ADVERTISEMENT

ಗಡಿ ಅಭಿವೃದ್ಧಿಗೆ ನಂಜುಂಡಪ್ಪ ಯೋಜನೆ ಹಣ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 10:25 IST
Last Updated 21 ಸೆಪ್ಟೆಂಬರ್ 2011, 10:25 IST

ಬಸವಕಲ್ಯಾಣ: ನಂಜುಂಡಪ್ಪ ವರದಿ ಅನುಷ್ಠಾನ ಯೋಜನೆಯಲ್ಲಿ ಗಡಿ ಅಂಚಿನ ಗ್ರಾಮಗಳಲ್ಲಿ ಸಂಪೂರ್ಣವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸೂಚಿಸಲಾಗಿದೆ ಎಂದು ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ತಿಳಿಸಿದರು.

ಮಂಗಳವಾರ ತಾಲ್ಲೂಕಿನಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳ ಪರಿಶೀಲನೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.

ನಂಜುಂಡಪ್ಪ ಯೋಜನೆ ವ್ಯಾಪ್ತಿಗೆ ಒಳಪಡುವ ಹಿಂದುಳಿದ 114 ತಾಲ್ಲೂಕುಗಳಲ್ಲಿ 40 ತಾಲ್ಲೂಕುಗಳು ಗಡಿ ಭಾಗದಲ್ಲಿ ಬರುತ್ತವೆ ಎಂದು ಹೇಳಿದರು. ಗಡಿ ಪ್ರಾಧಿಕಾರಕ್ಕೆ 100 ಕೋಟಿ ರೂಪಾಯಿ ಕೇಳಿದ್ದರೂ ಪ್ರಸಕ್ತ ಸಾಲಿನಲ್ಲಿ ಕೇವಲ 15 ಕೋಟಿ ರೂಪಾಯಿ ಹಣ ಒದಗಿಸಲಾಗಿದೆ. ಈಗಾಗಲೇ ರೂ. 9.50 ಕೋಟಿ ವೆಚ್ಚವಾಗಿದ್ದು ರೂ. 5 ಕೋಟಿ ಬಿಡುಗಡೆ ಆಗಬೇಕಾಗಿದೆ ಎಂದರು.

ತಾವು ಗುಲ್ಬರ್ಗ, ಬೀದರ ಜಿಲ್ಲೆಗಳ ಗಡಿ ಭಾಗದ ಶಾಲೆಗಳಿಗೆ ಭೇಟಿಕೊಟ್ಟಿದ್ದು ಎಲ್ಲೆಡೆ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಅತ್ಯಂತ ಕಡಿಮೆ ಬಂದಿರುವುದು ಕಂಡು ಬಂದಿದೆ. ಆದ್ದರಿಂದ ಶೇ 60 ರಷ್ಟಾದರೂ ಫಲಿತಾಂಶ ಬರುವಂತಾಗಲು ಪ್ರಯತ್ನಿಸಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹೇಳಿದ್ದೇನೆ. ಗಡಿ ಗ್ರಾಮಗಳ ಶಾಲೆಗಳಲ್ಲಿನ ಶಿಕ್ಷಕರ ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲು ಸೂಚಿಸಿದ್ದೇನೆ ಎಂದರು.

ಗಡಿ ಪ್ರಾಧಿಕಾರದಿಂದ ಬೀದರ ಜಿಲ್ಲೆಯಲ್ಲಿನ ಕೊಹಿನೂರನಲ್ಲಿ ಗ್ರಂಥಾಲಯ ಕಟ್ಟಡ, ಸಂತಪುರ ಮತ್ತು ಕಮಲನಗರದಲ್ಲಿ ಸಾಂಸ್ಕೃತಿಕ ಭವನ ನಿರ್ಮಿಸಲಾಗುತ್ತಿದೆ. ಕ್ರೀಡಾಂಗಣ, ಗರಡಿಮನೆ, ಬಯಲು ರಂಗಮಂದಿರ ನಿರ್ಮಾಣಕ್ಕೂ ಹಣ ಒದಗಿಸಲಾಗುತ್ತದೆ ಎಂದರು.

ಪರಿಶೀಲನೆ: ಕೊಹಿನೂರ್‌ನಲ್ಲಿನ ಗ್ರಂಥಾಲಯ ಕಟ್ಟಡ ಮತ್ತು ಮಂಠಾಳದಲ್ಲಿನ ಶಿಕ್ಷಕರ ವಸತಿ ಕಟ್ಟಡ ಕಾಮಗಾರಿಯನ್ನು ಬೆಲ್ಲದ ಪರಿಶೀಲಿಸಿದರು. ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಆಂಜನೇಯರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಚಪ್ಪ ವಾಲಿ, ತಹಸೀಲ್ದಾರ ಜಗನ್ನಾಥರೆಡ್ಡಿ, ಎನ್.ಆರ್.ಅಬಲೂರ್, ಎಚ್.ಆರ್.ಚಂದ್ರಶೇಖರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.