ADVERTISEMENT

ಕಾರ್ಮಿಕರ ಸೇವೆ ಮುಂದುವರೆಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 6:19 IST
Last Updated 21 ಡಿಸೆಂಬರ್ 2012, 6:19 IST
ಔರಾದ್: ಕಳೆದ ವರ್ಷ ಹೊರಗುತ್ತಿಗೆ ಆಧಾರದ ಮೇಲೆ ಇಲ್ಲಿಯ ಪಟ್ಟಣ ಪಂಚಾಯಿತಿಯಲ್ಲಿ ನೇಮಕಗೊಂಡ 16 ಕಾರ್ಮಿಕರ ಸೇವೆ ಮುಂದುವರೆಸುವಂತೆ ಅಖಿಲ ಕರ್ನಾಟಕ ಪದವೀಧರರ ಒಕ್ಕೂಟ ಆಗ್ರಹಿಸಿದೆ.

ಒಕ್ಕೂಟದ ಅಧ್ಯಕ್ಷ ಬಿ. ಪ್ರಲ್ಹಾದ್, ಉಪಾಧ್ಯಕ್ಷ ಬಸವರಾಜ ಯಡವೆ, ಶಿವಕುಮಾರ ಪಾಟೀಲ, ಪ್ರಧಾನ ಕಾರ್ಯದರ್ಶಿ ಗಣಪತಿ ಚಲವಾ ನೇತೃತ್ವದಲ್ಲಿ ಕಾರ್ಮಿಕರು ಬುಧವಾರ ತಹಸೀಲ್ದಾರ್ ಶಿವಕುಮಾರ ಶೀಲವಂತ ಅವರನ್ನು ಭೇಟಿ ಮಾಡಿ ಬೇಡಿಕೆ ಪತ್ರ ಸಲ್ಲಿಸಿದರು.

ಸಿಬ್ಬಂದಿ ಕೊರತೆ ಮತ್ತು ಸ್ವಚ್ಛತಾ ಕಾರ್ಯದ ಅನಿವಾರ್ಯತೆಯಿಂದಾಗಿ ಸರ್ಕಾರ ಹೊರ ಗುತ್ತಿಗೆ ಆಧಾರದ ಮೇಲೆ 2011-12ನೇ ಸಾಲಿಗೆ ಒಟ್ಟು 16 ಜನ ಕಾರ್ಮಿಕರನ್ನು ನೇಮಕ ಮಾಡಿಕೊಂಡಿದೆ. ಇವರಿಂದ ಪಟ್ಟಣದಲ್ಲಿ ನೈರ್ಮಲ್ಯ ಕಾಪಾಡುವುದು ಸೇರಿದಂತೆ ಅತ್ಯುತ್ತಮ ಕೆಲಸಗಳಾಗಿವೆ. ಈ ಹಿನ್ನೆಲೆಯಲ್ಲಿ 2012-13ನೇ ಸಾಲಿಗೂ ಈ ಕಾರ್ಮಿಕರ ಸೇವೆ ಬಳಸಿಕೊಳ್ಳುವುದು ಅವಶ್ಯ ಎಂದು ಜಿಲ್ಲಾ ಕಾರ್ಮಿಕ ಸೇವೆಗಳ ಸಹಕಾರ ಸಂಘ ಈಗಾಗಲೇ ಸರ್ವಾನುಮತದ ನಿರ್ಣಯ ಕೈಗೊಂಡಿದೆ. 

ಆದರೆ ಈ ಬಗ್ಗೆ ಇಲ್ಲಿಯ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳನ್ನು ವಿಚಾರಿಸಿದರೆ ನಮಗೆ ಜಿಲ್ಲಾಧಿಕಾರಿಯಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಕಡಿಮೆ ವೇತನದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಿರುವ ಈ 16 ಕಾರ್ಮಿಕರ ಸೇವೆ ಪಟ್ಟಣದ ನೈರ್ಮಲ್ಯ ಮತ್ತು ಇತರೆ ಕೆಲಸ ಕಾರ್ಯ ನಿರ್ವಹಿಸಲು ಅಗತ್ಯವಾಗಿದೆ. ಹೀಗಾಗಿ ಕೂಡಲೇ ಇವರ ಸೇವೆ ಮುಂದುರೆಸಲು ಸೂಚಿಸುವಂತೆ ಜಿಲ್ಲಾಧಿಕಾರಿಗಳ ಹೆಸರಿಗೆ ಬರೆದ ಮನವಿಪತ್ರದಲ್ಲಿ ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.