ಬಸವಕಲ್ಯಾಣ: ತಾಲ್ಲೂಕಿನ ಹತ್ತರ್ಗಾ ಗ್ರಾಮದ ಸಮೀಪದಿಂದ ಬೆಣ್ಣೆತೊರಾ ನದಿ ಹಾದು ಹೋಗುತ್ತದೆ. ಆದರೂ ಗ್ರಾಮದಲ್ಲಿ ನೀರಿಗೆ ಪರದಾಡುವ ಸ್ಥಿತಿ ಇದೆ. ನದಿಯಲ್ಲಿ ಹೂಳು ತುಂಬಿದ್ದು, ಗ್ರಾಮಸ್ಥರಿಗೆ ನದಿ ನೀರು ಉಪಯೋಗಕ್ಕೆ ಬರುತ್ತಿಲ್ಲ. ನದಿ ಇದ್ದರೂ ಬೆಳೆಗಳಿಗೆ ನೀರಿಲ್ಲದೆ ರೈತರು ಸಂಕಷ್ಟ ಪಡುವಂತಾಗಿದೆ.
ಹತ್ತರ್ಗಾ ಸೇರಿದಂತೆ ತಾಲ್ಲೂಕಿನ ಸಿರಗುರ, ಚಿತ್ತಕೋಟಾ ಮತ್ತು ಗಿಲಗಿಲಿ ಗ್ರಾಮಗಳ ಮೂಲಕವೂ ಬೆಣ್ಣೆತೊರಾ ನದಿ ಹಾದು ಹೋಗುತ್ತದೆ. ಹೀಗೆ ಹಾದು ಹೋಗುವ ನಾಲ್ಕೈದು ಕಿ.ಮೀ ಅಂತರದಲ್ಲಿ ನದಿ ನೇರವಾಗಿರದೆ ಅಂಕುಡೊಂಕಾಗಿದೆ. ಹೀಗಾಗಿ ನೀರಿನೊಂದಿಗೆ ಬರುವ ಕಲ್ಲು, ಮಣ್ಣು ತಿರುವುಗಳಲ್ಲಿ ಸಂಗ್ರಹಗೊಂಡು, ನೀರು ನಿಲ್ಲಲು ಜಾಗ ಇಲ್ಲದಂತಾಗಿದೆ. ಹೀಗಾಗಿ ಎಲ್ಲ ಗ್ರಾಮಗಳಲ್ಲೂ ನೀರಿಗೆ ಪರದಾಟ.
ಈಚೆಗೆ ಹತ್ತರ್ಗಾ ಸಮೀಪದಲ್ಲಿ ₨2 ಕೋಟಿಗೂ ಅಧಿಕ ವೆಚ್ಚದಲ್ಲಿ ಬೆಣ್ಣೆತೊರಾ ನದಿಗೆ ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸಲಾಗಿದೆ. ಇದರಿಂದ ಸಂಚಾರಕ್ಕೆ ಅನುಕೂಲವಾಗಿದೆ. ಆದರೆ ನದಿ ಸಮತಟ್ಟಾಗಿರುವುದರಿಂದ ಅಲ್ಪ ಸ್ವಲ್ಪ ನೀರು ಸಂಗ್ರಹಗೊಂಡು ಬೇಸಿಗೆಯ ಬಿಸಿಲು ಬೀಳುತ್ತಿದ್ದಂತೆಯೇ ಬ್ಯಾರೇಜ್ ಸಂಪೂರ್ಣ ಬರಿದಾಗಿದೆ.
‘ಮೊದಲು ಬೇಸಿಗೆಯಲ್ಲಿಯೂ ನದಿಯಲ್ಲಿ ನೀರು ಇರುತ್ತಿತ್ತು. ರೈತರು ಆ ನೀರನ್ನು ಹೊಲಗಳಿಗೆ ಹರಿಸುತ್ತಿದ್ದರು. ಆದರೆ ಕೆಲ ದಿನಗಳಿಂದ ಎಲ್ಲೆಡೆ ನೀರು ಒಣಗಿದ್ದು, ನದಿಯಲ್ಲಿ ಗುಂಡಿ ತೋಡಿ ಪಂಪ್‌ಸೆಟ್ ಹಾಕಬೇಕಾಗಿದೆ. ನೀರಿಲ್ಲದೆ ಬೆಳೆಗಳು ಒಣಗುತ್ತಿವೆ. ಜಾನುವಾರುಗಳಿಗೂ ಕುಡಿಯಲು ನೀರು ಸಿಗುತ್ತಿಲ್ಲ’ ಎಂದು ಗ್ರಾಮಸ್ಥ ಬಲಭೀಮಪ್ಪ ಹೇಳುತ್ತಾರೆ.
ನದಿ ಒಣಗಿದ್ದರಿಂದ ಗ್ರಾಮದಲ್ಲಿನ ಕೊಳವೆ ಬಾವಿಗಳಿಗೂ ನೀರಿನ ಕೊರತೆಯಾಗಿದೆ. ಹೀಗಾಗಿ ಕೆಲ ಓಣಿಗಳಿಗೆ ನಿಯಮಿತವಾಗಿ ನೀರು ಸರಬರಾಜು ಮಾಡಲಾಗುತ್ತಿಲ್ಲ. ಹೀಗಾಗಿ ನಾಲಾ ಅಭಿವೃದ್ಧಿಯಂತೆ ನದಿಯಲ್ಲಿನ ಹೂಳು ತೆಗೆಯುವ ಕೆಲಸ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸುತ್ತಾರೆ.
ಗ್ರಾಮದಲ್ಲಿ ನೀರಿನ ಸಮಸ್ಯೆ ಒಂದೆಡೆಯಾದರೆ ಇನ್ನೊಂದೆಡೆ ಸಮರ್ಪಕ ರಸ್ತೆ, ಬಸ್ ವ್ಯವಸ್ಥೆ ಇಲ್ಲ. ಹತ್ತರ್ಗಾ ಗ್ರಾಮದಿಂದ ಬಟಗೇರಾಕ್ಕೆ ಹೋಗುವ ರಸ್ತೆ ಹದಗೆಟ್ಟಿದೆ. ಬಸವಕಲ್ಯಾಣದಿಂದ ಮತ್ತು ಸಮೀಪದಲ್ಲಿಯೇ ಇರುವ ಆಳಂದದಿಂದ ಗ್ರಾಮಕ್ಕೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲ. ಎರಡು ಗಂಟೆಗೊಮ್ಮೆ ಬಸ್ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು. ರಸ್ತೆ ದುರಸ್ತಿ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಅಪೂರ್ಣಗೊಂಡಿರುವ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣಗೋಡೆ ಮತ್ತು ಪ್ರವೇಶ ದ್ವಾರ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಸಂಬಂಧಪಟ್ಟವರು ಇತ್ತ ಗಮನಹರಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ.
‘ನದಿಯ ಹೂಳು ತೆಗೆಯಬೇಕು’
‘ಬೇಸಿಗೆಯಲ್ಲೂ ತುಂಬಿ ಹರಿಯುತ್ತಿದ್ದ ಬೆಣ್ಣೆತೊರಾ ನದಿಯಲ್ಲಿನ ಹೂಳು ತೆಗೆಯುವ ಕಾರ್ಯವಾಗಬೇಕು. ಇದರಿಂದ ಕೃಷಿ ಚಟುವಟಿಕೆಗಳಿಗೆ, ಜಾನುವಾರುಗಳಿಗೆ ನೀರಿನ ಸೌಲಭ್ಯ ದೊರಕಲಿದೆ. ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಬೇಕು’.
– ಸತೀಶ ಪಾಟೀಲ, ಗ್ರಾಮಸ್ಥ
‘ಕೊಳವೆ ಬಾವಿ ಬರಿದಾಗಿವೆ’
‘ಗ್ರಾಮದಲ್ಲಿ ನೀರಿಗೆ ಹಾಹಾಕಾರ ಉಂಟಾಗಿದ್ದು, ಗ್ರಾಮದ ಕೊಳವೆ ಬಾವಿಗಳು ಬರಿದಾಗುತ್ತಿವೆ. ನದಿ ಸಮೀಪದಲ್ಲಿ ತೆರೆದ ಬಾವಿ ತೋಡಿ ಗ್ರಾಮಕ್ಕೆ ನೀರು ಸರಬರಾಜು ಮಾಡಬೇಕು’.
– ಗುಂಡಪ್ಪ ಸಿಂಗೆ, ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.