ADVERTISEMENT

ಬಸವಕಲ್ಯಾಣದಲ್ಲಿ ಸ್ನಾತಕೋತ್ತರ ಕೇಂದ್ರ ಆರಂಭ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2011, 8:10 IST
Last Updated 27 ಫೆಬ್ರುವರಿ 2011, 8:10 IST

ಬಸವಕಲ್ಯಾಣ: ಶರಣರ ನಾಡು ಬಸವಕಲ್ಯಾಣದಲ್ಲಿ ಸ್ನಾತಕೋತ್ತರ ಕೇಂದ್ರ ಸ್ಥಾಪನೆಗೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಈ.ಟಿ.ಪುಟ್ಟಯ್ಯ ತಿಳಿಸಿದರು. ವಿಶ್ವವಿದ್ಯಾಲಯದಿಂದ ಶನಿವಾರ ಹಮ್ಮಿಕೊಂಡ ಇಲ್ಲಿನ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಕಟ್ಟಡದಲ್ಲಿ ಆರಂಭಿಸಲಾದ ಶರಣ ಸಾಹಿತ್ಯ ಗ್ರಂಥಾಲಯ ಮತ್ತು ಸಂಪನ್ಮೂಲ ಕೇಂದ್ರ ಹಾಗೂ ವೆಬ್‌ಸೈಟ್‌ನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಗ್ರಂಥಾಲಯದಲ್ಲಿ ಎಲ್ಲ ಶರಣರ ವಚನ ಸಾಹಿತ್ಯ ಇಡಲಾಗುವುದು. ವೆಬ್‌ಸೈಟ್ ಮೂಲಕವೂ ಕುಳಿತಲ್ಲಿಯೇ ಸಾಹಿತ್ಯ ಓದಲು ಅನುಕೂಲ ಮಾಡಿಕೊಡಲಾಗುತ್ತದೆ.ಜತೆಗೆ ವಿಶ್ವವಿದ್ಯಾಲಯದಿಂದ ನಗರದಲ್ಲಿ ಒಂದು ಲಕ್ಷ ಸಸಿ ನೆಡಲು ಹಾಗೂ ಇಲ್ಲಿನ ವೈಭವ ಹೆಚ್ಚಿಸುವಂತಹ ಕಾರ್ಯ ಕೈಗೊಳ್ಳಲು ಯೋಜಿಸಲಾಗಿದೆ ಎಂದರು.

ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ವಿಶೇಷಾಧಿಕಾರಿ ಡಾ.ಎಸ್.ಎಂ.ಜಾಮದಾರ ಮಾತನಾಡಿ ಸ್ನಾತಕೋತ್ತರ ಕೇಂದ್ರ ಆರಂಭಿಸಿದರೆ ಹಾಸ್ಟೇಲ್ ಹಾಗೂ ಸಿಬ್ಬಂದಿ ಕೋಣೆಗಳ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ಕೊಟ್ಟರು. ಬಸವಾದಿ ಶರಣ ಸಾಹಿತ್ಯ ಅಧ್ಯಯನ ಪೀಠ ಒಳಗೊಂಡು ನಾಲ್ಕು ಪೀಠಗಳನ್ನು ಇಲ್ಲಿಗೆ ವರ್ಗಾಯಿಸಲು ಬರುತ್ತದೆಯೇ ಎಂಬುದರ ಬಗ್ಗೆಯೂ ವಿಶ್ವವಿದ್ಯಾಲಯದವರು ಚಿಂತಿಸುವ ಅಗತ್ಯವಿದೆ ಎಂದರು.

ವಿಜಾಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಗ್ರಂಥಾಲಯ ಉದ್ಘಾಟಿಸಿದರು. ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ವೆಬ್‌ಸೈಟ್‌ಗೆ ಚಾಲನೆ ಕೊಟ್ಟರು. ಶಾಸಕ ಬಸವರಾಜ ಪಾಟೀಲ ಅಟ್ಟೂರ್, ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಮಾತನಾಡಿದರು. ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಅನಿಲಕುಮಾರ ರಗಟೆ, ಜಿಲ್ಲಾಧಿಕಾರಿ ಸಮೀಪ ಶುಕ್ಲಾ, ನಗರಸಭೆ ಅಧ್ಯಕ್ಷೆ ಮಂಗಲಾಬಾಯಿ ಉದ್ರೆ, ಪ್ರೊ.ಎಸ್.ಎಲ್.ಹಿರೇಮಠ, ಬಿಕೆಡಿಬಿ ಆಯುಕ್ತ ಕಾಶಿನಾಥ ಗೋಕಳೆ ಉಪಸ್ಥಿತರಿದ್ದರು.ಡಾ.ರವಿ ಗದ್ದಗಿಮಠ ಸ್ವಾಗತಿಸಿದರು. ಡಾ.ಡಿ.ಬಿ.ನಾಯಕ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.