ADVERTISEMENT

ಕೃಷಿಯಲ್ಲಿ ಖುಷಿ ಕಂಡ ಜೀರ್ಗಾ ರೈತ

​ಪ್ರಜಾವಾಣಿ ವಾರ್ತೆ
Published 2 ಜುಲೈ 2017, 6:13 IST
Last Updated 2 ಜುಲೈ 2017, 6:13 IST
ಔರಾದ್ ತಾಲ್ಲೂಕಿನ ಜೀರ್ಗಾ ರೈತ ಶರಣಪ್ಪ ಬೇಲೂರೆ ಅವರು ಹೊಲದಲ್ಲಿ ತಯಾರಿಸಿದ ಎರೆಹುಳು ಗೊಬ್ಬರ ಘಟಕ (ಎಡಚಿತ್ರ) ಪೈಪ್ ಮೂಲಕ ಬೆಳೆಗಳಿಗೆ ಪೋಷಕಾಂಶ ಗೊಬ್ಬರ ಕೊಡುತ್ತಿರುವುದು
ಔರಾದ್ ತಾಲ್ಲೂಕಿನ ಜೀರ್ಗಾ ರೈತ ಶರಣಪ್ಪ ಬೇಲೂರೆ ಅವರು ಹೊಲದಲ್ಲಿ ತಯಾರಿಸಿದ ಎರೆಹುಳು ಗೊಬ್ಬರ ಘಟಕ (ಎಡಚಿತ್ರ) ಪೈಪ್ ಮೂಲಕ ಬೆಳೆಗಳಿಗೆ ಪೋಷಕಾಂಶ ಗೊಬ್ಬರ ಕೊಡುತ್ತಿರುವುದು   

ಔರಾದ್: ಬರದ ನಡುವೆಯೂ ತಾಲ್ಲೂಕಿನ ರೈತರೊಬ್ಬರು ಕೃಷಿಯಲ್ಲಿ ಖುಷಿ ಕಂಡುಕೊಂಡಿದ್ದಾರೆ. ತಾಲ್ಲೂಕಿನ ಜೀರ್ಗಾ (ಬಿ) ಗ್ರಾಮದ ಶರಣಪ್ಪ ಬೇಲೂರೆ ಅವರು ತಮ್ಮ ಎರಡೂವರೆ ಎಕರೆ ಜಮೀನು ಹನಿ ನೀರಾವರಿ ಪದ್ಧತಿಗೆ ಒಳಪಡಿಸಿ ಕೈತುಂಬ ಹಣ ಮಾಡಿಕೊಂಡಿದ್ದಾರೆ. ಈ ಹಣದಿಂದಲೇ ಒಬ್ಬ ಮಗನಿಗೆ ಬೆಂಗಳೂರಿನಲ್ಲಿ ಏರೋನಾಟಿಕ್ ಎಂಜಿನಿಯರಿಂಗ್ ಓದಿಸುತ್ತಿದ್ದಾರೆ. ಮತ್ತೊಬ್ಬ ಮಗ ಬೀದರ್‌ನಲ್ಲಿ ಬಿಎಸ್ಸಿ ಓದುತ್ತಿದ್ದರೆ ಮಗಳು ಪಿಯುಸಿ ವಿಜ್ಞಾನ ಓದುತ್ತಿದ್ದಾರೆ.

‘ನಮ್ಮ ತಂದೆಗೆ 40 ಎಕರೆ ಜಮೀನು. ಆದರೆ ಒಂದೂ ಹೊತ್ತಿನ ಕೂಳಿಗೂ ಪರದಾಡಬೇಕಿತ್ತು. ಈ ಕಾರಣ ನಾನು 5ನೇ ತರಗತಿ ಇರುವಾಗಲೇ ಶಾಲೆ ಬಿಟ್ಟು ಕೆಲಸಕ್ಕೆ ಸೇರಿದೆ. ಐದಾರು ವರ್ಷ ಚಾಲಕನಾಗಿ ಕೆಲಸ ಮಾಡಿ ಕುಟುಂಬದ ನಿರ್ವಹಣೆ ನೋಡಿಕೊಂಡೆ. ನಮ್ಮ ತಂದೆ ತೀರಿ ಹೋದ ನಂತರ ನನಗೆ ಆರು ಎಕರೆ ಜಮೀನು ಬಂತು.

ನಮ್ಮ ಗೆಳೆಯರೊಬ್ಬರ ಸಹಕಾರದಿಂದ ಕೊಳವೆ ಬಾವಿ ಕೊರೆದು ಎರಡೂವರೆ ಎಕರೆ ಜಮೀನು ಹನಿ ನೀರಾವರಿ ಪದ್ಧತಿಗೆ ಒಳಪಡಿಸಿದೆ. ಕೃಷಿ ಇಲಾಖೆ ನೆರವಿನಿಂದ ಎರೆಹುಳು ಗೊಬ್ಬರ ಘಟಕ ತಯಾರಿಸಿದೆ. ಇದರಿಂದ ನನಗೆ ತುಂಬಾ ಅನುಕೂಲವಾಯಿತು. ಎಕರೆಗೆ 60ರಿಂದ 70 ಟನ್ ಕಬ್ಬಿನ ಇಳುವರಿ ಬಂತು.

ADVERTISEMENT

ಇದೇ ಹೊಲದಲ್ಲಿ ಎಕರೆಗೆ 8–10 ಕ್ವಿಂಟಲ್ ಕಡಲೆ ಬೆಳೆದೆ. ಮಳೆ ಬರಲಿ, ಬರದೆ ಇರಲಿ ಇರುವ ಒಂದು ಕೊಳವೆ ಬಾವಿ ಸಹಾಯದಿಂದ ವರ್ಷಕ್ಕೆ ₹2 ಲಕ್ಷ ಆದಾಯ ಬರುತ್ತದೆ’ ಎಂದು ಶರಣಪ್ಪ ಬೇಲೂರೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

‘ನಾನು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡ ಆರಂಭದಲ್ಲಿ ಸ್ವಲ್ಪ ಕಷ್ಟ ಎನಿಸಿತು. ಆಗಾಗ ಕೃಷಿ ಇಲಾಖೆ ಮತ್ತು ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ಕೊಟ್ಟು ಮಾಹಿತಿ ಪಡೆದಾಗ ಸ್ವಲ್ಪ ಧೈರ್ಯ ಬಂತು. ಕಡಿಮೆ ಖರ್ಚು ಮತ್ತು ಇರುವ ನೀರಿನಲ್ಲಿ ಹೆಚ್ಚಿನ ಇಳುವರಿ ತೆಗೆಯುವ ಬಗ್ಗೆ ತಿಳಿದುಕೊಂಡೆ’ ಎನ್ನುತ್ತಾರೆ ಅವರು.

‘ಹನಿ ನೀರಾವರಿ ಜತೆ ರಸವಾರು ಪದ್ಧತಿ (ನೀರಿನ ಜತೆ ಪೈಪ್ ಮೂಲಕ ಪೋಷಕಾಂಶ ಗೊಬ್ಬರ ಪೂರೈಕೆ) ಅಳವಡಿಸಿಕೊಂಡ ಪರಿಣಾಮ ಹಚ್ಚಿನ ಅನುಕೂಲವಾಯಿತು. ಇದರಿಂದ ಸಮಯ ಉಳಿತಾಯ ಜತೆಗೆ ಕೂಲಿಕಾರರ ಹುಡುಕಾಟ ತಪ್ಪಿತು’ ಎಂದು ಶರಣಪ್ಪ ಅವರು ಕೃಷಿಯಲ್ಲಿ ಕಂಡುಕೊಂಡ ಅನುಭವ ಹಂಚಿಕೊಂಡರು.

ಇವರು ಕೃಷಿ ಜತೆಗೆ ತೋಟಗಾರಿಕೆ ಬೆಳೆಗಳ ಕಡೆಗೂ ಲಕ್ಷ್ಯ ನೀಡಿದ್ದಾರೆ. ಹೊಲದ ಬದು ಮೇಲೆ ಸುಮಾರು 50ಕ್ಕೂ ಹೆಚ್ಚು ಮಾವಿನ ಗಿಡ ಬೆಳೆದಿದ್ದಾರೆ. ಪ್ರತಿ ವರ್ಷ ₹20–30 ಸಾವಿರ ಮಾವು ಮಾರಾಟ ಮಾಡುತ್ತಾರೆ. ಹೊಲಕ್ಕೆ ಬೇಲಿಯಾಗಿ ಸಾಗುವಾನಿ ಮತ್ತಿತರೆ ಗಿಡಗಳು ನೆಟ್ಟಿದ್ದಾರೆ. ಇದರಿಂದಾಗಿ ಇಡೀ ಹೊಲದ ಪರಿಸರ ಹಚ್ಚ ಹಸಿರಿನಿಂದ ಕಂಗೊಳಿಸಿ ಪರಿಸರ ಪ್ರೇಮಿಗಳನ್ನು ಆಕರ್ಷಿಸುತ್ತಿದೆ.

* * 

ಜೀರ್ಗಾ ರೈತ ಶರಣಪ್ಪ ಬೇಲೂರೆ ಅವರು ತುಂಬಾ ಶ್ರಮ ಜೀವಿ. ಹೊಸ ಕೃಷಿ ಪದ್ಧತಿ ಅಳವಡಿಸಿಕೊಂಡು ಹೆಚ್ಚಿನ ಇಳುವರಿ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಾಣಿಕರಾವ ಶೇರಿಕಾರ
ಕೃಷಿ ಅಧಿಕಾರಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.