ADVERTISEMENT

ಚಿಟಗುಪ್ಪಾ ಪಟ್ಟಣಕ್ಕೆ ಹೈಟೆಕ್ ಸ್ವರ್ಶ...

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2011, 6:10 IST
Last Updated 2 ಆಗಸ್ಟ್ 2011, 6:10 IST

ಚಿಟಗುಪ್ಪಾ: ಕಳೆದ ಮೂರು ವರ್ಷಗಳ ಹಿಂದೆ ಪಟ್ಟಣದಲ್ಲಿ ನಡೆದ ಅತಿಕ್ರಮಣ ತೆರವು ಕಾರ್ಯದಿಂದ ಪಟ್ಟಣದ ಹಲವು ನಾಗರಿಕರಲ್ಲಿ ನೋವು, ಕೆಲವರಲ್ಲಿ ನಲಿವು ಕಂಡು ಬಂದಿತ್ತು.

ದಿನ ಕಳೆದಂತೆ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಒಂದಾದರೊಂದು ಪ್ರಗತಿ ಕಾರ್ಯ ನಡೆಯುತ್ತಲಿದ್ದವು. ಕೆಲವೆಡೆ ಹಲವು ಸಮಸ್ಯೆಗಳು ಹೊಸದಾಗಿ ತಲೆ ಎತ್ತುತ್ತಿದ್ದವು ಹೀಗಾಗಿ ನಾಗರಿಕರಲ್ಲಿ ದ್ವಿಮುಖ ಪ್ರತಿಕ್ರಿಯೆಗಳು ಮೂಡಿಬರುತ್ತಿದ್ದವು.

ಕಳೆದ ತಿಂಗಳು ಪುರಸಭೆಯಲ್ಲಿ ಅಧ್ಯಕ್ಷ ದಿಲೀಪ ಕುಮಾರ ಬಗದಲಕರ್ ನೇತೃತ್ವದಲ್ಲಿ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಸರ್ಕ್‌ಲ್ ಇನ್ ಸ್ಪೆಕ್ಟರ್ ಬಸವೇಶ್ವರ ನಡೆಸಿದ ಜನಸಂಪರ್ಕ ಸಭೆಯ ನಂತರ ಪಟ್ಟಣದ ಚಿತ್ರಣವೇ ಬಹುಮಟ್ಟಿಗೆ ಬದಲಾವಣೆಯ ರೂಪು ಪಡೆದುಕೊಂಡಂತಿದೆ,

ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಕಂಡುಬರುತ್ತಿದೆ. ಶಿವಾಜಿ ಚೌಕ್ ದಿಂದ ಹಳೆ ಅಗಸಿ ವರೆಗೂ ರಸ್ತೆ ವಿಭಾಜಕಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.

ಖಾಸಗಿ ಆಟೊಗಳಿಗಾಗಿ ಡಿಸಿಸಿ ಬ್ಯಾಂಕ್ ನಿಂದ ಕರಿಮುಲ್ಲಾ ಶಾ ದರ್ಗಾ ವರೆಗೂ ನಿಲ್ದಾಣ ವ್ಯವಸ್ಥೆ ಕಲ್ಪಿಸಿದ್ದು, ಚಾಲಕರ ಮೆಚ್ಚುಗೆಗೆ ಪಾತ್ರವಾಗಿದೆ.

ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜ್ ಮುಂಭಾಗದಲ್ಲಿ ಹಣ್ಣು ವ್ಯಾಪಾರಿಗಳಿಗೆ ಸ್ಥಳ ಕಲ್ಪಿಸಲಾಗಿದೆ. ಸುಗಮ ಸಂಚಾರಕ್ಕೆ ವ್ಯವಸ್ಥಿತ ಮಾರ್ಗಗಳು ಅಧಿಕಾರಿಗಳು ಹುಡುಕುತ್ತಿರುವುದು ಒಂದು ಕಡೆ ಆದರೆ, ಹಲವು ಸಮಸ್ಯೆಗಳ ನಿವಾರಣೆಗಾಗಿ ನಾಗರಿಕರ ಬೇಡಿಕೆ ಹೆಚ್ಚುತ್ತಿರುವುದು ಅಲ್ಲಗಳೆಯುವಂತಿಲ್ಲ.

ಪಟ್ಟಣದಲ್ಲಿ ಸಾರ್ವಜನಿಕರಿಗೆ ಒಂದೂ ಸಾರ್ವಜನಿಕ ಉದ್ಯಾನ ಸೌಲಭ್ಯ ಇಲ್ಲದಂತಾಗಿದೆ, ಸಾರ್ವಜನಿಕ ಮೂತ್ರಿಗಳ ನಿರ್ಮಾಣ ತೀರ ಅವಶ್ಯವಾಗಿದೆ. ನೂತನ ಬಸ್ ನಿಲ್ದಾಣ ತಕ್ಷಣ ನಿರ್ಮಿಸಬೇಕಾಗಿದೆ.

ಹುಮನಾಬಾದ್ ರಸ್ತೆಯಿಂದ ಸಂಪರ್ಕ ಪಡೆದಿ ನೂತನ ಬಸ್ ನಿಲ್ದಾಣದ ಎದುರುಗಡೆಯಿಂದ ಬೆಳಕೇರಾ ರಸ್ತೆ ವರೆಗೂ ನಿರ್ಮಿಸುತ್ತಿರುವ ಹೈಟೆಕ್ ರಸೆ ನಿರ್ಮಾಣ ಕಾಮಗಾರಿ ಪೊಲೀಸ್ ವಸತಿ ಗೃಹಗಳ ತೆರವು ಕಾರ್ಯ ವಿಳಂಬವಾಗಿದ್ದರಿಂದ ಸ್ಥಗಿತಗೊಂಡಿದ್ದು ಹಲವು ನಾಗರೀಕರ ಆಕ್ರೋಶಕ್ಕೆ ಕಾರಣವಾಗಿದೆ.

ಪುರಸಭೆಯ ಕಾರ್ಯಾಲಯದ ಆವರಣದಲ್ಲಿಯ ಉದ್ಯಾನ ಸಂಪೂರ್ಣವಾಗಿ ಹಾಳಾಗಿದ್ದು, ಪುರಸಭೆಯವರು ತಕ್ಷಣ ಕಾಳಜಿ ವಹಿಸಿ ದುರಸ್ಥಿ ಕಾರ್ಯ ಕೈಗೊಳ್ಳಬೇಕು ಎಂದು ನಾಗರೀಕರು ಆಗ್ರಹಿಸಿದ್ದಾರೆ. ಸ್ಥಳಿಯ ಓದುಗರಿಗೆ ಮೂರು ವರ್ಷದಿಂದ ಸಾರ್ವಜನಿಕ ಗ್ರಂಥಾಲಯ ಕಟ್ಟಡ ನಿರ್ಮಾಣವಾಗದಕ್ಕೆ ತೊಂದರೆ ಆಗುತ್ತಿದ್ದು, ತಕ್ಷಣ ಪುರಸಭೆ ಆಡಳಿತ ಸೂಕ್ತ ಸ್ಥಳ ಮಂಜೂರು ಮಾಡಿ, ವ್ಯವಸ್ಥಿತ ಕಟ್ಟಡ ನಿರ್ಮಿಸಬೇಕಿದೆ. ಒಟ್ಟಾರೆ ಜನ ಮೆಚ್ಚುವ ರೀತಿಯಲ್ಲಿ ಪ್ರಗತಿ ಕಾರ್ಯ ಕೈಗೊಳ್ಳುತ್ತಿರುವ ಬಗ್ಗೆ ಹೆಮ್ಮೆ ಪಡುವ ವಿಷಯ...! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.