ADVERTISEMENT

ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2011, 10:10 IST
Last Updated 23 ಜನವರಿ 2011, 10:10 IST

ಬೀದರ್: ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಬೆಳಿಗ್ಗೆಯಿಂದಲೇ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಅಲ್ಲಲ್ಲಿ ಕೆಲ ಅಂಗಡಿಗಳು ತೆರೆದುಕೊಂಡಿದ್ದವು. ಬೆಳಿಗ್ಗೆ ಬೈಕ್‌ನ ಮೇಲೆ ಸಂಚರಿಸಿದ ಬಿಜೆಪಿ ಕಾರ್ಯಕರ್ತರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರು.

ಮತ್ತೊಂದೆಡೆ ಬಂದ್‌ಗೆ ವಿರೋಧಿಸಿದ ಜೆಡಿಎಸ್ ಕಾರ್ಯಕರ್ತರು ನಗರದ ಹಳೆಯ ಭಾಗದಲ್ಲಿ ಕೆಲ ಅಂಗಡಿಗಳನ್ನು ತೆರೆಸಿದರು. ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಜೆಡಿಎಸ್ ಮುಖಂಡರಾದ ಬಾಬುರಾವ ಮಲ್ಕಾಪುರ, ಮಾರುತಿ ಬೌದ್ಧೆ, ಗಾಲೇಬ್ ಹಾಸ್ಮಿ ಸೇರಿದಂತೆ 13 ಜನರನ್ನು ಬಂಧಿಸಿ ಅನಂತರ ಬಿಡುಗಡೆ ಮಾಡಿದರು.
ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಶಾಲಾ ಕಾಲೇಜುಗಳಿಗೂ ರಜೆ ಘೋಷಿಸಲಾಗಿತ್ತು. ಸರ್ಕಾರಿ ಕಚೇರಿಗಳು ಮಾತ್ರ ಎಂದಿನಂತೆ ಕಾರ್ಯ ನಿರ್ವಹಿಸಿದವು. ಮಧ್ಯಾಹ್ನದ ನಂತರ ಅಂಗಡಿಗಳು ಒಂದೊಂದಾಗಿ ಬಾಗಿಲು ತೆರೆದವು.

ರಾಜ್ಯಪಾಲರ ಕ್ರಮವನ್ನು ವಿರೋಧಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಗರದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ ಅಪರ ಜಿಲ್ಲಾಧಿಕಾರಿ ಮಾಣಿಕಪ್ಪ ಮಂಗಲಗಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಾಥ ಮಲ್ಕಾಪುರೆ, ಜಿಲ್ಲಾ ಅಧ್ಯಕ್ಷ ಸುಭಾಷ ಕಲ್ಲೂರ, ಶಾಸಕ ಪ್ರಭು ಚವ್ಹಾಣ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಬುವಾಲಿ ಮಾತನಾಡಿ, ರಾಜ್ಯಪಾಲರ ಕ್ರಮವನ್ನು ತೀವ್ರವಾಗಿ ಖಂಡಿಸಿದರು.

 ಪ್ರಮುಖರಾದ ಮಲ್ಲಿಕಾರ್ಜುನ ಬಿರಾದಾರ, ಬಾಬುರಾವ ಮದಕಟ್ಟಿ, ರೇವಣಸಿದ್ಧಪ್ಪ ಜಲಾದೆ, ಬಸವರಾಜ ಆರ್ಯ, ಎನ್.ಆರ್. ವರ್ಮಾ, ಕುಶಾಲ ಪಾಟೀಲ್, ಡಿ.ಕೆ. ಸಿದ್ರಾಮ, ಬಸವರಾಜ ಪವಾರ, ಸುರೇಶ ಮಾಶೆಟ್ಟಿ, ಶಶಿ ಹೊಸಳ್ಳಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬಸವಕಲ್ಯಾಣ ವರದಿ:   
 ಬಂದ್ ಆಚರಣೆಯಲ್ಲಿ ಕಾರ್ಯಕರ್ತರಿಂದ ರಸ್ತೆಯಲ್ಲಿ ಟೈರ್‌ಗಳನ್ನು ಸುಡಲಾಯಿತು ಹಾಗೂ ಶಾಸಕರ ಕಚೇರಿ ಎದುರು ಟಂಟಂ ವಾಹನದ ಮೇಲೆ ಕಲ್ಲು ತೂರಿದನ್ನು ಬಿಟ್ಟರೆ ಯಾವುದೇ ಅನಾಹುತ ನಡೆಯಲಿಲ್ಲ.

ಬೆಳಿಗ್ಗೆ ಇಲ್ಲಿನ ಶಾಸಕರ ಕಚೇರಿ ಎದುರು ರಸ್ತೆ ತಡೆ ನಡೆಸಿದ ಕಾರ್ಯಕರ್ತರು ನಂತರ ಅಂಬೇಡ್ಕರ ಮತ್ತು ಮಹಾತ್ಮಾಗಾಂಧಿ ವೃತ್ತದವರೆಗೆ ಬೈಕ್ ಮೇಲೆ ತಿರುಗಿ ಅಂಗಡಿಗಳನ್ನು ಮುಚ್ಚುವಂತೆ ಮನವಿ ಮಾಡಿದರು. ಮಧ್ಯಾಹ್ನ ರ್ಯಾಲಿ ನಡೆಸಿ ತಹಸೀಲ್ದಾರರಿಗೆ ಮನವಿ ಪತ್ರ ಅರ್ಪಿಸಲಾಯಿತು. ಮೆರವಣಿಗೆಯುದ್ದಕ್ಕೂ ರಾಜ್ಯಪಾಲರಿಗೆ ಧಿಕ್ಕಾರ ಎಂಬ ಘೋಷಣೆ ಕೂಗಲಾಯಿತು.

ಪಕ್ಷದ ತಾಲ್ಲೂಕು ಅಧ್ಯಕ್ಷ ಜಯದ್ರತ್ ಮಾಡ್ಜೆ, ನಗರ ಘಟಕದ ಅಧ್ಯಕ್ಷ ಸೂರ್ಯಕಾಂತ ಚಿಲ್ಲಾಬಟ್ಟೆ, ಪ್ರಧಾನ ಕಾರ್ಯದರ್ಶಿ ಸುಧೀರ ಕಾಡಾದಿ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ದೀಪಕ ಗಾಯಕವಾಡ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರವಿ ಚಂದನಕೆರೆ, ಜಿಪಂ ಸದಸ್ಯ ಚಂದ್ರಶೇಖರ ಪಾಟೀಲ, ತಾಪಂ ಸದಸ್ಯರಾದ ಬಸವರಾಜ ರಾಯಗೋಳ್, ರಾಮ ಮಾಳಿ, ಪ್ರಮುಖರಾದ ಅಶೋಕ ವಕಾರೆ, ಡಾ.ವಿ.ಎಲ್.ಭಂಡಾರಿ, ವಿಜಯಲಕ್ಷ್ಮಿ ಹೂಗಾರ, ಶಿವಪುತ್ರ ಗೌರ್, ಮಹಾದೇವ ಹಲಸೆ, ಅರವಿಂದ ಮುತ್ತೆ, ಪ್ರಕಾಶ ಮೆಂಡೋಳೆ, ಸಜ್ಜನ ಚಾಹೂಸ್, ಸಂಜೀವ ಜಾಧವ, ರಮೇಶ ಕಾಂಬಳೆ, ರವಿ ಕೊಳಕೂರ್, ಸುಭಾಷ ರೇಕುಳಗಿ, ಗುರುನಾಥ ಮೂಲಗೆ, ಶಂಕರ ಬಿರಾದಾರ, ಭೀಮಶಾ ಮಂಗಳೂರ, ಶೋಭಾ ತೆಲಂಗ್, ಸಂಜೀವ ದೇಗಲೂರೆ, ಶಿಕ್ರೇಶ್ವರ ಗೋಕಳೆ ಪಾಲ್ಗೊಂಡಿದ್ದರು.

ಹುಮನಾಬಾದ್‌ವರದಿ: 
 ರಾಜ್ಯ ಬಿಜೆಪಿ ಕರೆ ನೀಡಿದ್ದ ಬಂದ್ ಆಚರಣೆ ಕುರಿತು ಮುಂಚಿತವಾಗಿ ಘೋಷಣೆ ಮಾಡಿದ್ದರಿಂದ ನಗರದಲ್ಲಿನ ಬಹುತೇಕ ಅಂಗಡಿಗಳು ಶನಿವಾರ ಬೆಳಿಗ್ಗೆ ಸ್ವಯಂ ಪ್ರೇರಣೆಯಿಂದ ಮುಚ್ಚಲ್ಪಟ್ಟಿದ್ದವು. ಅಲ್ಲಲ್ಲಿ ತೆರೆದಿದ್ದ ಕೆಲವು ಅಂಗಡಿಗಳನ್ನು ಪಕ್ಷದ ಹಿರಿಯ ಮುಖಂಡ ಜಹಿರೋದ್ದೀನ್, ತಾ.ಪಂ
ಸದಸ್ಯ ಗಜೇಂದ್ರ ಕನಕಟಕರ್, ಸಿರಾಜುದ್ದೀನ್, ಪ್ರಮುಖರಾದ ಸತ್ತಾರಸಾಬ್, ವಿಶ್ವನಾಥ ಪಾಟೀಲ, ಪುಟ್ಟು ಸಿರಂಜಿ, ಅಶೋಕ ಸಿದ್ದೇಶ್ವರ, ಗಿರೀಶ ಪಾಟೀಲ, ವಿಜಯಕುಮಾರ ದುರ್ಗದ್, ಬಾಬು ಜಾನವೀರ್ ಮೊದಲಾದವರು ಬೈಕ್‌ರ್ಯಾಲಿ ಮೂಲಕ ತೆರಳಿ ಬಂದ್ ಇಡಲು ಸೂಚಿಸುತ್ತಿರುವುದು ಕಂಡುಬಂತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.