ADVERTISEMENT

ಕಡ್ಡಾಯ ಹಾಜರಾತಿ: ಶಿಕ್ಷಕರಿಗೆ ಸೂಚನೆ

ಸಭೆಯಲ್ಲಿ ಶಾಸಕ ಬಿ.ನಾರಾಯಣರಾವ್ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 11:22 IST
Last Updated 19 ಜೂನ್ 2018, 11:22 IST
ಬಸವಕಲ್ಯಾಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ರಾಜಶೇಖರ ಪಾಟೀಲ, ಶಾಸಕ ಬಿ.ನಾರಾಯಣರಾವ್, ಯಶೋದಾ ರಾಠೋಡ, ಓಂಪ್ರಕಾಶ ಪಾಟೀಲ ಪಾಲ್ಗೊಂಡಿದ್ದರು
ಬಸವಕಲ್ಯಾಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ರಾಜಶೇಖರ ಪಾಟೀಲ, ಶಾಸಕ ಬಿ.ನಾರಾಯಣರಾವ್, ಯಶೋದಾ ರಾಠೋಡ, ಓಂಪ್ರಕಾಶ ಪಾಟೀಲ ಪಾಲ್ಗೊಂಡಿದ್ದರು   

ಬಸವಕಲ್ಯಾಣ: ‘ಶಿಕ್ಷಕರು ಶಾಲೆಗಳಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಕ್ರಮ ತೆಗೆದುಕೊಳ್ಳಬೇಕು’ ಎಂದು ಶಾಸಕ ಬಿ.ನಾರಾಯಣರಾವ್ ಸಲಹೆ ನೀಡಿದ್ದಾರೆ.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಶೇ 42 ರಷ್ಟು ಮಾತ್ರ ಫಲಿತಾಂಶ ಬಂದಿರುವುದು ಖುಷಿ ಕೊಡುವ ವಿಷಯವಲ್ಲ. ಇದಕ್ಕೆ ವಿದ್ಯಾರ್ಥಿಗಳ ನಿರಾಸಕ್ತಿ ಕಾರಣ ಅಥವಾ  ಶಿಕ್ಷಕರ ಬೇಜವಾಬ್ದಾರಿತನ ಕಾರಣ ಎಂಬುದನ್ನು ಕಂಡು ಹಿಡಿದು ಮುಂದೆ ಫಲಿತಾಂಶ ಸುಧಾರಣೆಗೆ ಪ್ರಯತ್ನಿಸಬೇಕು. ಇಲ್ಲಿ ಉತ್ತಮ ಶಿಕ್ಷಣ ದೊರಕುತ್ತಿಲ್ಲ ಎಂದು ಪಾಲಕರು ತಮ್ಮ ಮಕ್ಕಳನ್ನು ಮಂಗಳೂರು, ಬೆಂಗಳೂರಿನ ಶಾಲೆಗಳಿಗೆ ಕಳುಹಿಸುವುದನ್ನು ತಪ್ಪಿಸಬೇಕು. ಖಾಸಗಿ ಶಾಲೆಗಳಕ್ಕಿಂತ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರಕಬೇಕು’ ಎಂದರು.

ADVERTISEMENT

‘ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರು ಮತ್ತು ಸಕಲ ಸೌಲಭ್ಯಗಳು ಇದ್ದಾಗಲೂ ಮಹಾರಾಷ್ಟ್ರದ ಉಮರ್ಗಾ ಮತ್ತಿತರ ಆಸ್ಪತ್ರೆಗಳಿಗೆ ರೋಗಿಗಳನ್ನು ಕಳುಹಿಸಲಾಗುತ್ತಿದೆ. ಅಲ್ಲಿನ ಆಸ್ಪತ್ರೆಗಳಿಂದ ಕಮಿಷನ್ ಹಣ ಏನಾದರೂ ದೊರಕುತ್ತದೆಯೆ? ಇನ್ನು ಮುಂದೆ ಇದೇ ಪರಿಸ್ಥಿತಿ ಇದ್ದರೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.

‘ಅಧಿಕಾರಿಗಳು ಅಭಿವೃದ್ಧಿ ಕೆಲಸದಲ್ಲಿ ಜನಪ್ರತಿನಿಧಿಗಳಿಗೆ ಸಹಕರಿಸಬೇಕು. ಸುಳ್ಳು ಮಾಹಿತಿ ನೀಡಿ ಮೋಸ ಮಾಡಬಾರದು. ಪ್ರತಿ ತಾಲ್ಲೂಕು ಪಂಚಾಯಿತಿ ಕ್ಷೇತ್ರಕ್ಕೆ ₹ 5 ಲಕ್ಷ ಒದಗಿಸುವಂತೆ ಸಂಬಂಧಿತರಿಗೆ ಕೇಳಿಕೊಳ್ಳುತ್ತೇನೆ. ಸಚಿವ ರಾಜಶೇಖರ ಪಾಟೀಲರು ಸಹ ಇಲ್ಲಿನ ಅನುಭವ ಮಂಟಪಕ್ಕೆ ಅನುದಾನ ಒದಗಿಸಲು ಮತ್ತು ಕಟ್ಟಡದ ಶಂಕುಸ್ಥಾಪನೆಗೆ ರಾಷ್ಟ್ರಪತಿ ಅವರನ್ನು ಆಹ್ವಾನಿಸಲು ಪ್ರಯತ್ನಿಸಬೇಕು’ ಎಂದು ಕೇಳಿಕೊಂಡರು.

ಸಚಿವ ರಾಜಶೇಖರ ಪಾಟೀಲ ಸನ್ಮಾನ ಸ್ವೀಕರಿಸಿ ಮಾತನಾಡಿ, ‘ಮನೆ ವಿತರಣೆ ಅವ್ಯವಹಾರ ತಡೆಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಹಕರಿಸಬೇಕು. ಪಟ್ಟಣದಲ್ಲಿನ ಮತ್ತು ಗ್ರಾಮೀಣ ಭಾಗದಲ್ಲಿನ ರಸ್ತೆಗಳ ಸುಧಾರಣೆ ಕ್ರಮ ಕೈಗೊಳ್ಳಬೇಕು. ರಾಜೇಶ್ವರದಲ್ಲಿನ ₹ 50 ಲಕ್ಷದ ರಸ್ತೆ ಕಾಮಗಾರಿ ಶೀಘ್ರ ಆರಂಭಿಸಬೇಕು’ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಯಶೋದಾ ರಾಠೋಡ ಮಾತನಾಡಿ, ‘ತಾಲ್ಲೂಕು ಪಂಚಾಯಿತಿ ಸದಸ್ಯರಿಗೆ ಬರುವ ಅನುದಾನ ಸಾಲದಾಗಿದೆ. ಆದ್ದರಿಂದ ಇನ್ನೂ ₹ 5 ಲಕ್ಷ ಹೆಚ್ಚಿಗೆ ದೊರಕುವಂತೆ ಶಾಸಕರು ಪ್ರಯತ್ನಿ ಸಬೇಕು’ ಎಂದು ಮನವಿ ಮಾಡಿದರು.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಓಂಪ್ರಕಾಶ ಪಾಟೀಲ, ಕಾರ್ಯನಿರ್ವಹಣಾ ಅಧಿಕಾರಿ ವಿಜಯಕುಮಾರ ಮಡ್ಡೆ, ಸದಸ್ಯರಾದ ಗೋವಿಂದರಾವ್ ಸೋಮವಂಶಿ, ಗುರುನಾಥ ಸೋನಕೆ, ರಾಜೀವ ಢೋಲೆ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರಗತಿ ವರದಿ ವಾಚಿಸಿದರು.

ಸಚಿವರು ಮತ್ತು ಶಾಸಕರನ್ನು ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಸನ್ಮಾನಿಸಲಾಯಿತು.

ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜತೆಗೂಡಿ ಕೆಲಸ ನಿರ್ವಹಿಸಬೇಕು. ಸಮಸ್ಯೆಗಳಿಗೆ ಸ್ಪಂದಿಸದವರ ಮೇಲೆ ಕ್ರಮ ಅನಿವಾರ್ಯ
- ರಾಜಶೇಖರ ಪಾಟೀಲ, ಸಚಿವ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.