ADVERTISEMENT

ಬದುಕಿಗೆ ಹೈನುಗಾರಿಕೆ ಸಹಕಾರಿ

ಸೆಗಣಿ ಮಾರಾಟದಿಂದ ವರ್ಷಕ್ಕೆ ₹ 50 ಸಾವಿರ ಗಳಿಕೆ!

​ಪ್ರಜಾವಾಣಿ ವಾರ್ತೆ
Published 20 ಮೇ 2018, 14:32 IST
Last Updated 20 ಮೇ 2018, 14:32 IST
ಭಾಲ್ಕಿ ತಾಲ್ಲೂಕಿನ ತರನಳ್ಳಿಯಲ್ಲಿ ಆಕಳುಗಳ ಜೊತೆ ರೈತ ಚಂದ್ರಕಾಂತ ತಳವಾಡೆ
ಭಾಲ್ಕಿ ತಾಲ್ಲೂಕಿನ ತರನಳ್ಳಿಯಲ್ಲಿ ಆಕಳುಗಳ ಜೊತೆ ರೈತ ಚಂದ್ರಕಾಂತ ತಳವಾಡೆ   

ಭಾಲ್ಕಿ: ನಾಲ್ಕು ವರ್ಷಗಳಿಂದ ಹೈನುಗಾರಿಕೆಯಲ್ಲಿ ತೊಡಗಿರುವ ತಾಲ್ಲೂಕಿನ ತರನಳ್ಳಿ ಗ್ರಾಮದ ಪ್ರಗತಿಪರ ರೈತ ಚಂದ್ರಕಾಂತ ತಳವಾಡೆ ಅವರಿಗೆ ಹೈನುಗಾರಿಕೆ ಸಂತಸದ ಬದುಕು ನಡೆಸಲು ಸಹಕಾರಿ ಆಗಿದೆ.

ವರ್ಷಕ್ಕೆ ಆಕಳುಗಳ 10 ರಿಂದ 15 ಟ್ರ್ಯಾಕ್ಟರ್‌ ಸೆಗಣಿ ಮಾರಾಟದಿಂದ ₹ 50 ಸಾವಿರ ಆದಾಯ ಗಳಿಸುತ್ತಾರೆ. ಕೃಷಿಯಲ್ಲಿ ಯಾವುದೇ ಲಾಭವಿಲ್ಲ ಎಂದು ನಿರಾಸೆಗೊಂಡವರಿಗೆ  ಚಂದ್ರಕಾಂತ ಭರವಸೆಯ ಕಿರಣವಾಗಿದ್ದಾರೆ.

ಅಲ್ಪ ನೀರನ್ನು ಬಳಸಿ ಅರ್ಧ ಎಕರೆಯಲ್ಲಿ ಹುಲ್ಲನ್ನು ಬೆಳೆದು, ಹೈನುಗಾರಿಕೆ ನಡೆಸಿ ನಿತ್ಯ ಕೈತುಂಬಾ ಹಣ ಸಂಪಾದಿಸಿ ಇತರರಿಗೆ ಮಾದರಿ ಆಗಿದ್ದಾರೆ.

ADVERTISEMENT

ಮಳೆಯನ್ನೇ ಅವಲಂಬಿಸಿಕೊಂಡು ಒಣ ಕೃಷಿ ಮಾಡುವ ಬಹುತೇಕ ರೈತರು ಅತಿವೃಷ್ಟಿ, ಅನಾವೃಷ್ಟಿ, ಕೀಟಬಾಧೆ ಸೇರಿದಂತೆ ಇತರ ಒಂದಿಲ್ಲೊಂದು ಸಮಸ್ಯೆಗಳಿಂದ ಪ್ರತಿವರ್ಷ ಉತ್ತಮ ಫಲ ಪಡೆಯಲು ಸಾಧ್ಯವಾಗದೆ ಕಷ್ಟದಲ್ಲಿರುತ್ತಾರೆ. ಆದರೆ ಅಂತಹದ್ದಕ್ಕೆ ಎಡೆ ಮಾಡಿಕೊಡದೇ ಚಂದ್ರಕಾಂತ ಅವರು ಕೃಷಿಯಲ್ಲಿ ಉತ್ತಮ ಬದುಕು ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ.

‘ನಾಲ್ಕು ಎಕರೆ ಹೊಲದಲ್ಲಿ ತೊಗರಿ, ಉದ್ದು, ಸೋಯಾ, ಜೋಳ, ಕಡಲೆ ಬೆಳೆಯಲು ಪ್ರಯತ್ನಿಸುತ್ತಿದ್ದೆ, ಆದರೆ ನಿರೀಕ್ಷಿತ ಮಟ್ಟದಲ್ಲಿ ಬೆಳೆ ಪಡೆಯಲು ಕಷ್ಟಸಾಧ್ಯವಾಯಿತು. ನೀರಾವರಿ ಮೂಲಕವಾದರೂ ಬಂಪರ್‌ ಬೆಳೆ ಪಡೆಯಬೇಕೆಂದು ಕೊಳವೆ ಬಾವಿ ಕೊರೆಯಿಸಿದೆ. ನನ್ನ ದುರ್ದೈವಕ್ಕೆ 1 ಇಂಚು ಮಾತ್ರ ನೀರು ಸಿಕ್ಕಿತು.  ಹೀಗಾಗಿ ಕೃಷಿ ಕಾರ್ಯದಲ್ಲಿ ಹೆಚ್ಚಿನ ಹಣ ಗಳಿಸಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಯಿತು’ ಎಂದು ಚಂದ್ರಕಾಂತ ‘ಪ್ರಜಾವಾಣಿ’ಗೆ ತಿಳಿಸಿದರು.

‘ನೀರು ಸಿಗದಿದ್ದರೂ ನಿರಾಸೆಗಳ್ಳಲಿಲ್ಲ. ಹೈನುಗಾರಿಕೆಯನ್ನು ನೆಚ್ಚಿಕೊಂಡೆ. ನಾಲ್ಕು ವರ್ಷಗಳ ಹಿಂದೆ 1 ಜೆರ್ಸಿ (ಎಚ್‌ಎಫ್‌) ಆಕಳಿನಿಂದ ಹೈನುಗಾರಿಕೆ ಆರಂಭಿಸಿದ್ದೇನೆ. ಈಗ ಮೂರು ಆಕಳು ಮತ್ತು ಮೂರು ಕರುಗಳು ಇವೆ. ನಿತ್ಯ 60 ಲೀಟರ್‌ ಹಾಲು ಸಂಗ್ರಹಿಸುತ್ತೇನೆ. 1 ಇಂಚು ನೀರಿನಲ್ಲಿ ಅರ್ಧ ಎಕರೆ ಹೊಲದಲ್ಲಿ ಗಣಿಕೆ ಹುಲ್ಲಿನ ಬೀಜ್‌ದಿಂದ ಹುಲ್ಲು ಬೆಳೆದಿದ್ದೇನೆ’ ಎಂದು ತಿಳಿಸಿದರು.

‘ಒಂದು ಸಾರಿ ಬಿತ್ತನೆ ಮಾಡಿದರೆ ಮೂರು ವರ್ಷ ನಿರಂತರ ಹುಲ್ಲು ಪಡೆಯಬಹುದು. ಆಕಳುಗಳು ನಿತ್ಯ ಮುಂಜಾನೆ 30, ಸಂಜೆ 30 ಲೀಟರ್‌ ಹಾಲು ಕೊಡುತ್ತವೆ. ಪ್ರತಿ ದಿನ ಆಕಳಿಗೆ 300 ಲೀಟರ್‌ ನೀರು, 120 ಕೆಜಿ ಹುಲ್ಲು, 6 ಕೆಜಿ ಹೆಸರಿನ, ಸೋಯಾ, ಮೆಕ್ಕೆ ಜೋಳ, ಹತ್ತಿ ಕಾಳು, ಬಾರ್ಲಿ ತಿನ್ನಲಿಕ್ಕೆ ಕೊಡುತ್ತೇನೆ. ಆಕಳುಗಳು ಹೆಚ್ಚಿನ ಹಾಲು ಕೊಡಲಿಕ್ಕೆ ಗೌಧಾರಾ ಶಕ್ತಿ ಪೌಡರ್‌ ನಿತ್ಯ 100 ಗ್ರಾಂ ಕೊಡುತ್ತೇನೆ’ಎಂದು ಅವರು ತಿಳಿಸಿದರು.

‘ಪ್ರತಿ ಲೀಟರ್‌ ಹಾಲಿನ ದರ ₹ 24 ಸಹಾಯಧನ ₹ 5 ಸೇರಿಸಿ ನಿತ್ಯ ಅಂದಾಜು ₹ 1700 ಸಂಪಾದಿಸುತ್ತೇನೆ. ₹ 500 ಆಕಳಿನ ವ್ಯವಸ್ಥೆಗೆ ಖರ್ಚು ಮಾಡುತ್ತೇನೆ. ನಿವ್ವಳ ₹ 1000 ದಿಂದ ₹ 1200 ಗಳಿಸುತ್ತೇನೆ.

ಹೈನುಗಾರಿಕೆಗೆ ನಾನು ಮೀಸಲಿಡುವುದು ದಿನದ 4 ಗಂಟೆ ಮಾತ್ರ. ಉಳಿದ ಸಮಯದಲ್ಲಿ ಇನ್ನು ಉಳಿದ ಮೂರುವರೆ ಎಕರೆ ಒಣ ಭೂಮಿಯಲ್ಲಿ ಹೆಸರು, ಉದ್ದು ಸೇರಿದಂತೆ ಇತರ ಬೆಳೆಗಳನ್ನು ಬೆಳೆಯುತ್ತೇನೆ. ಈಗಾಗಲೇ ಆಕಳುಗಳಿಗಾಗಿ ಶೆಡ್‌ ನಿರ್ಮಾಣ ಮಾಡಿದ್ದೇನೆ’ ಎಂದು ವಿವರಿಸಿದರು.

ಮುಂಬರುವ ದಿನಗಳಲ್ಲಿ ಇನ್ನೂ 4 ಆಕಳು ತರುವ ಯೋಚನೆ ಚಂದ್ರಕಾಂತ ಹೊಂದಿದ್ದಾರೆ. ಅವುಗಳಿಗಾಗಿ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಿಸಿ ಶಾವರ್‌, ಫ್ಯಾನ್‌, ಮ್ಯಾಟ್‌ ವ್ಯವಸ್ಥೆ ಮಾಡಲು ಉದ್ದೇಶಿಸಿದ್ದಾರೆ. ದಿನಕ್ಕೆ ಕನಿಷ್ಟ ₹ 2,000 ಆದಾಯ ಗಳಿಸುವುದು ಅವರ ಗುರಿಯಾಗಿದೆ.

**
ಕೃಷಿಯನ್ನೇ ಒಂದು ಉದ್ಯೋಗ ಎಂದು ಭಾವಿಸಿ ಮನಸಾಪೂರ್ವಕ ಕಾಯಕ ಮಾಡಬೇಕು. ಇದರಿಂದ ಯಾವುದೇ ನಷ್ಟವಾಗುವುದಿಲ್ಲ
ಚಂದ್ರಕಾಂತ ತಳವಾಡೆ, ಪ್ರಗತಿಪರ ರೈತ

ಬಸವರಾಜ್‌ ಎಸ್‌.ಪ್ರಭಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.