ADVERTISEMENT

`ಚೀನಾದಿಂದ ಭಾರತ ದುರ್ಬಲಗೊಳಿಸುವ ಸಂಚು'

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2012, 6:47 IST
Last Updated 24 ಡಿಸೆಂಬರ್ 2012, 6:47 IST

ಹುಮನಾಬಾದ್: ಭಾರತವನ್ನು ಆರ್ಥಿಕ ಹಾಗೂ ಸಾಂಸ್ಕೃತಿಕವಾಗಿ ದುರ್ಬಲಗೊಳಿಸಲು ಚೀನಾ ವ್ಯವಸ್ಥಿತ ಸಂಚು ರೂಪಿಸುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಕರ್ನಾಟಕ ಪ್ರಾಂತ ಸಂಚಾಲಕ ಗೋಪಾಲಜಿ ನೇರ ಆಪಾದಿಸಿದರು. ಸಂಘದ ಹುಮನಾಬಾದ್ ಶಾಖೆ ವತಿಯಿಂದ ಥೇರ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಿಂದೂ ಚೈತನ್ಯ ಸಮಾವೇಶದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಕಡಿಮೆ ಬೆಲೆಗೆ ಯುವಜನಾಂಗದ ಕೈಗೆಟುವ ಮೊಬೈಲ್ ಮೊದಲಾದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಭಾರತ ಮಾರುಕಟ್ಟೆ ಪ್ರವೇಶಿಸಿರುವ ವಿಷಯ ಈಗ ಹಳೆಯದು. ಅಂಥ ಉಪಕರಣ ಖರೀದಿಸುವ ಮೂಲಕ ದೇಶದ ಯುವಜನಾಂಗವನ್ನು ದುಶ್ಚಟಗಳಿಗೆ ಬಲಿಯಾಗಿಸುವ ಮೂಲಕ ದೇಶವನ್ನು ಸಾಂಸ್ಕೃತಿಕವಾಗಿ ದುರ್ಬಲಗೊಳಿಸುತ್ತಿದೆ ಎಂದರು. ಎಫ್.ಡಿ.ಐ ಮೂಲಕ ದೇಶದಲ್ಲಿನ ಸಣ್ಣಪುಟ್ಟ ವ್ಯಾಪಾರಿಗಳನ್ನು ಮೂಲೆಗುಂಪಾಗಿಸುವುದಕ್ಕೆ ನಡೆಸುತ್ತಿರುವ ವ್ಯವಸ್ಥಿತ ಸಂಚಿಗೆ ಎಫ್.ಡಿ.ಐ ಅತ್ಯುತ್ತಮ ನಿದರ್ಶನ ಎಂದರು.

ನಿರಾಶ್ರಿತರಲ್ಲದೇ ಐದುವರೆ ಕೋಟಿ ಬಾಂಗ್ಲಾ ದೇಶದ ಮುಸ್ಲಿಮರು ದೇಶ ಪ್ರವೇಶಿಸಿದ್ದಾರೆ. ದೇಶದ ಕೆಲ ರಾಜ್ಯಗಳಲ್ಲಿ ಶಾಸಕರಾಗಿಯೂ ಆಯ್ಕೆಗೊಂಡಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಮುಂದೊಂದು ದಿನ ದೇಶವನ್ನೇ ತಮ್ಮ ಕಪಿಮುಷ್ಠಿಯಲ್ಲಿ ತೆಗೆದುಕೊಂಡರೂ ಎಚ್ಚರಿ ಪಡಬೇಕಿಲ್ಲ ಎಂದರು. ಜನಸಂಖ್ಯೆ ದೃಷ್ಟಯಿಂದ ದೇಶದಲ್ಲಿ ತಾರತಮ್ಯ ಧೋರಣೆ ಅನುಸುತ್ತಿರುವುದು ದುರ್ದೈವದ ಸಂಗತಿ ಎಂದು ತಿಳಿಸಿದರು.

ದೇಶದ ಸಮಸ್ತ ಜನತೆ ವೈಯಕ್ತಿಕ ಸ್ವಾರ್ಥ ಬದಿಗೊತ್ತಿ ದೇಶದ ಉಳಿವಿಗಾಗಿ ಸಂಘಟಿತರಾಗಬೇಕಾದ ಅಗತ್ಯತೆಯನ್ನು ಒತ್ತಿ ಹೇಳಿದರು. ಹಿಂದೂ ಎನ್ನುವುದು ಧರ್ಮವಲ್ಲ ಅದೊಂದು ಜೀವನ ಪದ್ಧತಿ ಎಂಬುದನ್ನು ದೇಶದ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು. ಸ್ವಾಮಿ ವಿವೇಕಾನಂದ 150ನೇ ಜನ್ಮದಿನ ಆಚರಣೆ ಸವಿನೆನಪಿಗಾಗಿ ಹಿಂದೂ ಚೈತನ್ಯ ಸಮಾವೇಶ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಡಾ.ಕೆ.ಚಂದ್ರಕಾಂತ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಸಂಘದ ತಾಲ್ಲೂಕು ಪ್ರಮುಖ ಚೆನ್ನಶೆಟ್ಟಿ ಪಾಟೀಲ ನಿಂಬೂರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಪ್ರಚಾರಕ ರಾಘವೇಂದ್ರ, ಭಾಲ್ಕಿ ಪ್ರಮುಖ ಶಿವಪುತ್ರ ಬಿರಾದಾರ, ನಾಗೇಶರೆಡ್ಡಿ, ಶ್ರಿನಿವಾಸರೆಡ್ಡಿ, ಶಿವಶಂಕರ ತರನಳ್ಳಿ, ವೆಂಕಟೇಶ ಜಾಧವ್ ಇದ್ದರು.

ಸರ್ವೇಶಕುಮಾರ ತರನಳ್ಳಿ ಪ್ರಾರ್ಥಿಸಿದರು. ಚಂದ್ರಕಾಂತ ತಾಳಮಡಗಿ ಸ್ವಾಗತಿಸಿದರು. ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಗಣವೇಶಧಾರಿ ಸ್ವಯಂ ಸೇವಕರು ಆಕರ್ಷಕ ಪಥ ಸಂಚಲನ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.