ADVERTISEMENT

ಪ್ರಾಬಲ್ಯ ಮೆರೆದ ಕಾಂಗ್ರೆಸ್

ಜಿಲ್ಲೆಯಲ್ಲಿ ಒಂದೇ ಸ್ಥಾನಕ್ಕೆ ಸೀಮಿತವಾದ ಬಿಜೆಪಿ

ಚಂದ್ರಕಾಂತ ಮಸಾನಿ
Published 16 ಮೇ 2018, 10:31 IST
Last Updated 16 ಮೇ 2018, 10:31 IST

ಬೀದರ್: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೆರೆದಿದೆ. ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಕಾಂಗ್ರೆಸ್, ತಲಾ ಒಂದರಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಗೆಲುವಿನ ನಗೆ ಬೀರಿವೆ.

ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಈಶ್ವರ ಖಂಡ್ರೆ, ಹುಮನಾಬಾದ್‌ನಲ್ಲಿ ರಾಜಶೇಖರ ಪಾಟೀಲ, ಬೀದರ್‌ನಲ್ಲಿ ರಹೀಂಖಾನ್ ಹಾಗೂ ಬಸವಕಲ್ಯಾಣದಲ್ಲಿ ಬಿ. ನಾರಾಯಣರಾವ್, ಔರಾದ್‌ನಲ್ಲಿ ಬಿಜೆಪಿಯ ಪ್ರಭು ಚವಾಣ್ ಹಾಗೂ ಬೀದರ್ ದಕ್ಷಿಣದಲ್ಲಿ ಜೆಡಿಎಸ್‌ನ ಬಂಡೆಪ್ಪ ಕಾಶೆಂಪುರ ವಿಜಯ ದುಂದುಬಿ ಹಾರಿಸಿದ್ದಾರೆ.

1999 ರಲ್ಲಿ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ 5 ರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಆದರೆ, ಆಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಈ ಬಾರಿ 6 ರಲ್ಲಿ ನಾಲ್ಕು ಕ್ಷೇತ್ರಗಳು ‘ಕೈ’ವಶವಾಗಿವೆ. ಈಶ್ವರ ಖಂಡ್ರೆ, ರಾಜಶೇಖರ ಪಾಟೀಲ ಹಾಗೂ ರಹೀಂಖಾನ್ ನಿರೀಕ್ಷೆಯಂತೆ ಗೆಲುವು ಸಾಧಿಸಿದ್ದರೆ, ಬಿ. ನಾರಾಯಣರಾವ್ ಅವರು ಬಿಜೆಪಿ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ವಿರುದ್ಧ ಭಾರಿ ಬಹುಮತದಿಂದ ಗೆಲುವು ಸಾಧಿಸಿ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗುವಂತೆ ಮಾಡಿದ್ದಾರೆ.

ADVERTISEMENT

ನಿರೀಕ್ಷಿತ ಫಲಿತಾಂಶ: ಬೀದರ್‌ ದಕ್ಷಿಣದಲ್ಲಿ ನಿರೀಕ್ಷೆಯಂತೆ ಜೆಡಿಎಸ್‌ ಅಭ್ಯರ್ಥಿ ಬಂಡೆಪ್ಪ ಕಾಶೆಂಪುರ ಜಯಭೇರಿ ಬಾರಿಸಿ ಮೂರನೇ ಬಾರಿಗೆ ವಿಧಾನಸಭೆಗೆ ಪ್ರವೇಶ ಪಡೆದಿದ್ದಾರೆ. ಬಂಡೆಪ್ಪ ಮೊದಲ ಬಾರಿ ಬೀದರ್‌ ಕ್ಷೇತ್ರದಿಂದ ಹಾಗೂ ಎರಡನೇ ಬಾರಿಗೆ ಬೀದರ್‌ ದಕ್ಷಿಣದಿಂದ ಆಯ್ಕೆಯಾಗಿದ್ದರು. ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ ವಿರೋಧಿ ಅಲೆಯ ಪೂರ್ಣ ಲಾಭ ಪಡೆದು ಬಂಡೆಪ್ಪ ಸುಲಭ ಜಯ ಸಾಧಿಸಿದ್ದಾರೆ.

ಮರು ಆಯ್ಕೆಯಾಗುವ ಭರವಸೆಯ ಮೇಲೆ ಅಶೋಕ ಖೇಣಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಕೊಡಲಾಗಿತ್ತು. ಕೊನೆಯ ಕ್ಷಣದಲ್ಲಿ ಖೇಣಿ ಕಾಂಗ್ರೆಸ್‌ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರನ್ನು ಪರಿಚಯಿಸಿ ಕೊಳ್ಳುವುದಕ್ಕೂ ಸಮಯ ಇಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ಅವರ ಅಳಿಯ ಚಂದ್ರಾಸಿಂಗ್‌ ಅವರಿಗೆ ಟಿಕೆಟ್‌ ನಿರಾಕರಿಸಿದ ಕಾರಣ ಬಹುತೇಕ ಕಾಂಗ್ರೆಸ್‌ ಕಾರ್ಯಕರ್ತರು ಚುನಾವಣೆಯಲ್ಲಿ ತಟಸ್ಥರಾಗಿ ಉಳಿದಿದ್ದರು.

ಬಲಿಷ್ಠಗೊಂಡ ಗೌಡರ ಕೋಟೆ:
ಕಾಂಗ್ರೆಸ್‌ನ ರಾಜಶೇಖರ ಪಾಟೀಲ ಗೆಲುವಿನ ಹ್ಯಾಟ್ರಿಕ್ ಸಾಧಿಸಿದ್ದು, ನಾಲ್ಕನೆಯ ಬಾರಿಗೆ ವಿಧಾನಸಭೆಗೆ ಪ್ರವೇಶ ಪಡೆದಿದ್ದಾರೆ. ರಾಜಶೇಖರ ಪಾಟೀಲರನ್ನು ಪರಾಭವಗೊಳಿಸಲು ಬಿಜೆಪಿ ಹಾಗೂ ಜೆಡಿಎಸ್‌ ಶಕ್ತಿ ಮೀರಿ ಪ್ರಯತ್ನ ನಡೆಸಿದರೂ ಅದು ಸಾಧ್ಯವಾಗಲಿಲ್ಲ. ಅವರು ಅತಿಹೆಚ್ಚು ಮತಗಳ ಅಂತರದಿಂದ ಪ್ರತಿಸ್ಪರ್ಧಿಯನ್ನು ಪರಾಭವಗೊಳಿಸಿ ಪ್ರಾಬಲ್ಯ ಮೆರೆದಿದ್ದಾರೆ.

ಜೆಡಿಎಸ್‌ನ ನಸಿಮೋದ್ದಿನ್‌ ಪಟೇಲ್‌ ಪ್ರಬಲ ಪೈಪೋಟಿ ನೀಡುವ ಹಂತದಲ್ಲಿದ್ದಾಗ ರಾಜಶೇಖರ ಅವರು ನಸಿಮೋದ್ದಿನ್ ಸಹೋದರ ದಿ. ಮೆರಾಜುದ್ದಿನ್‌ ಪುತ್ರಿಯರು ಹಾಗೂ ಅಳಿಯಂದಿರನ್ನು ಕಾಂಗ್ರೆಸ್‌ಗೆ ಕರೆತಂದು ಹೊಸ ತಂತ್ರ ಅನುಸರಿಸಿದರು. ಮತಗಳು ವಿಭಜನೆಯಾಗದಂತೆ ಎಚ್ಚರಿಕೆಯ ನಡೆ ಇಟ್ಟಿದ್ದರಿಂದ ಗೆಲುವು ಸಾಧ್ಯವಾಗಿದೆ. ರಾಜಶೇಖರ ಪಾಟೀಲ ಕ್ಷೇತ್ರದ ಮೇಲೆ ಹಿಡಿತ ಇಟ್ಟುಕೊಂಡಿರುವುದು ಮತ್ತೆ ಸಾಬೀತಾಗಿದೆ.

ಭಾಲ್ಕಿ ವಿಧಾನ ಸಭಾ ಕ್ಷೇತ್ರ ಜಿಲ್ಲೆಯ ಜಿದ್ದಾ ಜಿದ್ದಿನ ಕ್ಷೇತ್ರವಾಗಿ ಗುರುತಿಸಿಕೊಂಡಿತ್ತು. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟಿತ್ತು. ಬಿಜೆಪಿಯ ಡಿ.ಕೆ. ಸಿದ್ರಾಮ ಖಂಡ್ರೆ ಸಹೋದರರಿಗೆ ಸವಾಲಾಗಿ ಪರಿಣಮಿಸಿದ್ದರು. ಕೊನೆಯ ಕ್ಷಣದಲ್ಲಿ ಈಶ್ವರ ಖಂಡ್ರೆ ಮತದಾರರನ್ನು ಸೆಳೆದು 84,673 ದಾಖಲೆಯ ಮತಗಳನ್ನು ಪಡೆದುಕೊಂಡಿದ್ದಾರೆ.

ಪ್ರಕಾಶ ಖಂಡ್ರೆ ಅಂತಿಮ ಹಂತದಲ್ಲಿ ಬಿಜೆಪಿ ತೊರೆದು ಜೆಡಿಎಸ್‌ ಸೇರಿದ್ದರು. ಬಿಜೆಪಿಯ ಡಿ.ಕೆ.ಸಿದ್ರಾಮ ಎಲ್ಲ ಬಗೆಯ ರಾಜಕೀಯ ತಂತ್ರ ಅನುಸರಿಸಿದರೂ ಈಶ್ವರ ಖಂಡ್ರೆ ಅವರ ಭದ್ರ ಕೋಟೆ ಭೇದಿಸಲು ಸಾಧ್ಯವಾಗಲಿಲ್ಲ. ರಾಜಕೀಯ ಜೀವನದ ಆರಂಭದಲ್ಲೇ ಸೋಲುಂಡಿದ್ದ ಈಶ್ವರ ಖಂಡ್ರೆ ಅವರು ಪ್ರಕಾಶ ಖಂಡ್ರೆ ಅವರನ್ನು 3 ಬಾರಿ ಪರಾಭವಗೊಳಿಸಿದರೆ, ಡಿ.ಕೆ.ಸಿದ್ರಾಮ ಅವರನ್ನು 2 ಬಾರಿ ಸೋಲಿಸಿದ್ದಾರೆ.

ಪರಿಣಾಮ ಬೀರದ ಮೋದಿ ಭೇಟಿ

ಬೀದರ್‌: ಪ್ರಧಾನಿ ನರೇಂದ್ರ ಮೋದಿ ಅವರ ಬೀದರ್ ಭೇಟಿ ಮತದಾರರ ಮೇಲೆ ಹೆಚ್ಚಿನ ಪರಿಣಾಮ ಬೀರಲಿಲ್ಲ.ಚುನಾವಣೆಗೆ ಮೂರು ದಿನ ಮುಂಚೆ ಅಂದರೆ ಮೇ 9ರಂದು ಮೋದಿ ಬೀದರ್‌ಗೆ ಭೇಟಿ ನೀಡಿ ಬೃಹತ್‌ ಪ್ರಚಾರಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು.

ಹೀಗಾಗಿ ಮೋದಿ ಅಲೆ ಮತಗಳಾಗಿ ಪರಿವರ್ತನೆ ಆಗಲಿದೆ ಎಂದು ಕಾರ್ಯಕರ್ತರು ಭಾವಿಸಿದ್ದರು. ಜಿಲ್ಲೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದೇ ನಂಬಿದ್ದರು. ಆದರೆ, ಅವರ ನಿರೀಕ್ಷೆಗಳೆಲ್ಲ ಹುಸಿಯಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.