ADVERTISEMENT

‘ತಾಲ್ಲೂಕು ಲೋಕಾರ್ಪಣೆ ಐತಿಹಾಸಿಕ’

ಕಮಲನಗರ: ತಾಲ್ಲೂಕು ಲೋಕಾರ್ಪಣೆ, ಸಚಿವ ಈಶ್ವರ ಖಂಡ್ರೆ, ಮುಖಂಡರು ಭಾಗಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 6:35 IST
Last Updated 16 ಮಾರ್ಚ್ 2018, 6:35 IST
ಕಮಲನಗರದಲ್ಲಿ ಗುರುವಾರ ನಡೆದ ನೂತನ ತಾಲ್ಲೂಕು ಉದ್ಘಾಟನಾ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು.
ಕಮಲನಗರದಲ್ಲಿ ಗುರುವಾರ ನಡೆದ ನೂತನ ತಾಲ್ಲೂಕು ಉದ್ಘಾಟನಾ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು.   

ಕಮಲನಗರ: ‘ನಡೆದಾಡುವ ದೇವರೆಂದೇ ಖ್ಯಾತಿ ಪಡೆದಿರುವ ಡಾ.ಚನ್ನಬಸವ ಪಟ್ಟದ್ದೇವರ ಹುಟ್ಟೂರಾದ ಕಮಲನಗರವು ಈಗ ತಾಲ್ಲೂಕು ಕೇಂದ್ರವಾಗಿದೆ. ಈ ನೂತನ ತಾಲ್ಲೂಕು ಲೋಕಾರ್ಪಣೆ ಭಾಗ್ಯ ನನಗೆ ದೊರೆತಿರುವುದು ನನ್ನ ಸೌಭಾಗ್ಯ. ಇದೊಂದು ಐತಿಹಾಸಿಕ ಗಳಿಗೆಯಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಜಿಲ್ಲಾಡಳಿತದಿಂದ ಗುರುವಾರ ಆಯೋಜಿಸಿದ್ದ ಕಮಲನಗರ ತಾಲ್ಲೂಕು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

‘ಕಮಲನಗರ ತಾಲ್ಲೂಕು ಕೇಂದ್ರಕ್ಕಾಗಿ ಮೂರು ದಶಕಗಳಿಂದ ಹೋರಾಟ ನಡೆದಿತ್ತು. ರಸ್ತೆ ತಡೆ, ರೈಲ್‌ ರೋಕೊ, ದೆಹಲಿಗೆ ನಿಯೋಗ, ಹೀಗೆ ನಾನಾ ಸ್ತರಗಳಲ್ಲಿ ಹೋರಾಟ ಮಾಡಲಾಗಿತ್ತು. ಹೋರಾಟದ ಫಲವಾಗಿ ಇಂದು ನೂತನ ತಾಲ್ಲೂಕಾಗಿ ಅಸ್ತಿತ್ವಕ್ಕೆ ಬಂದಿದೆ’ ಎಂದರು.

ADVERTISEMENT

‘ರಾಜ್ಯ ಸರ್ಕಾರ ಸರ್ವರಿಗೆ ಸಮಪಾಲು, ಸಮಬಾಳು ಎನ್ನುವ ಸಿದ್ಧಾಂತದ ಮೇಲೆ ನಡೆಯುತ್ತಿದ್ದು, ಜನೋಪಯೋಗಿ ಯೋಜನೆಗಳ ಮೂಲಕ ಬಡವರ, ಶೋಷಿತರ ಬದುಕಿಗೆ ಭದ್ರ ಬುನಾದಿ ಹಾಕಿದೆ. ಈ ಭಾಗದಲ್ಲಿ ಕುಂಠಿತಗೊಂಡಿರುವ ಯೋಜನೆಗಳನ್ನು ಚುರುಕುಗೊಳಿಸಲು, ಆಡಳಿತಾತ್ಮಕ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು’ ಎಂದರು.

ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್‌ ಮಾತನಾಡಿ, ‘ಎಲ್ಲ ವರ್ಗದವರಿಗೆ ಸಾಮಾಜಿಕ ನ್ಯಾಯ ಒದಗಿಸಲು ಕಾಂಗ್ರೆಸ್‌ ಪಕ್ಷ ಬದ್ಧವಾಗಿದ್ದು, ನಮ್ಮದು ನುಡಿದಂತೆ ನಡೆದ ಸರ್ಕಾರವಾಗಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರಭು ಚವಾಣ್‌ ಮಾತನಾಡಿ, ‘ತಾಲ್ಲೂಕು ಕೇಂದ್ರವನ್ನಾಗಿಸುವ ಘೋಷಣೆ ಹಿಂದೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲೇ ಮಾಡಲಾಗಿತ್ತು. ಬಹುದಿನಗಳ ಕನಸು ನನಸಾಗುವ ಭರವಸೆ ಸಿಕ್ಕಿತ್ತು. ಆದರೆ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ತಾಲ್ಲೂಕು ಕೇಂದ್ರ ಮಾಡಲು ವಿಳಂಬ ಮಾಡಿತು. ಈಗ ತಾಲ್ಲೂಕು ಆಗಿರುವುದು ಅಭಿವೃದ್ಧಿಗೆ ಪೂರಕವಾಗಿದೆ. ಶೀಘ್ರದಲ್ಲಿ ತಾಲ್ಲೂಕಿಗೆ ಅಗತ್ಯವಾದ ಎಲ್ಲ ಕಚೇರಿಗಳನ್ನು ಆರಂಭಿಸಿ, ಕಾರ್ಯರೂಪಕ್ಕೆ ತರಲು ಸರ್ಕಾರ ಮುಂದಾಗಬೇಕು’ ಎಂದರು.

ಸಾನ್ನಿಧ್ಯ ವಹಿಸಿದ್ದ ಭಾಲ್ಕಿ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದ್ದೇವರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಿಬಾಯಿ ಶೇರಿಕಾರ ಮಾತನಾಡಿದರು. ಉಪ ವಿಭಾಗಾಧಿಕಾರಿ ಶಿವಕುಮಾರ ಶೀಲವಂತ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸವಿತಾ ಪಾಟೀಲ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಕಾಶ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಥುರಾಬಾಯಿ ಕದಮ್‌, ತಹಶೀಲ್ದಾರ್‌ ಎಂ.ಚಂದ್ರಶೇಖರ್‌, ವೆಂಕಟೇಶ ಸುರಪುರ್‌ ಇದ್ದರು. ಪ್ರೊ.ಎಸ್‌.ಎನ್‌.ಶಿವಣಕರ್‌ ಸ್ವಾಗತಿಸಿದರು. ಶಿವಾಜಿ ಆರ್‌.ಎಚ್‌ ನಿರೂಪಿಸಿದರು. ಪಟ್ಟಣದ ಅಲ್ಲಂಪ್ರಭು ವೃತ್ತದಿಂದ ಡೊಳ್ಳು, ಭಜನೆ, ವಿವಿಧ ಮೇಳದೊಂದಿಗೆ ಮೆರವಣಿಗೆ ನಡೆಯಿತು.

ಶಿಷ್ಟಾಚಾರ ಉಲ್ಲಂಘನೆ: ಶಾಸಕ ಕಿಡಿ
ತಾಲ್ಲೂಕು ಉದ್ಘಾಟನೆ ಕಾರ್ಯಕ್ರಮದಲ್ಲಿ ಕಂಠೀರವ ಸ್ಟುಡಿಯೊ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ್‌ ಅವರ ಹೆಸರಿರಲಿಲ್ಲ. ಆದರೂ ಅವರು ವೇದಿಕೆ ಮೇಲೆ ಕುಳಿತಿರುವುದನ್ನು ಪ್ರಶ್ನಿಸಿ ಶಾಸಕ ಪ್ರಭು ಚವಾಣ್‌ ಸಿಡಿಮಿಡಿಗೊಂಡು, ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ, ವೇದಿಕೆಯಿಂದ ಕೆಳಗಿಳಿದು ಆಕ್ರೋಶ ವ್ಯಕ್ತಪಡಿಸಿದರು.

ಇದರಿಂದ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು. ಸಚಿವ ಈಶ್ವರ ಖಂಡ್ರೆ, ಉಪ ವಿಭಾಗಾಧಿಕಾರಿ ಶಿವಕುಮಾರ ಶೀಲವಂತ ಸೇರಿ ಶಾಸಕರ ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಮೀನಾಕ್ಷಿ ಸಂಗ್ರಾಮ್‌ ಅವರು ವೇದಿಕೆಯಿಂದ ಕೆಳಗಿಳಿದ ನಂತರವಷ್ಟೇ ಪ್ರಭು ಚವಾಣ್‌ ವೇದಿಕೆ ಮೇಲೆ ಕುಳಿತರು.

*
ಶಿಕ್ಷಣ, ವಾಣಿಜ್ಯ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಕಮಲನಗರ ಗ್ರಾಮ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು.
–ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.