ADVERTISEMENT

ಫ್ಲೆಕ್ಸ್ ಹಾವಳಿಗೆ ನೀತಿ ಸಂಹಿತೆ ಕಡಿವಾಣ

ಪ್ರಜಾವಾಣಿ ವಿಶೇಷ
Published 8 ಏಪ್ರಿಲ್ 2013, 6:35 IST
Last Updated 8 ಏಪ್ರಿಲ್ 2013, 6:35 IST

ಬೀದರ್: ಈಗ ಚುನಾವಣೆ ಕಾಲ. ಬೇಸಿಗೆಯ ಬಿಸಿಯನ್ನೂ ಮೀರಿಸುವಂತೆ ಚುನಾವಣೆ ಕಾವು ಬರುವ ದಿನಗಳಲ್ಲಿ ಅನುಭವಕ್ಕೆ ಬರಬಹುದು. ಆದರೆ, ಚುನಾವಣೆ ಘೋಷಣೆ ಜೊತೆಗೆ ಬಂದಿರುವ ಮಾದರಿ ನೀತಿ ಸಂಹಿತೆಯ ಬಿಸಿ ಮಾತ್ರ ಈಗಾಗಲೇ ತಟ್ಟಿದೆ.

ಜನ್ಮದಿನ, ಅಭಿನಂದನೆ, ಪ್ರಯಾಣ, ಜಾತ್ರೆ, ಆಚರಣೆಗಳ ನೆಪದಲ್ಲಿ ನಗರದ ವೃತ್ತಗಳು, ರಸ್ತೆಗಳನ್ನು ಆಕ್ರಮಿಸಿಕೊಳ್ಳುತ್ತಿದ್ದ ಫ್ಲೆಕ್ಸ್‌ಗಳು ಸದ್ಯ ತೆರೆಗೆ ಸರಿದಿವೆ. ಒಂದು ಕಾಲದಲ್ಲಿ ಚುನಾವಣೆ ಇದೆ ಎಂಬುದನ್ನು ನೆನಪಿಸುತ್ತಿದ್ದುದೇ ಈ ಫ್ಲೆಕ್ಸ್‌ಗಳು, ಭಿತ್ತಿಪತ್ರಗಳು.

ವೆಚ್ಚಕ್ಕೆ ಕಡಿವಾಣ ಹಾಕುವುದು ಸೇರಿದಂತೆ ಕಟ್ಟುನಿಟ್ಟಾಗಿ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆಯ ಬಿಸಿ ಮಾತ್ರ ಫ್ಲೆಕ್ಸ್  ಮುದ್ರಣ ಮಾಡುವ ಸಂಸ್ಥೆಗಳ ಮೇಲೆ ತಟ್ಟಿದೆ. ಎಲೆಕ್ಷನ್ ಸಂದರ್ಭದಲ್ಲಿ ಉತ್ತಮ ವಹಿವಾಟಿನ ನಿರೀಕ್ಷೆಯಲ್ಲಿದ್ದ ಇಂಥ ಸಂಸ್ಥೆಗಳ ಸ್ಥಿತಿ ಈಗ ಫ್ಲೆಕ್ಸ್‌ನಷ್ಟೇ ಆಕರ್ಷಕವೇನೂ ಅಲ್ಲ.

ನಗರದಲ್ಲಿ ಫ್ಲೆಕ್ಸ್ ಮುದ್ರಣ ಕಾರ್ಯದಲ್ಲಿ ತೊಡಗಿರುವ ಎಸ್. ಪಾಟೀಲ್ ಅವರ ಪ್ರಕಾರ, ಎಲೆಕ್ಷನ್ ಇದ್ದರೂ ನಮಗೆ ಬ್ಯುಸಿನೆಸ್ ಇಲ್ಲ. ನೀತಿ ಸಂಹಿತೆಯ ಬಿಸಿ ತಟ್ಟಿದೆ.

ಇತರೆ ಆರ್ಡರ್‌ಗಳು ಸಿಗದಿದ್ದರೆ ಸಹಜವಾಗಿ ನಷ್ಟವಾಗುವುದು ನಿಶ್ಚಿತ ಎನ್ನುತ್ತಾರೆ.

ಕಳೆದ ವರ್ಷವೂ ಇದೇ ಸ್ಥಿತಿ ಇತ್ತು. ಈಗಲೂ ಅಂಥ ಸ್ಥಿತಿ ಇದೆ. ಚುನಾವಣೆಗೆ ಸಂಬಂಧಿಸಿದ ಆರ್ಡರ್‌ಗಳು ಹೆಚ್ಚಾಗಿ ಬರುತ್ತಿಲ್ಲ. ಮುದ್ರಣ ಮಾಡಿದರೂ ಇದರ ಲೆಕ್ಕವನ್ನು ಜಿಲ್ಲಾಡಳಿತಕ್ಕೆ ಕೊಡಬೇಕು ಎಂಬ ಮಾಹಿತಿಯನ್ನು ಓದಿದ್ದೇವೆ. ಆದರೆ, ಲಿಖಿತವಾಗಿ ಯಾವುದೇ ಮಾಹಿತಿ ಇಲ್ಲ ಎನ್ನುತ್ತಾರೆ.

ಮೊದಲು ಫ್ಲೆಕ್ಸ್ ಹಾಕಲು ನಗರ ಸಭೆಯಿಂದ ನಿಗದಿತ ಅವಧಿಗೆ ಅನುಮತಿ ಪಡೆಯಬೇಕಿತ್ತು. ಈಗ ಅನುಮತಿ ಜೊತೆಗೆ, ಜಿಲ್ಲಾಡಳಿತಕ್ಕೆ ಲೆಕ್ಕವನ್ನು ಕೊಡಬೇಕಾಗಿದೆ. ನಿಗದಿತ ಅವಧಿಯ ಬಳಿಕ ಫ್ಲೆಕ್ಸ್‌ಗಳನ್ನು ತೆರವುಗೊಳಿಸುವ ಹೊಣೆ ನಗರಸಭೆಗೆ ಬೀಳುತ್ತಿತ್ತು. ಈಗ ನೀತಿ ಸಂಹಿತೆಯಿಂದಾಗಿ ಆ ಮಟ್ಟಿಗೆ ನಗರಸಭೆಯ ಕೆಲಸ ಕಡಿಮೆಯಾಗಿದೆ.

ಏನೇ ಇದ್ದರೂ, ಚುನಾವಣೆ ಸ್ಪರ್ಧೆ ಹೆಚ್ಚಿರುವ ಕಾರಣ ನಿಯಂತ್ರಣ ಇಲ್ಲದಿದ್ದರೆ ಪ್ರಮುಖ ರಸ್ತೆ, ವೃತ್ತಗಳನ್ನು ಹಣಬೆಗಳಂತೆ ಈ ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು. ಆ ಮಟ್ಟಿಗೆ ಇದು, ಸ್ವಾಗತಾರ್ಹ ಬೆಳವಣಿಗೆ ಎಂಬುದು ಸಾರ್ವತ್ರಿಕ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.