ADVERTISEMENT

ತಲೆನೋವಾದ ಸಂಚಾರ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 6:35 IST
Last Updated 3 ಅಕ್ಟೋಬರ್ 2011, 6:35 IST
ತಲೆನೋವಾದ ಸಂಚಾರ ದಟ್ಟಣೆ
ತಲೆನೋವಾದ ಸಂಚಾರ ದಟ್ಟಣೆ   

ಬೀದರ್: ನಗರದ ಬಸವೇಶ್ವರ ವೃತ್ತದಿಂದ ಬೊಮ್ಮಗೊಂಡೇಶ್ವರ ವೃತ್ತದ ಕಡೆಗೆ ಹೋಗುವ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುವುದು ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿದೆ.

ರೈಲ್ವೆ ಕೆಳಸೇತುವೆ ಕಾಮಗಾರಿಯ ಹಿನ್ನೆಲೆಯಲ್ಲಿ ಮಹಾವೀರ ವೃತ್ತದಿಂದ ಬೊಮ್ಮಗೊಂಡೇಶ್ವರ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕಳೆದ ಕೆಲ ತಿಂಗಳುಗಳಿಂದ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಹೀಗಾಗಿ ಚಿದ್ರಿ, ಗಾಂಧಿಗಂಜ್, ವಿದ್ಯಾನಗರ, ಗುಂಪಾ ಮತ್ತಿತರ ಕಡೆಗೆ ಹೋಗಬೇಕಾದವರು ಬಸವೇಶ್ವರ ವೃತ್ತದ ಮೂಲಕವೇ ಸಂಚರಿಸಬೇಕಾದ ಅನಿವಾರ್ಯತೆ ಉಂಟಾಗಿದೆ.

ರೈಲ್ವೆ ಕೆಳಸೇತುವೆ ಕಾಮಗಾರಿ ಆರಂಭ ಆದಾಗಿನಿಂದ ಬಸವೇಶ್ವರ ವೃತ್ತದಿಂದ ರೈಲ್ವೆ ಕೆಳಸೇತುವೆ ಮೂಲಕ ಬೊಮ್ಮಗೊಂಡೇಶ್ವರ ವೃತ್ತದ ಕಡೆಗೆ ತೆರಳುವ ರಸ್ತೆಯಲ್ಲಿ ವಾಹನ ದಟ್ಟಣೆ ದ್ವಿಗುಣ ಆಗಿದೆ.

ಹೀಗಾಗಿ ಈ ರಸ್ತೆಯಲ್ಲಿ ವಾಹನ ಸಂಚಾರ ಹರಸಾಹಸವಾಗಿ ಮಾರ್ಪಟ್ಟಿದೆ ಎಂದು ತಿಳಿಸುತ್ತಾರೆ ನಾಗರಿಕರು.

ಸಂಚಾರ ದಟ್ಟಣೆ ಜಾಸ್ತಿಯಾಗಿ ರಸ್ತೆ ಕಿರಿದಾಗಿರುವುದು ನಾನಾ ರೀತಿಯ ಅವಘಡಗಳಿಗೆ ಕಾರಣ ಆಗಿದೆ. ಕೆಲ ದಿನಗಳ ಹಿಂದಷ್ಟೆ ಬಸವೇಶ್ವರ ವೃತ್ತದಿಂದ ಬೊಮ್ಮಗೊಂಡೇಶ್ವರ ವೃತ್ತದ ಕಡೆಗೆ ತೆರಳುತ್ತಿದ್ದ ವಿದ್ಯಾರ್ಥಿಯೊಬ್ಬ ಬೈಕ್ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿದ್ದ. ಹಿಂದಿನಿಂದ ಬಂದ್ ಮಿನಿ ಬಸ್ ಆತನ ತಲೆಯ ಮೇಲಿಂದ ಹಾದು ಹೋದದ್ದೇ ಘಟನೆಗೆ ಕಾರಣ ಆಗಿತ್ತು. ಘಟನೆಯು ಈ ಮಾರ್ಗದಲ್ಲಿರುವ ಸಂಚಾರ ದಟ್ಟಣೆಯ ಸೂಚಕವಾಗಿದೆ. ವಾಹನ ಸವಾರರಲ್ಲಿ ಭೀತಿ ಉಂಟು ಮಾಡಿದೆ ಎಂದು ವಿವರಿಸುತ್ತಾರೆ.

ಘಟನೆಯ ನಂತರ ಬಸವೇಶ್ವರ ವೃತ್ತದಿಂದ ಬೊಮ್ಮಗೊಂಡೇಶ್ವರ ವೃತ್ತದ ಕಡೆಗೆ ಹೋಗುವ ರಸ್ತೆಯ ಬದಿಯಲ್ಲಿ ಎರಡೂ ಕಡೆ ವಾಹನ ನಿಲುಗಡೆ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. `ನೋ ಪಾರ್ಕಿಂಗ್~ ಬೋರ್ಡ್ ಅಳವಡಿಸಿ ಸಂಚಾರ ಪೊಲೀಸರನ್ನು ನಿಯೋಜಿಸಲಾಗಿದೆ.

ಮಹಾವೀರ ವೃತ್ತದಿಂದ ಬೊಮ್ಮಗೊಂಡೇಶ್ವರ ವೃತ್ತದ ಕಡೆಗೆ ಹೋಗುವ ರಸ್ತೆಯಲ್ಲಿ ರೈಲ್ವೆ ಕೆಳಸೇತುವೆ ಕಾಮಗಾರಿ ಆರಂಭಿಸಿದ ನಂತರ ಸಂಚಾರಕ್ಕೆ `ಪರ್ಯಾಯ~ ಮಾರ್ಗ ಇಲ್ಲದಂತಾಗಿದ್ದು, ಬಸವೇಶ್ವರ ವೃತ್ತದಲ್ಲಿ ದಟ್ಟಣೆ ಹೆಚ್ಚಾಗಲು ಕಾರಣವಾಗಿದೆ. ರೈಲ್ವೆ ಕೆಳಸೇತುವೆಯ ಕಾಮಗಾರಿ ಆಮೆಗತಿಯಲ್ಲಿ ಸಾಗಿರುವುದು ತೀವ್ರ ಅಸಮಾಧಾನ ಉಂಟು ಮಾಡಿದೆ ಎಂದು ಹೇಳುತ್ತಾರೆ.

ರೈಲ್ವೆ ಕೆಳಸೇತುವೆ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಮಹಾವೀರ ವೃತ್ತದಿಂದ ಬೊಮ್ಮಗೊಂಡೇಶ್ವರ ವೃತ್ತದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಮತ್ತು ರೈಲ್ವೆ ಕೆಳಸೇತುವೆ ಪೂರ್ಣಗೊಳ್ಳುವವರೆಗೆ ಬಸವೇಶ್ವರ ವೃತ್ತದಿಂದ ಬೊಮ್ಮಗೊಂಡೇಶ್ವರ ವೃತ್ತದ ಕಡೆಗೆ ತೆರಳುವ ರಸ್ತೆಯಲ್ಲಿ ಸುಗಮ ಸಂಚಾರಕ್ಕಾಗಿ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.