ADVERTISEMENT

ಗ್ರಾಪಂ ಮೇಜು, ಕುರ್ಚಿ ಧ್ವಂಸ

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 10:17 IST
Last Updated 25 ಜೂನ್ 2013, 10:17 IST

ಜನವಾಡ: ನಿಗದಿತ ಸಮಯಕ್ಕೆ ಶಾಲೆ ಬೀಗ ತೆರೆಯದೇ ಇರುವುದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಗ್ರಾಮ ಪಂಚಾಯಿತಿ ಕಚೇರಿಗೆ ನುಗ್ಗಿ ಮೇಜು, ಕುರ್ಚಿಗಳನ್ನು ಧ್ವಂಸಗೊಳಿಸಿದ ಪ್ರಸಂಗ ಬೀದರ್ ತಾಲ್ಲೂಕಿನ ಸಂಗೋಳಗಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಗ್ರಾಮಸ್ಥರ ಪ್ರಕಾರ, ಮಕ್ಕಳು ಬೆಳಿಗ್ಗೆ 9.30ಕ್ಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸೇರಿದ್ದರು. ಒಂದು ಗಂಟೆ ಕಾದರೂ ಶಾಲೆ ಬೀಗ ತೆರೆದಿರಲಿಲ್ಲ. ಇದನ್ನು ಖಂಡಿಸಿ ಮಕ್ಕಳು ಗ್ರಾಮ ಪಂಚಾಯಿತಿ ಕಚೇರಿ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಕಚೇರಿ ಒಳಗಿದ್ದ ಮೇಜು, ಕುರ್ಚಿಗಳನ್ನು ಎತ್ತಿ ಬಿಸಾಡಿ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಪ್ರಭಾರ ಮುಖ್ಯಗುರು ಶಾಲೆಗೆ ಆಗಮಿಸಿ ಬೀಗ ತೆರೆಯಲು ಮುಂದಾದರೂ ಗ್ರಾಮಸ್ಥರು ಅವಕಾಶ ಕೊಡಲಿಲ್ಲ. ಬಳಿಕ ಗ್ರಾಮಕ್ಕೆ ಭೇಟಿ ನೀಡಿದ ಬಿಆರ್‌ಸಿ ಹಾಗೂ ಪೊಲೀಸ್ ಅಧಿಕಾರಿಗಳು ಪಾಲಕರ ಮನವೊಲಿಸಿದರು. ಅನಂತರ ಬೀಗ ತೆರೆದು ಪಾಠ ಪ್ರವಚನ ನಡೆಸಲಾಯಿತು.
ಒಂದರಿಂದ ಏಳನೇ ತರಗತಿವರೆಗೆ ಇರುವ ಶಾಲೆಯಲ್ಲಿ 9 ಜನ ಶಿಕ್ಷಕರು ಮತ್ತು 400ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಶಿಕ್ಷಕರು ಸಮಯ ಪರಿಪಾಲನೆ ಮಾಡುತ್ತಿಲ್ಲ. ಮಕ್ಕಳ ಬಗೆಗೂ ಕಾಳಜಿ ವಹಿಸುತ್ತಿಲ್ಲ. ಹೀಗಾಗಿ ಶಿಕ್ಷಣದ ಗುಣಮಟ್ಟ ಕುಂಠಿತವಾಗುತ್ತಿದೆ ಎಂದು ಗ್ರಾಮದ ಪ್ರಮುಖರಾದ ಅಶೋಕ್ ಹೆಗಡೆ ದೂರಿದರು.

ಗುಣಮಟ್ಟದ ಬಿಸಿಯೂಟ ಕೊಡುತ್ತಿಲ್ಲ. ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯ ಇಲ್ಲದೆ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ ಎಂಬ ಆರೋಪ ಅವರದು.ಶಿಕ್ಷಕರು ಹಾಜರಿ ಹಾಕುವುದಕ್ಕಷ್ಟೇ ಸೀಮಿತರಾಗಿದ್ದಾರೆ. ಬೋಧನೆ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಮಕ್ಕಳು ಕಲಿಕೆಯಲ್ಲಿ ಹಿಂದೆ ಬೀಳುವಂತಾಗಿದೆ. ಇದಲ್ಲದೆ, ಶಿಕ್ಷಕರೊಬ್ಬರು  ಮದ್ಯಪಾನ ಮಾಡಿ ಶಾಲೆಗೆ ಬರುತ್ತಿದ್ದಾರೆ ಎಂದು ಪ್ರಮುಖರಾದ ಈಶ್ವರ ಸೋನಿ ಆಪಾದಿಸಿದರು.

ಈ ಬಗೆಗೆ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತಪ್ಪ ಅವರನ್ನು ಸಂಪರ್ಕಿಸಿದಾಗ, ಮುಖ್ಯಗುರು ವೈದ್ಯಕೀಯ ರಜೆ ಪಡೆದಿದ್ದು, ಸಹ ಶಿಕ್ಷಕರೊಬ್ಬರಿಗೆ ಪ್ರಭಾರ ವಹಿಸಲಾಗಿತ್ತು. ಅವರು ಬೀಗ ತೆಗೆದುಕೊಂಡು ಶಾಲೆಗೆ ಹೋಗಲು ತಡವಾಗಿದೆ ಎಂದು ಪ್ರತಿಭಟನೆ ನಡೆಸಲಾಗಿದೆ. ಹಿಂದೆ ಶಿಕ್ಷಕರು ಶಾಲೆಗೆ ತಡವಾಗಿ ಬರುತ್ತಿರುವ ಮತ್ತು ಶಿಕ್ಷಕರೊಬ್ಬರು ಕರ್ತವ್ಯದ ವೇಳೆ ಮದ್ಯಪಾನ ಮಾಡುತ್ತಿರುವ ಬಗ್ಗೆ ಯಾವುದೇ ದೂರುಗಳು ಬಂದಿರಲಿಲ್ಲ. ಇದೇ ಮೊದಲ ಬಾರಿ ಅಂಥ ದೂರುಗಳು ಬಂದಿವೆ ಎಂದು ತಿಳಿಸಿದರು.

ಶಿಕ್ಷಕರ ಬಗ್ಗೆ ಗ್ರಾಮಸ್ಥರಿಗೆ ತಪ್ಪು ಮಾಹಿತಿ ನೀಡಿರುವ ಸಾಧ್ಯತೆ ಇದೆ. ಆದರೂ, ಬಿಆರ್‌ಸಿ ಅವರನ್ನು ಶಾಲೆಗೆ ಕಳುಹಿಸಿದ್ದು, ಶಿಕ್ಷಕರು ತಡವಾಗಿ ಬರುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ. ಕರ್ವವ್ಯ ಲೋಪ ಎಸಗಿರುವುದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.