ADVERTISEMENT

ಪ್ರವೇಶ ಪರೀಕ್ಷೆಗೆ 3,596 ವಿದ್ಯಾರ್ಥಿಗಳು

ವಸತಿ ಶಾಲೆ ಪ್ರವೇಶ: ಏಪ್ರಿಲ್‌ 7ರಂದು ಅರ್ಹತಾ ಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2014, 8:56 IST
Last Updated 24 ಮಾರ್ಚ್ 2014, 8:56 IST

ಬೀದರ್‌: ಜಿಲ್ಲೆಯಲ್ಲಿ ಇರುವ ವಿವಿಧ 18 ವಸತಿ ಶಾಲೆಗಳಿಗೆ 2014–15ನೇ ಶೈಕ್ಷಣಿಕ ಸಾಲಿಗೆ 6ನೇ ತರಗತಿಗೆ ಪ್ರವೇಶ ಪಡೆಯಲು ಭಾನುವಾರ ನಗರ ಸೇರಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ ನಡೆದಿದ್ದು, 3,596 ವಿದ್ಯಾರ್ಥಿಗಳು ಹಾಜರಾಗಿದ್ದರು. ಒಟ್ಟು 900 ಸೀಟುಗಳು ಲಭ್ಯವಿವೆ.

ಜಿಲ್ಲೆಯಲ್ಲಿ ಇರುವ ವಸತಿ ಶಾಲೆಗಳಿಗೆ ಪ್ರವೇಶ ಪರೀಕ್ಷೆ ಬರೆಯಲು ಒಟ್ಟು 3,717 ವಿದ್ಯಾರ್ಥಿಗಳು ಹೆಸರು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 121 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು. ಪರೀಕ್ಷೆ ಬರೆದವರಲ್ಲಿ 550 ಮಂದಿ ವಿದ್ಯಾರ್ಥಿನಿಯರು ಸೇರಿದ್ದಾರೆ.

ಜಿಲ್ಲೆಯಲ್ಲಿ 4 ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಹಾಗೂ 14 ಮೊರಾರ್ಜಿ ದೇಸಾಯಿ ವಸತಿ ಶಾಲೆ ಇದ್ದು, ಒಟ್ಟು 12 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿದೆ ಎಂದು ನಗರದ ರಾಂಪುರೆ ಕಾಲೊನಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಶರಣಪ್ಪ ಬಿರಾದಾರ್‌ ತಿಳಿಸಿದ್ದಾರೆ.

ಬೀದರ್‌ ನಗರ, ಔರಾದ್‌ ಮತ್ತು ಹುಮನಾಬಾದ್ ಪಟ್ಟಣಗಳಲ್ಲಿ ತಲಾ ಮೂರು ಕೇಂದ್ರಗಳು, ಬಸವಕಲ್ಯಾಣನಲ್ಲಿ ಎರಡು ಹಾಗೂ ಭಾಲ್ಕಿಯಲ್ಲಿ 1 ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ ಆಯೋಜಿಸಲಾಗಿತ್ತು.

ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ  ವಿದ್ಯಾರ್ಥಿನಿಯರಿಗೆ ಶೇ 100 ಮತ್ತು  ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಶೇ 50ರಷ್ಟು ಸೀಟುಗಳು  ಕಾದಿರಿಸಲಾಗಿದೆ.

ಪ್ರವೇಶ ಪರೀಕ್ಷೆಯ ಅಂಕಗಳು ಮತ್ತು ಮೀಸಲಾತಿಗೆ ಅನುಗುಣವಾಗಿ ಅರ್ಹತಾ ಪಟ್ಟಿಯನ್ನು ಏ. 7ರಂದು  ರಾಂಪುರೆ ಕಾಲೊನಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ಪ್ರಕಟಿಸ­ಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.