗಾ ಮಧ್ಯದ ರಸ್ತೆ ಹಾಳಾಗಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಅಂಬಾರಾಯ ಬೆಳ್ಳೆ, ಭೀಮಾಶಂಕರ ಕಟ್ಟಿಮನಿ ತಿಳಿಸಿದ್ದಾರೆ.

ADVERTISEMENT

‘ಹತ್ತರ್ಗಾ ಗ್ರಾಮದಲ್ಲಿನ ಪಾರ್ವತಿ ಪರಮೇಶ್ವರ ಜಮಾದಾರ ಮತ್ತು ಬಸವರಾಜ ಶರಣಯ್ಯ ಸ್ವಾಮಿ ಅವರ ಮನೆಗಳ ಗೋಡೆಗಳು ಕುಸಿದಿವೆ. ಅಲ್ಲದೆ, ಕೆಲ ಮನೆಗಳಿಗೆ ಅಲ್ಪಸ್ವಲ್ಪ ಹಾನಿಯಾಗಿದೆ' ಎಂದು ಈರಣ್ಣ ಗಡಗೆ, ಗಂಗಾಧರ ಜಮಾದಾರ ಅವರು ಹೇಳಿದ್ದಾರೆ. ಮಿರಖಲ್ ಮತ್ತು ಹಣಮಂತವಾಡಿ ಹತ್ತಿರದ ನಾಲೆಯೂ ತುಂಬಿ ಹರಿದಿದ್ದರಿಂದ ಇಲ್ಲಿನ ರಸ್ತೆ ಸಂಚಾರ ಕೆಲಕಾಲ ಸ್ಥಗಿತವಾಗಿತು.

ಬಸವಕಲ್ಯಾಣ ಪಟ್ಟಣದ ಸತ್ಯನಾರಾಯಣ ಓಣಿ, ಕೈಕಾಡಿ ಓಣಿ, ತಾಜ್ ಕಾಲೊನಿಯಲ್ಲಿನ ಕೆಲ ಮನೆಗಳ ಸುತ್ತ ಮಳೆ ನೀರು ಸಂಗ್ರಹಗೊಂಡಿದೆ. ಜ್ಞಾನಪ್ರಿಯ ಪ್ರೌಢಶಾಲೆ ಹಿಂದಿನ ಮನೆಗಳಿಗೆ ಹೋಗಲು ದಾರಿ ಇಲ್ಲದಂತಾಗಿ ಸಾರ್ವಜನಿಕರು ಪರದಾಡಬೇಕಾಯಿತು. ನಾರಾಯಣಪುರ ಕ್ರಾಸ್‌ನಿಂದ ಬಸ್ ನಿಲ್ದಾಣಕ್ಕೆ ಮತ್ತು ತ್ರಿಪುರಾಂತದಿಂದ ಡಾ.ಅಂಬೇಡ್ಕರ್ ವೃತ್ತಕ್ಕೆ ಹೊಗುವ ರಸ್ತೆಯಲ್ಲಿ ಅಲ್ಲಲ್ಲಿ ನೀರು ನಿಂತು ತೊಂದರೆಯಾಯಿತು.

‘ಗಂಗಾ ಕಾಲೊನಿ ಮತ್ತು ಸಂಗಮೇಶ್ವರ ಕಾಲೊನಿಯಿಂದ ಚರಂಡಿಗಳಲ್ಲಿ ಹೆಚ್ಚಿನ ನೀರು ಹರಿದು ಬಂದು ತಮ್ಮ ಮನೆಯ ಸುತ್ತ ಸಂಗ್ರಹಗೊಂಡಿದ್ದರಿಂದ ಮನೆಗೆ ಹೋಗಲು ದಾರಿ ಇಲ್ಲದಂತಾಗಿದೆ’ ಎಂದು ಅಶೋಕ ಢಗಳೆ ಅಳಲು ತೋಡಿಕೊಂಡರು. ‘ತಾಲ್ಲೂಕಿನಲ್ಲಿ ಒಟ್ಟು 5 ಮನೆಗಳ ಗೋಡೆ ಕುಸಿದಿವೆ’ ಎಂದು ತಹಶೀಲ್ದಾರ್ ಶಾಂತಗೌಡ ತಿಳಿಸಿದ್ದಾರೆ.

‘ಸತ್ಯನಾರಾಯಣ ಒಣಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ರಸ್ತೆಗಳ ದುಸ್ಥಿತಿಯನ್ನೂ ಕಂಡಿದ್ದು, ಸಂಬಂಧಿತರಿಗೆ ಕ್ರಮಕ್ಕೆ ಸೂಚಿಸುತ್ತೇನೆ. ಉತ್ತಮ ಚರಂಡಿ ವ್ಯವಸ್ಥೆಗೆ ಪ್ರಯತ್ನಿಸಲಾಗುವುದು’ ಎಂದು ಶಾಸಕ ಬಿ.ನಾರಾಯಣರಾವ್ ತಿಳಿಸಿದ್ದಾರೆ.

ನಗರಸಭೆ ಮತ್ತು ತಾಲ್ಲೂಕು ಅಧಿಕಾರಿಗಳ ಸಭೆ ನಡೆಸಿ ಮಳೆ ಹಾನಿ ಮತ್ತು ಓಣಿಗಳಲ್ಲಿನ ಸಮಸ್ಯೆಗಳ ಬಗ್ಗೆ ಸಮೀಕ್ಷೆ ನಡೆಸಲು ಸೂಚಿಸಲಾಗುವುದು
ಬಿ.ನಾರಾಯಣರಾವ್, ಶಾಸಕ

ಮಾಣಿಕ ಆರ್.ಭುರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.