ADVERTISEMENT

ದುಬಲಗುಂಡಿ ರಸ್ತೆ ವಿಸ್ತರಣೆಗೆ ಪಂಚಾಯಿತಿ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2012, 6:10 IST
Last Updated 1 ಆಗಸ್ಟ್ 2012, 6:10 IST

ಹುಮನಾಬಾದ್: ತಾಲ್ಲೂಕಿನ ದುಬಲಗುಂಡಿ ಗ್ರಾಮದಲ್ಲಿ ರಸ್ತೆ ವಿಸ್ತರಣೆ ಕಾರ್ಯ ಕೈಗೆತ್ತಿಕೊಳ್ಳಲು ಸೋಮವಾರ ನಡೆದ ವಿಶೇಷ  ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ವಿ.ನಾತೆ ಅಧ್ಯಕ್ಷತೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಕ್ಷೇತ್ರದ ಶಾಸಕ ರಾಜಶೇಖರ ಪಾಟೀಲ ಅವರು ಈಚೆಗೆ ಗ್ರಾಮಕ್ಕೆ ಭೇಟಿ ನೀಡಿ,  ಪಂಚಾಯಿತಿ ಎಲ್ಲಾ ಸದಸ್ಯರು ವಿಸ್ತರಣೆ ಕುರಿತು ಒಮ್ಮತದ ತೀರ್ಮಾನ ಕೈಗೊಂಡಲ್ಲಿ ಅನುದಾನ ನೀಡುವುದಾಗಿ ಭರವಸೆ ನೀಡಿದ್ದರು.

ಸೋಮವಾರ ವಿಶೇಷ ಸಾಮಾನ್ಯ ಸಭೆ ನಡೆಸಿ, ಈ ತೀರ್ಮಾನ ಕೈಗೊಂಡಿದ್ದು ಅಭಿವೃದ್ಧಿ ಕಾರ್ಯಕ್ಕೆ ಗ್ರಾಮಸ್ಥರು ಸಹಕರಿಸಬೇಕು ಎಂದು ನಾತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ರಸ್ತೆ ವಿಸ್ತರಣೆ ಕುರಿತು ಅಂದು ಹಿರಿಯ ಅಧಿಕಾರಗಳ ಆದೇಶದ ಮೇರೆಗೆ 1979ರಲ್ಲಿ ಪಟ್ಟಣ ಯೋಜನಾ ಅಧಿಕಾರಿ ಅವರು ಕೈಗೊಂಡ ಸರ್ವೆ ಪ್ರಕಾರವೇ ಈಗ ರಸ್ತೆ ವಿಸ್ತರಣೆ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಏನಿದೆ ಸರ್ವೆನಲ್ಲಿ ? : ಈ ಮೇಲೆ ಸೂಚಿಸಿದಂತೆ 1979ರ ಸರ್ವೆ ಪ್ರಕಾರ ಗ್ರಾಮದ ಯಾವ ಯಾವ ರಸ್ತೆಗಳಲ್ಲಿ  ವಿಸ್ತರಣೆ ಕಾರ್ಯ ನಡೆಯುತ್ತದೆ ? ಎಷ್ಟು ವಿಸ್ತರಣೆ ಆಗುತ್ತದೆ ? ಎಂಬ ಇತ್ಯಾದಿ ಪ್ರಶ್ನೆಗೆ ಇಲ್ಲಿದೆ ಉತ್ತರ- ಪಂಚಾಯಿತಿ ಕಚೇರಿಯಿಂದ ಹುಸೇನ್ ಚೌಕ್- 9ಮೀಟರ್, ಹುಸೇನ್ ಚೌಕ್‌ನಿಂದ ಬಸವಣ್ಣ ಕಟ್ಟೆ- 9ಮೀಟರ್, ಬಸವಣ್ಣ ಕಟ್ಟೆಯಿಂದ ಬಸವೇಶ್ವರ ದೇವಸ್ಥಾನ- 15ಮೀಟರ್, ಬಸವಣ್ಣ ಕಟ್ಟೆಯಿಂದ ಎಡ ಮತ್ತು ಬಲ ಭಾಗದ ರಸ್ತೆ- 5ಮೀಟರ್, ಬಸವಣ್ಣ ಗುಡಿಯಿಂದ ಧ್ವಜಕಟ್ಟೆವರೆಗೆ - 11ಮೀಟರ್, ಬಸವೇಶ್ವರ ದೇವಸ್ಥಾನದಿಂದ ಬಸವೇಶ್ವರ ವೃತ್ತದ(ಹುಮನಾಬಾದ್- ಭಾಲ್ಕಿ ರಸ್ತೆ) ವರೆಗೆ 10ಮೀಟರ್, ಇನ್ನೂ ಗ್ರಾಮ ಮಧ್ಯದ ಧ್ವಜಕಟ್ಟೆಯಿಂದ ಅಗಸಿ ವರೆಗೆ- 9ಮೀಟರ್, ಧ್ವಜ ಕಟ್ಟೆಯಿಂದ ಹಳೆಯ ಅಂಚೆ ಕಚೇರಿ, ಖಾದಿ ಭಂಡಾರ ವರೆಗೆ 10ಮೀಟರ್ ವಿಸ್ತರಣೆ ನಡೆಯಲಿದೆ.

ಈ ಯೋಜನೆ ಪ್ರಕಾರ ರಸ್ತೆ ವಿಸ್ತರಣೆ ಸಂಬಂಧ ಹಿಂದಿನ ಜಿಲ್ಲಾಧಿಕಾರಿ ಹರ್ಷಗುಪ್ತಾ ಹಾಗೂ ಹಾಲಿ ಜಿಲ್ಲಾಧಿಕಾರಿ ಅವರು ಗ್ರಾಮಸ್ಥರ ಜೊತೆಗೆ ಚರ್ಚಿಸಿದ್ದರು. ಗ್ರಾಮಸ್ಥರು ಒಮ್ಮತದಿಂದ ನಿರ್ಣಯ ತೆಗೆದುಕೊಂಡ ಬಳಿಕ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗುವುದಾಗಿ ತಿಳಿಸಿದ್ದರು.

 ಈ ಮಧ್ಯೆ ಕ್ಷೇತ್ರದ ಶಾಸಕ ರಾಜಶೇಖರ ಪಾಟೀಲ ಅವರು ಜುಲೈ 14ರಂದು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಿಸ್ತರಣೆ ಕುರಿತಾಗಿ  ಪಂಚಾಯಿತಿ ತೀರ್ಮಾನ ಕೈಗೊಂಡಲ್ಲಿ ಅಭಿವೃದ್ಧಿ ಅನುದಾನ ನೀಡುವುದಾಗಿ ಸುದ್ದಿಗಾರರ ಸಮ್ಮುಖದಲ್ಲೇ ತಿಳಿಸಿದ್ದನ್ನು ಈಗ ಸ್ಮರಿಸಬಹುದು.

ಗ್ರಾಮ ಪಂಚಾಯಿತಿ ಚುನಾಯಿತಿ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಾಧ್ಯವದಷ್ಟು ಶೀಘ್ರ  ತೆರವು ಕಾರ್ಯ ಪೂರ್ಣಗೊಳಿಸುವ ಮೂಲಕ ಶಾಸಕ ರಾಜಶೇಖರ ಪಾಟೀಲ ಅವರು ನೀಡುವ ಅನುದಾನ ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.