ADVERTISEMENT

ಕಮಲನಗರದಲ್ಲಿ ಮತ್ತೆ ಅರಳಿದ ಕಮಲ ವಿಜಯೋತ್ಸವ

​ಪ್ರಜಾವಾಣಿ ವಾರ್ತೆ
Published 6 ಜನವರಿ 2011, 10:25 IST
Last Updated 6 ಜನವರಿ 2011, 10:25 IST

ಕಮಲನಗರ: ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಮತ್ತೊಮ್ಮೆ ‘ಕಮಲ’ ಅರಳಿಸುವ ಮೂಲಕ ಕಮಲನಗರ ಕ್ಷೇತ್ರವು ಬಿಜಿಪಿಯ ಭದ್ರಕೋಟೆ ಎಂಬುದನ್ನು ಇಲ್ಲಿಯ ಮತದಾರರು ಸಾಬೀತು ಪಡಿಸಿದ್ದಾರೆ. ಬಿಜಿಪಿ ಅಭ್ಯರ್ಥಿ ನೀಲಮ್ಮಾ ಶಿವಾನಂದ ವಡ್ಡೆ ಅವರು ತಮ್ಮ ಸಮೀಪದ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ಸಂಗ್ರಾಮ್ ಅವರನ್ನು 2864 ಮತಗಳ ಅಂತರದಿಂದ ಪರಾಭವಗೊಳಿಸಿ, ವಿಜಯಮಾಲೆಯನ್ನು ಧರಿಸಿದ್ದಾರೆ.

ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ ಜಿಪಂ ಚುನಾವಣೆಯಲ್ಲಿ ಬಿಜೆಪಿ ಶಕ್ತಿಕೇಂದ್ರವೆಂದೇ ಜಿಲ್ಲೆಯಲ್ಲಿ ಪರಿಚಿತವಾದ ಕಮಲನಗರ ಕ್ಷೇತ್ರವನ್ನು ವಶ ಪಡಿಸಿಕೊಳ್ಳಲು ಕಾಂಗ್ರೆಸ್ ಮತ್ತೊಮ್ಮೆ ವಿಫಲವಾಗಿದೆ. ಜಿಲ್ಲೆಯಲ್ಲಿಯೇ ಪ್ರಭಾವಿ ಮಹಿಳೆ ಹಾಗೂ ಜಿಪಂ ಹಾಲಿ ಉಪಾಧ್ಯಕ್ಷೆ ಮೀನಾಕ್ಷಿ ಸಂಗ್ರಾಮ್ ಅವರು ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಫರ್ಧಿಸಿದ್ದು, ಕುತೂಹಲಕ್ಕೆ ಕಾರಣವಾಗಿತ್ತು. ಹೀಗಾಗಿ ಜಿಲ್ಲೆ ಜನತೆಯ ಚಿತ್ತ ಕಮಲನಗರದತ್ತ ಎನ್ನುವಂತಾಗಿತ್ತು.

ಆದರೆ ಬಿಜೆಪಿ ಅಭ್ಯರ್ಥಿ ನೀಲಮ್ಮಾ ಅವರ ಪತಿ ಶಿವಾನಂದ ವಡ್ಡೆ ಅವರ ವೈಯಕ್ತಿಕ ವರ್ಚಸ್ಸು, ಬಿಜೆಪಿ ಯುವ ಪಡೆಯ ಸಂಘಟಿತ ಕಾರ್ಯ ಹಾಗೂ ಶಾಸಕ ಪ್ರಭು ಚವಾಣ್ ಅವರ ಪ್ರಭಾವದಿಂದ ಜಯಭೇರಿ ಬಾರಿಸಿದ್ದಾರೆ. ಕಮಲನಗರ ತಾಪಂ ಕ್ಷೇತ್ರದಿಂದ ನೀಲಕಂಠರಾವ ಕಾಂಬಳೆ, ಮದನೂರ್ ತಾಪಂ ಕ್ಷೇತ್ರದಿಂದ ಶ್ರೀರಂಗ್ ಪರಿಹಾರ, ಸೋನಾಳ ತಾಪಂ ಕ್ಷೇತ್ರದಿಂದ ರಾಜೇಂದ್ರ ಪಾಟೀಲ ಬಿಜೆಪಿ ಅಭ್ಯರ್ಥಿಗಳಾಗಿ ಸ್ಫರ್ಧಿಸಿ ಜಯಗಳಿಸಿದ್ದಾರೆ.

ಗೆದ್ದ ವಿಷಯ ತಿಳಿಯುತ್ತಿದ್ದಂತೆ ಖುಷಿಗೊಂಡ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಇಲ್ಲಿನ ಬಸವೇಶ್ವರ ವೃತ್ತ, ಡಾ.ಚನ್ನಬಸವ ಪಟ್ಟದ್ದೇವರ ವೃತ್ತ, ಅಲ್ಲಂಪ್ರಭು ವೃತ್ತ ಹಾಗೂ ಅಕ್ಕಮಹಾದೇವಿ ವೃತ್ತಗಳಲ್ಲಿ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಿಜೆಪಿ ಕಾರ್ಯಕರ್ತರು ಹುಚ್ಚೆದ್ದು, ಕುಣಿದು ಕುಪ್ಪಳಿಸಿದರು. ಮುಖಂಡ ಪ್ರಕಾಶ ಟೊಣ್ಣೆ, ಬಸವರಾಜ ಪಾಟೀಲ, ನಾಗೇಶ ಪತ್ರೆ, ಶಿವಕುಮಾರ ಝುಲ್ಪೆ, ರವಿ ಮದನೂರ್, ಸಂತೋಷ ಬಿರಾದಾರ್, ಬಾಲಾಜಿ ತೇಲಂಗ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.