ADVERTISEMENT

ಪ್ರವಾಸೋದ್ಯಮ ಪ್ರಗತಿ ಗುರಿ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2012, 8:15 IST
Last Updated 16 ಆಗಸ್ಟ್ 2012, 8:15 IST

ಬೀದರ್: ಐತಿಹಾಸಿಕ ಪರಂಪರೆಯ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಚುರುಕು ನೀಡಲಾಗಿದ್ದು, ಅಗತ್ಯ ಅನುದಾನ ಬಿಡುಗಡೆ ಮಾಡಲಾಗಿದೆ. ಪ್ರವಾಸೋದ್ಯಮದ ಮೂಲಕ ಸ್ಥಳೀಯ ಆರ್ಥಿಕತೆ ಬಲಪಡಿಸಲು ಪೂರಕ ಯೋಜನೆ ಜಾರಿಗೊಳಿಸಲು, ಪೂರಕವಾಗಿ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಉಸ್ತುವಾರಿ ಸಚಿವ ಸುನೀಲ್ ವಲ್ಯ್‌ಪುರೆ ಹೇಳಿದರು.

ಬುಧವಾರ ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮುಖ್ಯ ಭಾಷಣ ಮಾಡಿದ ಅವರು, ಜಿಲ್ಲೆಯು ಅತ್ಯಧಿಕ ಪ್ರವಾಸಿ ತಾಣಗಳನ್ನು ಹೊಂದಿದ್ದರೂ ಹಲವು ವರ್ಷಗಳಿಂದ ಕಡೆಗಣಿಗೆ ಒಳಗಾಗಿದೆ ಎಂಬುದನ್ನು ಅವರು ಉಲ್ಲೇಖಿಸಿದರು.

ಅಭಿವೃದ್ಧಿಯ ಲಾಭ ಕಡೆಯ ಹಂತದ ವ್ಯಕ್ತಿಗೂ ತಲುಪಿಸುವುದು ನಮ್ಮ ಗುರಿ. ಪೂರಕವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ಒತ್ತು ನೀಡಲಾಗಿದೆ. ಗ್ರಾಮ ಪಂಚಾಯಿತಿಗಳ ಮೂಲಸೌಲಭ್ಯ, ಸಂಪನ್ಮೂಲಗಳ ಮಾಹಿತಿ ಕುರಿತು ಸಮೀಕ್ಷೆ ನಡೆಸಲು ಚಾಲನೆ ನೀಡಲಾಗಿದೆ ಎಂದರು.

ADVERTISEMENT

ಕಳೆದ ವರ್ಷ ಕಂಡುಬಂದ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಪರಿಹಾರ ಕಾಮಗಾರಿಗಳಿಗೆ 2012-13ನೇ ಸಾಲಿನಲ್ಲಿ ರೂ. 5.5 ಕೋಟಿ ಬಿಡುಗಡೆ ಆಗಿದೆ. ಇದರಲ್ಲಿ ನೀರು ಪೂರೈಕೆ, ಕೊಳವೆ ಬಾವಿಗಳ ಸ್ವಚ್ಛತೆ, ಮೇವು ಸಂಗ್ರಹಣೆ, ಮಾಂಜ್ರಾ ನದಿಗೆ ತಡೆ ಗೋಡೆ ನಿರ್ಮಿಸುವುದು, ಕೊಳವೆ ಮಾರ್ಗ ಅಳವಡಿಕೆ  ಕೈಗೊಳ್ಳಲು ಯೋಜಿಸಲಾಗಿದೆ ಎಂದರು.

ಅಲ್ಲದೆ, ಜಿಲ್ಲಾ ಆಸ್ಪತ್ರೆಗೆ 2.35 ಕೋಟಿ ರೂಪಾಯಿ ವೆಚ್ಚದಲ್ಲಿ ಸಿ.ಟಿ.ಸ್ಕ್ಯಾನಿಂಗ್ ಯಂತ್ರ ಖರೀದಿ, ಗಣಕೀಕೃತ ರೆಡಿಯೋಗ್ರಫಿ, ಎಕ್ಸ್‌ರೇ ಯಂತ್ರ ಖರೀದಿ ಉದ್ದೇಶಿಸಲಾಗಿದೆ. ನಗರದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ಮಾಣ ಕಾಮಗಾರಿ 2.61 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಗತಿಯಲ್ಲಿದೆ ಎಂದು ವಿವರಿಸಿದರು.

ಸಚಿವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಇತರ ಅಂಶಗಳು: ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ನಗರ ಅಭಿವದ್ಧಿ ಯೋಜನೆ ಅಡಿಯಲ್ಲಿ  2012-13ರಲ್ಲಿ ರೂ. 24.17 ಕೋಟಿ ಮಂಜೂರಾಗಿದ್ದು ಪಟ್ಟಣಗಳ ಅಭಿವದ್ಧಿಗಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಾಜಪೇಯಿ ನಗರ ಆಶ್ರಯ ಯೋಜನೆಯಡಿ ನಗರಗಳಲ್ಲಿ 4650 ಮನೆಗಳು ಹಾಗೂ 2300 ನಿವೇಶನಗಳನ್ನು ರಚಿಸಲಾಗುವುದು.

ಗ್ರಾಮಿಣ ಭಾಗದಲ್ಲಿ ಕುಡಿವ ನೀರಿನ ವ್ಯವಸ್ಥೆಗಾಗಿ 643 ಕಾಮಗಾರಿಗಳನ್ನು ರೂ. 59 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಿದ್ದು, ರೂ. 36 ಕೋಟಿ ಅನುದಾನ ಒದಗಿಸಲಾಗಿದೆ. ಔರಾದ್ ತಾಲೂಕಿನಲ್ಲಿ 122, ಭಾಲ್ಕಿ 153, ಬಸವಕಲ್ಯಾಣ 130, ಬೀದರ್ 133, ಹಾಗೂ ಹುಮನಾಬಾದ್ ತಾಲೂಕಿನಲ್ಲಿ 104ಕಾಮಗಾರಿಗಳು ಸೇರಿವೆ. ಸುವರ್ಣ ಭೂಮಿ ಯೋಜನೆಯಗಡಿ ರೈತರಿಗೆ ಆರ್ಥಿಕ ನೆರವು ನೀಡಲು 5.6 ಕೋಟಿ ರೂ ಬಿಡುಗಡೆಯಾಗಿದೆ ಮತ್ತು ಭೂಚೇತನ ಯೋಜನೆಯಡಿ ಜಿಲ್ಲೆಯಾದ್ಯಂತ ರೂ. 1.7 ಕೋಟಿ ಸಹಾಯಧನದಲ್ಲಿ ಫಲಾನುಭವಿ ರೈತರಿಗೆ ಕೃಷಿ ಪರಿಕರ ಪೂರೈಸಲಾಗುವುದು.

ನಬಾರ್ಡ್ ನೆರವಿನಲ್ಲಿ ರೂ. 5.25 ಕೋಟಿ ವೆಚ್ಚದಲ್ಲಿ 27 ಕಿ.ಮೀ. ರಸ್ತೆಗಳನ್ನು ಅಭಿವೃದ್ಧಿ ಪಡಿಸಲಿದ್ದು, ಹಾಲಿ ಇರುವ ರಸ್ತೆಗಳ ನಿರ್ವಹಣೆಗೆ ರೂ. 1.37 ಕೋಟಿ ಬಿಡುಗಡೆ ಮಾಡಲಾಗಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿ  2012-13ನೇ ಸಾಲಿನಲ್ಲಿ 4.78 ಕೋಟಿ ರೂ. ವೆಚ್ಚದಲ್ಲಿ 12 ಕಿಮೀ ರಸ್ತೆ ಅಭಿವೃದ್ಧಿ ಚಾಲನೆ ನೀಡಲಾಗಿದೆ.

ಅಂಗನವಾಡಿ ಕೇಂದ್ರಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿದ್ದು,  ಮೊದಲಿಗೆ ಭಾಲ್ಕಿ ತಾಲ್ಲೂಕಿನಲ್ಲಿ ರೂ. 2 ಕೋಟಿ ವೆಚ್ಚದಲ್ಲಿ 187 ಅಂಗನವಾಡಿ ಕೇಂದ್ರ ಅಭಿವೃದ್ಧಿ ಪಡಿಸಲಿದ್ದು,  ಎಲ್ಲಾ ತಾಲೂಕುಗಳಿಗೆ ವಿಸ್ತರಿಸಲಾಗುವುದು.

ಇದಕ್ಕೂ ಮುನ್ನ ಸಚಿವರು ಪಥ ಸಂಚಲನ ವೀಕ್ಷಿಸಿ ವಂದನೆ ಸ್ವೀಕರಿಸಿದರು.

ಶಾಸಕ ರಹೀಮ್ ಖಾನ್ ಅಧ್ಯಕ್ಷತೆ ವಹಿಸಿದ್ದು, ಶಾಸಕ ಬಂಡೆಪ್ಪಾ ಕಾಶೆಂಪೂರ, ರಘುನಾಥ ಮಲ್ಕಾಪುರೆ, ಮಾಜಿ ಶಾಸಕ ರಾಜೇಂದ್ರ ವರ್ಮಾ, ಜಿಪಂ ಅಧ್ಯಕ್ಷ ಬಾಬುರಾವ್ ಕಾರಬಾರಿ, ಉಪಾಧ್ಯಕ್ಷೆ ಸಂತೋಷಮ್ಮ, ಪ್ರಭಾರ ಜಿಲ್ಲಾಧಿಕಾರಿ ಸಿ.ಎಂ.ನೂರ್ ಮನಸೂರ, ಎಸ್‌ಪಿ ಎನ್.ಸತೀಶ್ ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಮೀರ್ ಅನೀಸ್ ಅಹ್ಮದ್ ಮತ್ತು ಇತರೆ ಅಧಿಕಾರಿಗಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.