ADVERTISEMENT

ನಿವೇಶನ ನೀಡಲು ಜಿಲ್ಲಾಡಳಿತ ವಿಳಂಬ

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಆರೋಪ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2016, 11:32 IST
Last Updated 15 ಆಗಸ್ಟ್ 2016, 11:32 IST
ಬೀದರ್‌ನಲ್ಲಿ ಭಾನುವಾರ ನಡೆದ ಸಾಹಿತಿ, ಕಲಾವಿದರ ಜೀವನ ಸಾಧನೆಯ ಸಾಹಿತ್ಯ ಸಂಚಯ ಸಮಾರಂಭದಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ವಿಕ್ರಂ ವಿಸಾಜಿ ‘ಗಾಂಧಿ ಚೌಕ್‌’ ಪುಸಕ್ತ ಬಿಡುಗಡೆ ಮಾಡಿದರು
ಬೀದರ್‌ನಲ್ಲಿ ಭಾನುವಾರ ನಡೆದ ಸಾಹಿತಿ, ಕಲಾವಿದರ ಜೀವನ ಸಾಧನೆಯ ಸಾಹಿತ್ಯ ಸಂಚಯ ಸಮಾರಂಭದಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ವಿಕ್ರಂ ವಿಸಾಜಿ ‘ಗಾಂಧಿ ಚೌಕ್‌’ ಪುಸಕ್ತ ಬಿಡುಗಡೆ ಮಾಡಿದರು   

ಬೀದರ್: ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳು ನಿರಂತರವಾಗಿ ನಡೆಸಲು ಅಗತ್ಯವಿರುವ ಕನ್ನಡ ಭವನ ನಿರ್ಮಾಣಕ್ಕೆ ನಿವೇಶ ನೀಡಲು ಜಿಲ್ಲಾ­ಡಳಿತ ವಿಳಂಬ ಮಾಡುತ್ತಿದೆ ಎಂದು ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಆರೋಪಿಸಿದರು.

ನಗರದ ಹಾರೂರಗೇರಿ ಕಮಾನ್‌ ಸಮೀಪ ಇರುವ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಕಚೇರಿಯಲ್ಲಿ ಭಾನುವಾರ ನಡೆದ ಸಾಹಿತಿ, ಕಲಾವಿದರ ಜೀವನ ಸಾಧನೆಯ ಸಾಹಿತ್ಯ ಸಂಚಯ ಹಾಗೂ ಡಾ. ಸೋಮನಾಥ ನುಚ್ಚಾ ಅವರು ಬರೆದ ‘ಗಾಂಧಿ ಚೌಕ್‌’ ಪುಸಕ್ತ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕನ್ನಡ ಭವನ ನಿರ್ಮಾಣಕ್ಕೆ ₹5 ಕೋಟಿ ಅನುದಾನ ಹಾಗೂ ನಿವೇಶ ಕಲ್ಪಿಸಬೇಕೆಂದು ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದಿದ್ದರು. ಈ ವಿಷಯ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಆದರೆ, ಅವರು ಭೇಟಿಯಾದಗೊಮ್ಮೆ ಎರಡು–ಮೂರು ದಿನಗಳ ಒಳಗೆ ನಿವೇಶ ಕೊಡುತ್ತೇನೆ ಎನ್ನುತ್ತಿದ್ದಾರೆ. ಕೆಲವೊಮ್ಮೆ ಅವರು ಕನ್ನಡ ಸಾಹಿತ್ಯ ಪರಿಷತ್‌ ಒಂದು ಖಾಸಗಿ ಸಂಸ್ಥೆಯಾಗಿದೆ. ಅದಕ್ಕೆ ನಿವೇಶ ಏಕೆ ನೀಡಬೇಕು ಎಂಬ ಉಡಾಫೆ ಮಾತು ಕೂಡ ಆಡುತ್ತಿದ್ದಾರೆ ಎಂದು ದೂರಿದರು.

ಜಿಲ್ಲಾಡಳಿತ ವತಿಯಿಂದ ಆದಷ್ಟು ಬೇಗ ಒಂದು ಸೂಕ್ತವಾದ ನಿವೇಶ ಪರಿಷತ್ತಿಗೆ ಒದಗಿಸಿದರೆ ಕನ್ನಡ ಭವನ ನಿರ್ಮಾಣ ಮಾಡಲು ಅನುಕೂಲವಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಪರಿಷತ್ತಿನ ಕಾರ್ಯ ಚಟುವಟಿಕೆಗಳನ್ನು ವೇಗವಾಗಿ ನಡೆಸಬೇಕಾಗಿದೆ. ಈ ಪ್ರಯುಕ್ತ ಇದೇ 19 ರಿಂದ ‘ಪರಿಷತ್ತಿನ ನಡೆ, ಶಾಲೆ ಕಡೆ’ ಎಂಬ ವಿನೂತನ ಕಾರ್ಯಕ್ರಮ ಹುಮನಾನಾದ್‌ನಿಂದ ಆರಂಭಿಸಲಾಗು­ವುದು. ಈ ಕಾರ್ಯಕ್ರಮಕ್ಕೆ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಮನು ಬಳಿಗಾರ ಅವರು ಚಾಲನೆ ನೀಡಲಿದ್ದಾರೆ ಎಂದರು.

ಬರುವ ದಿನಗಳಲ್ಲಿ ಪರಿಷತ್‌ ವತಿಯಿಂದ ಜಿಲ್ಲೆಯ ಜನನಿಬಿಡ ಪ್ರದೇಶದಲ್ಲಿ ಕವಿಗೋಷ್ಠಿ ಆಯೋಜಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಕವಿ ಅಂಗಳದಲ್ಲಿ ಕಾವ್ಯ, ಕಸಾಪ ಪದಾಧಿಕಾರಿಗಳಿಗೆ ಕಮ್ಮಟ ಸೇರಿದಂತೆ ಇನ್ನಿತರ ವಿನೂತನ ಕಾರ್ಯಕ್ರಮಗಳು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಸೆಪ್ಟೆಂಬರ್‌ ನಂತರ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಸಮ್ಮೇಳನಗಳು ನಡೆಸಲಾಗುವುದು ಎಂದು ಹೇಳಿದರು.

ಡಾ. ಸೋಮನಾಥ ನುಚ್ಚಾ ಅವರು ಬರೆದ ‘ಗಾಂಧಿ ಚೌಕ್‌’ ಪುಸಕ್ತ ಕುರಿತು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ವಿಕ್ರಂ ವಿಸಾಜಿ ಮಾತನಾಡಿದರು. ಡಾ. ರಘುಶಂಖ ಭಾತಂಬ್ರಾ ಉಪನ್ಯಾಸ ನೀಡಿದರು. ಪತ್ರಕರ್ತ ಸದಾನಂದ ಜೋಶಿ ಕಾರ್ಯಕ್ರಮ ಉದ್ಘಾಟಿಸಿದರು.

ಹಿರಿಯ ಸಾಹಿತಿ ದೇಶಾಂಶ ಹುಡುಗಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ. ಸೋಮನಾಥ ನುಚ್ಚಾ, ಉದ್ಯಮಿ ಬಸವರಾಜ ಧನ್ನೂರು ಇದ್ದರು. ಪರಿಷತ್ತಿನ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಡಾ. ಬಸವರಾಜ ಬಲ್ಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧ್ಯಕ್ಷ ಟಿ.ಎಂ. ಮಚ್ಚೆ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.