ADVERTISEMENT

ಕಂಗಳಿದ್ಯಾತಕೋ...ಕಾವೇರಿ ರಂಗನ ನೋಡದ

​ಪ್ರಜಾವಾಣಿ ವಾರ್ತೆ
Published 25 ಜನವರಿ 2011, 12:20 IST
Last Updated 25 ಜನವರಿ 2011, 12:20 IST

ಬೀದರ್:ಇದು ಕಿರಾಣಾ ಘರಾನಾದ ಮೇರುಗಾಯಕ ಪಂಡಿತ್ ಭೀಮಸೇನ ಜೋಷಿ ಅವರು ಬೀದರ್‌ನಲ್ಲಿ ಪ್ರಸ್ತುತ ಪಡಿಸಿದ್ದ ಹಾಡು. 1983ರಲ್ಲಿ ಬೀದರ್‌ನಲ್ಲಿ ಮೂರು ದಿನಗಳ ಕಾಲ ನಡೆದ ಹೈದರಾಬಾದ್ ಕರ್ನಾಟಕ ಸಂಗೀತ ಸಮ್ಮೇಳನದ ಮೊದಲ ದಿನ ಜೋಷಿ ಅವರು ಭೈರವಿ ಹಾಡಿದ್ದರು. ನಗರದ ‘ಸಂಗೀತ ಕಲಾ ಮಂಡಲ’ ಸಂಸ್ಥೆಯು ಏರ್ಪಡಿಸಿದ್ದ ಸಮ್ಮೇಳನದಲ್ಲಿ ಅದೇ ದಿನ ಪಂಡಿತ್ ಜಸ್‌ರಾಜ್ ಮತ್ತು ಪರ್ವಿನ್ ಸುಲ್ತಾನಾ ಗಾಯನ ಪ್ರಸ್ತುತ ಪಡಿಸಿದ್ದರು. ಹಿರಿಯರಾಗಿದ್ದ ಜೋಷಿ ಅವರಿಗೆ ‘ಭೈರವಿ’ ಹಾಡುವ ಸರದಿ ಬಂದಿತ್ತು. ಜೋಷಿಯವರ ಅಪ್ರತಿಮ ಗಾಯನವನ್ನು ಕೇಳಿದ್ದ ಸಂಗೀತ ಕಲಾ ಮಂಡಲದ ಈಗಿನ ಅಧ್ಯಕ್ಷ ರಾಜೇಂದ್ರಸಿಂಗ್ ಪವಾರ್ ಅವರು.

ಅದಾದ ಮೇಲೆ ಮತ್ತೊಮ್ಮೆ ಅಂದರೆ 1989ರಲ್ಲಿ ನಗರದ ರಾಘವೇಂದ್ರಮಠದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಭೀಮಸೇನ ಜೋಷಿ ತಮ್ಮ ಅದ್ಭುತ ಗಾಯನದ ಸೊಬಗು ಉಣಿಸಿದ್ದರು. ಸಂಗೀತ ಮಂಡಲದ ಸಂಸ್ಥಾಪಕರಾಗಿದ್ದ ಜಗಪಾಲಸಿಂಗ್ ಪವಾರ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಜೋಷಿ ಅವರು ಅದೇ ಕಾರಣಕ್ಕಾಗಿ ಬೀದರ್‌ಗೆ ಭೇಟಿ ನೀಡಿದ್ದರು. ‘ಕಳೆದ ವರ್ಷ ನಾನು ಅವರು ಪುಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಗಪಾಲ ಅವರ ಹೆಸರು ಹೇಳಿ ‘ಈಗ ಹೇಗಿದ್ದಾರೆ?’ ಎಂದು ಕೇಳಿದ್ದರು ಎಂದು ರಾಜೇಂದ್ರಸಿಂಗ್ ಪವಾರ್ ಅವರು ಮೆಲುಕು ಹಾಕುತ್ತಾರೆ.

‘ಕಳೆದ 44 ವರ್ಷಗಳಿಂದ ಜೋಷಿ ಅವರ ಸಂಗೀತ ಕೇಳುತ್ತ ಬಂದಿದ್ದೇನೆ’ ಎಂದು ಹೇಳುವ ಪವಾರ್ ಅವರು ‘1966ರಲ್ಲಿ ಹೈದರಾಬಾದ್‌ನ ವಿವೇಕವರ್ಧಿನಿ ಹೈಸ್ಕೂಲ್‌ನಲ್ಲಿ ಜೋಷಿ ಅವರು ಹಾಡಿದ್ದ ‘ದರ್ಬಾರಿ ಕಾನಡ’ ರಾಗ ಈಗಲೂ ನನ್ನ ಸ್ಮೃತಿ ಪಟಲದಿಂದ ಮರೆತುಹೋಗಿಲ್ಲ’ ಎಂದು ಸ್ವತಃ ಹಾರ್ಮೋನಿಯಂ ವಾದಕರಾಗಿರುವ ರಾಜೇಂದ್ರಸಿಂಗ್ ಮೆಲುಕು ಹಾಕುತ್ತಾರೆ.ಪವಾರ್ ಅವರ ಸಂಗೀತ ಕಲಾ ಮಂಡಲದ ಸಂಗ್ರಹದಲ್ಲಿನ ಕೆಲವು ಅಪರೂಪದ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ.

ಭೀಮಸೇನ್ ಜೋಶಿ ನಿಧನಕ್ಕೆ ವಾಲಿ ಶೋಕ

ಬೀದರ್: ಭಾರತರತ್ನ, ಸಂಗೀತ ಸಾಮ್ರಾಟ ಪಂಡಿತ್ ಭೀಮಸೇನ್ ಜೋಶಿ ಅವರ ನಿಧನಕ್ಕೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಬುವಾಲಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಅಪ್ಪಟ ಕನ್ನಡಿಗರಾಗಿದ್ದ ಜೋಶಿ ಅವರ ನಿಧನದಿಂದಾಗಿ ದೇಶ ಮತ್ತು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಭಾಗ್ಯದ ಲಕ್ಷ್ಮಿ ಬಾರಮ್ಮ, ಮಿಲೇ ಸುರ್ ಮೇರಾ ತುಮ್ಹಾರಾ ಸೇರಿದಂತೆ ಹಲವು ಜನಪ್ರಿಯ ಗೀತೆಗಳ ಮೂಲ ಜೋಶಿ ಅವರು ಎಲ್ಲರ ಮನಗೆದ್ದಿದ್ದರು ಎಂದು ತಿಳಿಸಿದ್ದಾರೆ.

ಭೀಮಸೇನ್ ಜೋಶಿ ಅವರ ಸ್ಮರಣಾರ್ಥವಾಗಿ ಕೆ.ಪಿ. ಶಿಕ್ಷಣ ಸಂಸ್ಥೆ, ಗ್ರಾಮ ಭಾರತಿ ಸಂಸ್ಕತಿ ಪ್ರತಿಷ್ಠಾನ ಹಾಗೂ ವಚನ ಕ್ರಾಂತಿ ಪತ್ರಿಕೆಗಳ ಸಂಯುಕ್ತ ಆಶ್ರಯದಲ್ಲಿ ಶೀಘ್ರದಲ್ಲಿಯೇ ರಾಜ್ಯ ಮಟ್ಟದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದ್ದಾರೆ.

ಗಾನಯೋಗಿ ಸಂಘ: ಗಾನ ಸಾಮ್ರಾಟ ಪಂಡಿತ್ ಭೀಮಸೇನ್ ಜೋಶಿ ಅವರ ನಿಧನದ ಹಿನ್ನೆಲೆಯಲ್ಲಿ ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘದಿಂದ ನಗರದಲ್ಲಿ ಸೋಮವಾರ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು.ಜೋಶಿ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಲಾಯಿತು. ಸಂಘದ ಅಧ್ಯಕ್ಷ ಪ್ರೊ. ಸಂಗಯ್ಯ ಕಲ್ಮಠ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.