ADVERTISEMENT

ಬಳಕೆಗೆ ಲಭ್ಯವಾಗದ ಕೆಳಸೇತುವೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 9:56 IST
Last Updated 17 ಡಿಸೆಂಬರ್ 2012, 9:56 IST
ಬೀದರ್ ನಗರದಲ್ಲಿ ಆರ್‌ಟಿಒ ಕಚೇರಿ ಬಳಿ ಮತ್ತು ಪೊಲೀಸ್ ವಸತಿಗೃಹದ ಬಳಿ  ನಿರ್ಮಾಣವಾಗಿರುವ ರೇಲ್ವೆ ಕೆಳಸೇತುವೆ
ಬೀದರ್ ನಗರದಲ್ಲಿ ಆರ್‌ಟಿಒ ಕಚೇರಿ ಬಳಿ ಮತ್ತು ಪೊಲೀಸ್ ವಸತಿಗೃಹದ ಬಳಿ ನಿರ್ಮಾಣವಾಗಿರುವ ರೇಲ್ವೆ ಕೆಳಸೇತುವೆ   

ಬೀದರ್: ಒಂದು ಕಡೆ ನಾಗರಿಕ ಸೌಲಭ್ಯಕ್ಕಾಗಿ ಬೇಡಿಕೆ, ಹೋರಾಟ ನಡೆಯುತ್ತಿದ್ದರೆ ನಗರದ ಮಟ್ಟಿಗೆ ಸಿದ್ಧವಾಗಿರುವ ಸೌಲಭ್ಯವನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವಂತೆ ಹೋರಾಟ ನಡೆಸಬೇಕಾದ್ದು ಅನಿವಾರ್ಯ ಆಗಬಹುದೇನೋ?
ನಗರದ ನಡುವೆಯೇ ಹಾದುಹೋಗಿರುವ ರೈಲ್ವೆ ಹಳಿಯ ಹಿನ್ನೆಲೆಯಲ್ಲಿ ವಾಹನಗಳ ಸಂಚಾರದ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ನಿರ್ಮಿಸಲಾಗಿರುವ ರೈಲ್ವೆ ಕೆಳ ಸೇತುವೆಗಳು ಇನ್ನೂ ಸಾರ್ವಜನಿಕ ಬಳಕೆಗೆ ಮುಕ್ತವಾಗದೇ ನೆನೆಗುದಿಯಲ್ಲವೆ.

ಹೈದರಾಬಾದ್ ರಸ್ತೆಯಲ್ಲಿ ಪೊಲೀಸ್ ವಸತಿಗೃಹದ ಕಡೆಗೆ ಹೋಗಲು ನಿರ್ಮಿಸಲಾದ ಕೆಳಸೇತುವೆ ಮತ್ತು ಆರ್‌ಟಿಒ ಕಚೇರಿಗೆ ಹತ್ತಿರವಾದಂತೆ ಚಿದ್ರಿ ಕಡೆಗೆ ಹೋಗಲು, ವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ ರೈಲ್ವೆ ಕೆಳ ಸೇತುವೆಗಳು ಈಗ ಬಳಕೆಗೆ ಮುಕ್ತವಾಗದೆ ಉಳಿದಿವೆ.

ಪ್ರಸ್ತುತ ನಗರದಲ್ಲಿ ಇರುವ ನಗರದಲ್ಲಿರುವ ಕಾವಲು ಸಹಿತ ಕ್ರಾಸಿಂಗ್ ಬಳಿ  ರೈಲ್ವೆ ಸಂಚಾರದ ಅವಧಿಯಲ್ಲಿ ಕನಿಷ್ಠ ಅರ್ಧ ಗಂಟೆ ಕಾಲ ವಾಹನಗಳ ಸಂಚಾರ ಏರು ಪೇರಾಗುತ್ತದೆ. ರೈಲ್ವೆ ಕ್ರಾಸಿಂಗ್ ಕಿರಿದಾಗಿರುವುದು, ಕ್ರಾಸಿಂಗ ತೆರವುಗೊಂಡ ಹಿಂದೆಯೇ ಎಲ್ಲ ವಾಹನಗಳು ಮುನ್ನುಗ್ಗುವ ಕಾರಣ, ಸಂಚಾರ ಸುಗಮಗೊಳ್ಳುವುದು ಸಮಸ್ಯೆಯಾಗಲಿದೆ.

ಅಲ್ಲದೆ, ಕ್ರಾಸಿಂಗ್ ಮುಚ್ಚಿದ್ದ ಸಂದರ್ಭದಲ್ಲಿ ಸಾಲುದ್ದ ವಾಹನಗಳು ನಿಲುಗಡೆಯಾಗಲಿವೆ. ಕೆಳಸೇತುವೆ ಸಿದ್ಧವಾಗಿ ವರ್ಷಗಳೇ ಕಳೆದರೂ ಆಡಳಿತ ಈ ಬಗೆಗೆ ಚಿಂತನೆ ನಡೆಸಿಲ್ಲ. ಕೆಳಸೇತುವೆಗೆ ಹೊಂದಿಕೊಂಡಂತೆ ರಸ್ತೆ ನಿರ್ಮಿಸುವ ಕಾರ್ಯವೂ ಆಗಿಲ್ಲ. ವಿಳಂಬದಿಂದಾಗಿ, ಕೆಳಸೇತುವೆಯ ಆವರಣದ ಸುತ್ತಲೂ ಪಾರ್ಥೆನಿಯಂ ಅಂಥ ಕಳೆ ಬೆಳೆಸು ಪಳೆಯುಳಿಕೆಯ ಭಾವನೆ ಮೂಡಿಸುತ್ತಿದೆ.

ಇಂಟರ್‌ಸಿಟಿ ರೈಲು ಆರಂಭಕ್ಕೆ ಚಾಲನೆ ನೀಡಲು ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಅವರು ಭೇಟಿ ನೀಡಿದ್ದಾಗಲೂ ಈ ವಿಷಯ ಪ್ರಸ್ತಾಪವಾಗಿತ್ತು. ಪರಿಶೀಲಿಸಿ ಆದಷ್ಟು ಶೀಘ್ರ ತೆರವುಗೊಳಿಸುವುದಾಗಿ ಅವರು ಭರವಸೆ ನೀಡಿದ್ದರು. ಆಗ, ಕೆಳಸೇತುವೆ ಬಳಿ ಭೂ ಸ್ವಾದೀನ ಸಮಸ್ಯೆ ಇರುವ ಕಾರಣ ವಿಳಂಬವಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದರಾದರೂ, ಬಳಿಕ ವಾಸ್ತವಾಂಶ ಆಗಿಲ್ಲ ಎಂಬುದು ಸಚಿವರಿಗೆ ಮನವರಿಕೆಯಾಗಿತ್ತು.

ADVERTISEMENT

ಈಗಾಗಲೇ ನಗರ ಕೇಂದ್ರದಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ಕೆಳಸೇತುವೆ ಕಾಮಗಾರಿ ತ್ವರಿತಗೊಳಿಸಲು ಸಂಘಟನೆಗಳು ಆಗಿಂದಾಗ್ಗೆ ಪ್ರತಿಭಟನೆ ನಡೆಸುತ್ತಿವೆ. ಸಿದ್ಧವಾಗಿರುವ ಕೆಳಸೇತುವೆಗಳನ್ನು ಸಂಚಾರ ಮುಕ್ತಗೊಳಿಸಲು ಜಿಲ್ಲಾಡಳಿತ, ನಗರಸಭೆ ಆಸಕ್ತಿ ವಹಿಸಿ ಕ್ರಮ ಕೈಗೊಳ್ಳದೇ ಇದ್ದರೆ ಇದೂ ಸಂಘಟನೆಗಳ ಹೋರಾಟಕ್ಕೆ ಇನ್ನೊಂದು ವಸ್ತುವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.