ADVERTISEMENT

ಗಮನ ಸೆಳೆದ ‘ಭಾರತ ಜಾಗೋ ಓಟ’

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 8:16 IST
Last Updated 12 ಸೆಪ್ಟೆಂಬರ್ 2013, 8:16 IST
ಸ್ವಾಮಿ ವಿವೇಕಾನಂದರ 150ನೇ ಜಯಂತಿ ವರ್ಷಾಚರಣೆ ಪ್ರಯುಕ್ತ ಬೀದರ್ ನಗರದಲ್ಲಿ ಬುಧವಾರ ನಡೆದ ‘ಭಾರತ ಜಾಗೋ ಓಟ’ದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡಿದ್ದರು
ಸ್ವಾಮಿ ವಿವೇಕಾನಂದರ 150ನೇ ಜಯಂತಿ ವರ್ಷಾಚರಣೆ ಪ್ರಯುಕ್ತ ಬೀದರ್ ನಗರದಲ್ಲಿ ಬುಧವಾರ ನಡೆದ ‘ಭಾರತ ಜಾಗೋ ಓಟ’ದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡಿದ್ದರು   

ಬೀದರ್: ಸ್ವಾಮಿ ವಿವೇಕಾನಂದರ 150ನೇ ಜಯಂತಿ ವರ್ಷಾಚರಣೆ ನಿಮಿತ್ತ ನಗರದಲ್ಲಿ ಬುಧವಾರ ನಡೆದ ಭಾರತ ಜಾಗೋ ಓಟ ಸಾರ್ವಜನಿಕರ ಗಮನ ಸೆಳೆಯಿತು.

ಗುರುನಾನಕ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸರ್ದಾರ್ ಬಲ್ ಬೀರ್ ಸಿಂಗ್ ನಗರದ ಸರಸ್ವತಿ ಶಾಲೆಯಲ್ಲಿ ಓಟಕ್ಕೆ ಚಾಲನೆ ನೀಡಿದರು.
ಅಲ್ಲಿಂದ ಆರಂಭಗೊಂಡ ಓಟವು ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಶಿವಾಜಿ ವೃತ್ತಿ, ಹರಳಯ್ಯ ವೃತ್ತ, ನೆಹರೂ ಕ್ರೀಡಾಂಗಣ, ಮಡಿವಾಳ ಮಾಚಿದೇವ ವೃತ್ತ, ಹೌಸಿಂಗ್ ಬೋರ್ಡ್ ಕಾಲೊನಿ, ಸಿದ್ಧಾರ್ಥ ಕಾಲೇಜು ಮಾರ್ಗವಾಗಿ ಹಾಯ್ದು ಪುನಃ ಸರಸ್ವತಿ ಶಾಲೆಗೆ ಆಗಮಿಸಿ ಮುಕ್ತಾಯ­ಗೊಂಡಿತು.

ರ್್ಯಾಲಿಯಲ್ಲಿ ಪಾಲ್ಗೊಂಡಿದ್ದ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆ ಪ್ರಮುಖರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಹಾಗೂ ಯುವಕರು ಸ್ವಾಮಿ ವಿವೇಕಾನಂದರ ಭಾವಚಿತ್ರ ಹೊಂದಿದ್ದ ಟಿಶರ್ಟ್ ಹಾಗೂ ತಲೆ ಮೇಲೆ ಟೋಪಿ ಧರಿಸಿದ್ದರು.

ಬೋಲೋ ಭಾರತ್ ಮಾತಾ ಕೀ ಜೈ ಎಂಬಿತ್ಯಾದಿ ದೇಶಾಭಿಮಾನ ಉಕ್ಕಿಸುವ ಘೋಷಣೆಗಳು ಓಟದ ಉದ್ದಕ್ಕೂ ಕೇಳಿ ಬಂದವು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ನಾಗೇಶ ರೆಡ್ಡಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಶಶಿಧರ ಹೊಸಳ್ಳಿ, ಪ್ರಮುಖರಾದ ಕೃಷ್ಣ ಜೋಶಿ, ಚಂದ್ರಶೇಖರ್ ಗಾದಾ ಮತ್ತಿತರರು ಪಾಲ್ಗೊಂಡಿದ್ದರು.   

ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಮಾತನಾಡಿದ ಸ್ವಾಮಿ ವಿವೇಕಾನಂದ ಸಾರ್ಧಶತಿ ಸಮಿತಿಯ ಪ್ರಾಂತ ಸಂಯೋಜಕ ಕೃಷ್ಣ ಜೋಶಿ ಅವರು, 1893 ರ ಸೆಪ್ಟೆಂಬರ್ 11 ರಂದು ಅಮೆರಿಕದ ಶಿಕಾಗೊದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಐತಿಹಾಸಿಕ ಭಾಷಣ ಮಾಡಿದ್ದು, ಅದರ ಸವಿನೆನಪಿಗಾಗಿ ಭಾರತ ಜಾಗೋ ಓಟ ಆಯೋಜಿಸಲಾಗಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ, ಶಿವಯೋಗೀಶ್ವರ್ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.