ADVERTISEMENT

ಪಠ್ಯದಲ್ಲಿ ಜಾನಪದ ವಿಷಯ: ಆಶಯ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 9:55 IST
Last Updated 18 ಫೆಬ್ರುವರಿ 2012, 9:55 IST

ಔರಾದ್: ಪ್ರಾಥಮಿಕ ಹಂತದಿಂದ ಜಾನಪದ ವಿಷಯ ಪಠ್ಯಕ್ರಮದಲ್ಲಿ ಅಳವಡಿಸುವಂತೆ ಖ್ಯಾತ ಹಾಸ್ಯ ಕಲಾವಿದ ಮತ್ತು ಬೀದರ್ ಜಿಲ್ಲಾ ಪ್ರಥಮ ಜಾನಪದ ಸಮ್ಮೇಳನಾಧ್ಯಕ್ಷ ವೈಜಿನಾಥ ಬಿರಾದಾರ ಸಲಹೆ ನೀಡಿದರು.

ಸಮ್ಮೇಳನ ನಿಮಿತ್ತ ಗುರುವಾರ ಇಲ್ಲಿಯ ಅಮರೇಶ್ವರ ವೇದಿಕೆಯಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ಅಳಿದು ಹೋಗುತ್ತಿರುವ ನಮ್ಮ ಜಾನಪದ ಕಲೆ ಉಳಿಸಲು ಸಾಮೂಹಿಕ ಪ್ರಯತ್ನ ಆಗಬೇಕಿದೆ. ಸಾಕಷ್ಟು ಕಡೆ ಜಾನಪದ ಕಲೆ ಮತ್ತು ಕಲಾವಿದರ ಬಗ್ಗೆ ಕೀಳರಿಮೆ ಇದೆ. ಇದನ್ನು ಹೋದರೆ ಮಾತ್ರ ಕಲಾವಿದರು ಮತ್ತು ಕಲೆ ಉಳಿಯಲಿದೆ ಎಂದು ತಿಳಿಸಿದರು.

ಗ್ರಾಮೀಣ ಭಾಗದ ಜಾನಪದ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಕಲೆ ಮೇಲೆ ಅವಲಂಬಿಸಿದ ಅನೇಕ ಕಲಾವಿದರಿಗೆ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದಂತಾಗಿದೆ. ಇಂಥ ಕಲಾವಿದರನ್ನು ಗುರುತಿಸಿ ಅವರ ಬದುಕಿಗೆ ನೆರವು ಕಲ್ಪಿಸಬೇಕಾಗಿದೆ ಎಂದರು. ಜಿಲ್ಲೆಯಲ್ಲಿ ಸಾಕಷ್ಟು ದೊಡ್ಡಾಟ ಕಲಾವಿದರಿದ್ದಾರೆ.
 
ಯಕ್ಷಗಾನ ಕಲಾವಿದರಂತೆ ದೊಡ್ಡಾಟ ಕಲಾವಿದರಿಗೂ ಬೆಳೆಸಲು ಸರ್ಕಾರ ಮುಂದಾಗಬೇಕು. ಕಲಾವಿದರ ಬಗ್ಗೆ ತಾರತಮ್ಯ ಮಾಡದೆ ಎಲ್ಲರಿಗೂ ಸಮಾನ ದೃಷ್ಟಿಯಿಂದ ನೋಡುವಂತಾಗಬೇಕು ಎಂದು ಹೇಳಿದರು.

ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ ಮಾತನಾಡಿ, ಔರಾದ್‌ನಲ್ಲಿ ನಡೆಯುತ್ತಿರುವ ಪ್ರಥಮ ಜಿಲ್ಲಾ ಜಾನಪದ ಸಮ್ಮೇಳನ ಇಲ್ಲಿಯ ಜಾನಪದ ಕಲಾವಿದರಿಗೆ ಸ್ಪೂರ್ತಿ ಸಿಗಲಿದೆ ಎಂದರು, ಹೊರಗಿನ ಹಾಗೂ ಸ್ಥಳೀಯ ಜಾನಪದ ಕಲೆ ಪ್ರದರ್ಶನಕ್ಕೆ ಈ ಸಮ್ಮೇಳನ ವೇದಿಕೆ ಕಲ್ಪಿಸಿದೆ. ಇದೊಂದು ಕಲಾವಿದರ ಸಂಗಮ ಎಂದು ಬಣ್ಣಿಸಿದರು.

ಚರ್ಮ ನಿಮಗ ಅಧ್ಯಕ್ಷ ರಾಜೇಂದ್ರ ವರ್ಮಾ ಮಾತನಾಡಿ, ಗುಡಿ ಕೈಗಾರಿಕೆ ಸ್ಥಾಪಿಸಲು ಮುಂದೆ ಬರುವ ಕಲಾವಿದರಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಹೇಳಿದರು. ನಮ್ಮ ಭಾರತೀಯ ಕಲಾ ಪರಂಪರೆ ಉಳಿಯಲು ಜಾನಪದ ಕಲೆಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ, ಕೆಆರ್‌ಇ ಸಂಸ್ಥೆ ಅಧ್ಯಕ್ಷ ಚೆನ್ನಬಸಪ್ಪ ಹಾಲಹಳ್ಳಿ ಮಾತನಾಡಿದರು. ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದ್ದೇವರು ಸಾನಿಧ್ಯ ವಹಿಸಿದರು.
 
ಸಂಜುಕುಮಾರ ಜುಮ್ಮಾ, ಡಾ. ವೈಜಿನಾಥ ಬುಟ್ಟೆ, ಬಸವರಾಜ ದೇಶಮುಖ, ಕಲ್ಪಪ್ಪ ದೇಶಮುಖ, ಶಿವಾಜಿರಾವ ಪಾಟೀಲ, ಶಿವಶರಣಪ್ಪ ವಲ್ಲೇಪುರೆ ಉಪಸ್ಥಿತರಿದ್ದರು. ನಿಜಲಿಂಗಪ್ಪ ತಗಾರೆ, ಸೂರ್ಯಕಾಂತ ಸಿಂಗೆ ಕಾರ್ಯಕ್ರಮ ನಡೆಸಿಕೊಟ್ಟರು. ಚಂದ್ರಕಾಂತ ನಿರ್ಮಳೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.