ADVERTISEMENT

ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 8:15 IST
Last Updated 20 ಜನವರಿ 2011, 8:15 IST

ಬೀದರ್: ಬೀದರ್ ಜಿಲ್ಲೆಗೆ ಅಲ್ಪಸಂಖ್ಯಾತರ ಮಹಿಳಾ ಸರ್ಕಾರಿ ವಸತಿ ನಿಲಯ ಮಂಜೂರು ಮಾಡಲಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಬಿ. ಅಬೂಬಕ್ಕರ್ ತಿಳಿಸಿದರು.

ಬೀದರ್‌ನಲ್ಲಿ ಇದೇ ಮೊದಲ ಬಾರಿಗೆ ಉದ್ಯೋಗಸ್ಥ ಅಲ್ಪಸಂಖ್ಯಾತರ ಮಹಿಳೆಯರಿಗಾಗಿ ವಸತಿ ನಿಲಯ ಮಂಜೂರು ಮಾಡಲಾಗಿದೆ. ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ವಸತಿ ನಿಲಯ ನಿರ್ಮಾಣವಾಗಲಿದೆ. ಶಾಹೀನ್ ಶಿಕ್ಷಣ ಸಂಸ್ಥೆ ಈ ವಸತಿ ನಿಲಯದ ನಿರ್ವಹಣೆ ಮಾಡಲಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಭೂರಹಿತ ಕೃಷಿ ಕಾರ್ಮಿಕರಿಗೆ ಭೂಮಿ ಖರೀದಿಸಲು ನಿಗಮದಿಂದ ಸಬ್ಸಿಡಿ ಒದಗಿಸಲಾಗುವುದು. ಕೃಷಿಕರಿಗೆ ಎರಡು ಎಕರೆ ಖುಷ್ಕಿ ಅಥವಾ 1 ಎಕರೆ ತರಿ ಭೂಮಿಯನ್ನು ಈ ಯೋಜನೆ ಅಡಿ ಖರೀದಿಸಲು ನೆರವು ನೀಡಲಾಗುವುದು. ಭೂಮಿ ಖರೀದಿಗೆ 2.5 ಲಕ್ಷ ರೂಗಳಲ್ಲಿ ಶೇ. 50 ಸಬ್ಸಿಡಿ ಹಾಗೂ ಉಳಿದ ಮೊತ್ತವನ್ನು ಶೇ.6 ರ ಬಡ್ಡಿದರದಲ್ಲಿ ಬ್ಯಾಂಕ್‌ನಿಂದ ಒದಗಿಸಲಾಗುವುದು. ಬೀದರ್ ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ 10 ಫಲಾನುಭವಿಗಳಿಗೆ ಈ ಯೋಜನೆ ಅಡಿ ಭೂಮಿ ಒದಗಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಅಲ್ಪಸಂಖ್ಯಾತರಿಗೆ ಎನ್‌ಐಐಟಿ ಮೂಲಕ ಬ್ಯಾಂಕಿಂಗ್ ತರಬೇತಿ ನೀಡುವ ಯೋಜನೆಯನ್ನು ನಿಗಮ ಆರಂಭಿಸಿದೆ. ತರಬೇತಿ ಪಡೆದವರಿಗೆ ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ನೇಮಕಾತಿಗೂ ನೆರವು ನೀಡಲಾಗುವುದು. ಈ ಯೋಜನೆಯ ಲಾಭವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಅರಿವು ಯೋಜನೆ ಅಡಿಯಲ್ಲಿ ಶಿಕ್ಷಣಕ್ಕಾಗಿ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಶೇ. 2ರ ಬಡ್ಡಿದರದಲ್ಲಿ ಸಾಲಸೌಲಭ್ಯ ನೀಡಲಾಗುತ್ತಿದೆ. ಬೀದರ್ ಜಿಲ್ಲೆಯಲ್ಲಿ 2009-10ನೇ ಸಾಲಿನಲ್ಲಿ ಈ ಯೋಜನೆ ಅಡಿ 598 ವಿದ್ಯಾರ್ಥಿಗಳಿಗೆ 81ಲಕ್ಷ ರೂ. ಸಾಲದ ನೆರವು ಒದಗಿಸಲಾಗಿದೆ. 2010-11ನೇ ಸಾಲಿನಲ್ಲಿ 588 ವಿದ್ಯಾರ್ಥಿಗಳಿಗೆ 88ಲಕ್ಷ ರೂ. ಸಾಲ ನೆರವು ಒದಗಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಕಳೆದ ಎರಡುವರೆ ವರ್ಷಗಳಲ್ಲಿ ಬೀದರ್ ಜಿಲ್ಲೆಯಲ್ಲಿ ನಿಗಮದ ವಿವಿಧ ಯೋಜನೆಗಳಿಂದ 4,365 ಫಲಾನುಭವಿಗಳಿಗೆ 7.30 ಕೋಟಿ ರೂ. ನೆರವು ಒದಗಿಸಲಾಗಿದೆ ಎಂದು ತಿಳಿಸಿದರು.ಎಲ್ಲ ಜಿಲ್ಲೆಗಳಲ್ಲಿ ನಿಗಮದ ಕಚೇರಿ ಆರಂಭಿಸಲಾಗಿದ್ದು, ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ನಿಗಮದ ಕಾರ್ಯ ಚಟುವಟಿಕೆಗಳನ್ನು ಕಂಪ್ಯೂಟರೀಕರಣ ಮಾಡಲಾಗುತ್ತಿದ್ದು, ಫೆಬ್ರುವರಿಯಿಂದ ಆನ್‌ಲೈನ್ ಮೂಲಕ ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.