ADVERTISEMENT

ನಾ ಸತ್ತರೂ ಊರು ಉಳೀಲಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 8:15 IST
Last Updated 3 ಫೆಬ್ರುವರಿ 2011, 8:15 IST

ಬೀದರ್:  ನನ್ ಜೀವ ಹೋದುರ್ ಹೋಗ್ಲಿ, ಊರ್ ಉಳಿಬೇಕಂತ ಉರೇ ಗಾಡಿ ತೊಗೊಂಡ್ ಹೋಗಿನ್...ಉರಿಯುತ್ತಿದ್ದ ಟ್ಯಾಂಕರ್ ಅನ್ನು ಸಾಹಸದಿಂದ ನಗರದ ಹೊರಗಡೆ ಒಯ್ದು ಭಾರಿ ಅನಾಹುತ ತಪ್ಪಿಸಿದ ಚಾಲಕ ಚಂದ್ರಕಾಂತ ನಾಗಪ್ಪ ಹೂಗಾರ್ ಅವರ ಮಾತುಗಳಿವು.

ನಾಲ್ಕು ದಿನಗಳ ಹಿಂದೆ ನಗರದ ಜನವಾಡ ರಸ್ತೆಯಲ್ಲಿ ಇರುವ ಪೆಟ್ರೋಲ್ ಬಂಕ್‌ನಲ್ಲಿ ಟ್ಯಾಂಕರ್‌ನಿಂದ ಡಿಸೇಲ್ ಖಾಲಿ ಮಾಡಲಾಗಿತ್ತು. ಅದಾದ ಬಳಿಕ ವಾಹನ ತಿರುಗಿಸಿ ಪೆಟ್ರೋಲ್ ಖಾಲಿ ಮಾಡುವ ವೇಳೆ ಟ್ಯಾಂಕರ್‌ಗೆ ಬೆಂಕಿ ತಗುಲಿತ್ತು. ನಂತರ ಜ್ವಾಲೆ ಹೆಚ್ಚಾಗುತ್ತ ದೊಡ್ಡ ಅನಾಹುತದ ಮುನ್ಸೂಚನೆ ನೀಡಿತ್ತು. ಅಂಥ ಭಯಾನಕ ಸ್ಥಿತಿಯಲ್ಲಿ ಟ್ಯಾಂಕರ್ ಹತ್ತಿದ ಚಾಲಕ ಚಂದ್ರಕಾಂತ ಜೀವದ ಹಂಗು ತೊರೆದು ಅದನ್ನು ನಗರದ ಹೊರಗೆ ಒಯ್ದು ಆಗಬಹುದಾಗಿದ್ದ ಜೀವ ಮತ್ತು ಆಸ್ತಿ ಪಾಸ್ತಿ ಹಾನಿಯನ್ನು ತಪ್ಪಿಸಿದ್ದರು. ಹೀಗಾಗಿ ಅವರ ಸಾಹಸ ಮನೆ ಮಾತಾಗಿತ್ತು.

ಮೂಲತಃ ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ್ (ಕೆ) ಗ್ರಾಮದವರಾದ 44 ವರ್ಷದ ಚಂದ್ರಕಾಂತ ಸುಮಾರು 25 ವರ್ಷಗಳ ಕಾಲ ಟ್ಯಾಂಕರ್ ನಡೆಸಿರುವ ಅನುಭವ ಹೊಂದಿದ್ದಾರೆ. ವಾಹನ ಚಾಲನೆ ಕಲಿತದ್ದೇ ಟ್ಯಾಂಕರ್‌ನಿಂದ ಎಂದು ತಿಳಿಸುತ್ತಾರೆ ಅವರು.ಅಂದು ಪೆಟ್ರೋಲ್ ಇಳಿಸುವಾಗ ಟ್ಯಾಂಕರ್‌ಗೆ ಬೆಂಕಿ ತಗುಲಿತ್ತು. ಬಹುಶಃ ಮೊಬೈಲ್ ಕಿರಣಗಳಿಂದ ಬೆಂಕಿ ಹತ್ತಿರಬಹುದು. ಬೆಂಕಿ ಹತ್ತುತ್ತಲೇ ಆತಂಕಗೊಂಡೆ. ನಾನು ಸತ್ತರೂ ಪರವಾಗಿಲ್ಲ, ಜನ ಉಳಿಯಲಿ ಎಂದು ನಿರ್ಧರಿಸಿದೆ.

ತಕ್ಷಣವೇ ವಾಹನ ಹತ್ತಿದೆ. ಮೊದಲು ರಾಂಗ್ ಸೈಡ್‌ನಲ್ಲಿ ಹೋದೆ. ನಂತರ ವೇಗವಾಗಿ ನಗರದಾಚೆಗೆ ಹೊರಟೆ. ಎಲ್ಲಿಯೂ ಬ್ರೇಕ್ ಕೂಡ ಹಾಕಲಿಲ್ಲ. ಟ್ಯಾಂಕರ್ ಸ್ಫೋಟ ಆಗಬಹುದೆಂದು ಲೈಟ್ ಹಾಕಲೇ ಇಲ್ಲ. ಹಿಂದೆ ಉರಿಯುತ್ತಿದ್ದ ಬೆಂಕಿ ಗ್ಲಾಸ್‌ನಲ್ಲಿ ಕಾಣಿಸುತ್ತಿತ್ತು. ಮತ್ತು ಅದರ ಛಾಯೆ ವಾಹನದ ಮುಂದೆಯೂ ಕಂಡು ಬರುತ್ತಿತ್ತು. ಅದರ ಬೆಳಕಿನಲ್ಲೇ ವಾಹನವನ್ನು ಚಿಕ್‌ಪೇಟ್ ದಾಟಿಸಿದೆ. ಆಗ ಯಾವುದೇ ಕ್ಷಣದಲ್ಲಿ ಸ್ಫೋಟ್ ಆಗುವ ಸ್ಥಿತಿ ಇತ್ತು. ಟ್ಯಾಂಕರ್ ಹೇಗಾದರೂ ಸ್ಫೋಟಗೊಳ್ಳುತ್ತದೆ. ಆದರೆ, ಜನರ ಜೀವ ಉಳಿಸಬೇಕು ಎಂದು ಹೊರವಲಯದ ನಿರ್ಜನ ಪ್ರದೇಶಕ್ಕೆ ವಾಹನ ಒಯ್ದೆ. ಇನ್ನೇನು ಸಿಡಿಯುತ್ತದೆ ಎನ್ನುವಷ್ಟರಲ್ಲಿ ವಾಹನ ಬಿಟ್ಟು ಕೆಳಕ್ಕೆ ಹಾರಿದೆ. ಅದಾದ ಕ್ಷಣವೇ ಟ್ಯಾಂಕರ್ ಸ್ಫೋಟಗೊಂಡಿತ್ತು. ನಾನು ಕೆಳಗೆ ಜಿಗಿದು ಹೋದದ್ದನ್ನು ಅಗ್ನಿಶಾಮಕ ದಳದವರು ಕಂಡಿದ್ದರು.

ಟ್ಯಾಂಕರ್‌ಗೆ ಬೆಂಕಿ ತಗುಲಿದ್ದರಿಂದ ನನಗೆ ಭಾರಿ ಭಯವಾಗಿತ್ತು. ಯಾರಿಗಾದರೂ ಹಾನಿ ಆಗಿರಬಹುದು ಎಂದು ಆತಂಕವಾಗಿತ್ತು. ಹೀಗಾಗಿ ದಿಕ್ಕು ತೋಚದೇ ಓಡಿ ಹೋದೆ. ಆ ಭಯಾನಕ ದೃಶ್ಯಗಳನ್ನು ನೆನಪಿಸಿಕೊಂಡರೆ ಈಗಲೂ ಮೈ ಝಲ್ ಎನ್ನುತ್ತದೆ ಎಂದು ಹೇಳುತ್ತಾರೆ ಅವರು. ಘಟನೆಯಿಂದ ಮತ್ತೆ ಸಹಜ ಸ್ಥಿತಿಗೆ ಬರಲು ಮೂರ್ನಾಲ್ಕು ದಿನಗಳೇ ಬೇಕಾದವು ಎಂದು ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.