ADVERTISEMENT

ಬಸವಕಲ್ಯಾಣ: ಅರಣ್ಯ ಬೆಳೆಸುವಲ್ಲಿ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 10:20 IST
Last Updated 20 ಏಪ್ರಿಲ್ 2013, 10:20 IST

ಬಸವಕಲ್ಯಾಣ: ತಾಲ್ಲೂಕಿನಲ್ಲಿ ಅರಣ್ಯ ಬೆಳೆಸುವಲ್ಲಿ ಜನರು ಮತ್ತು ಸಂಬಂಧಿತ ಇಲಾಖೆಯವರು ನಿರ್ಲಕ್ಷ್ಯ ತೋರಿದ್ದರಿಂದ ಎಲ್ಲಿಯೂ ಹೆಚ್ಚಿನ ಗಿಡ ಮರಗಳು ಕಾಣದಂತಾಗಿದೆ. ಇದರಿಂದ ಪ್ರಕೃತಿಯ ಮೇಲೆ ಪರಿಣಾಮವಾಗಿ ಮಳೆ ಸರಿಯಾದ ಪ್ರಮಾಣದಲ್ಲಿ ಸುರಿಯುತ್ತಿಲ್ಲ.

ಈ ಭಾಗದಲ್ಲಿ ಯಾವುದೇ ದೊಡ್ಡ ನದಿ ನಾಲೆಗಳಿಲ್ಲದ್ದರಿಂದ ಗಿಡಗಳು ಹೆಚ್ಚಾಗಿ ಬೆಳೆಯದಂತಾಗಿದೆ. ಆದ್ದರಿಂದ ಬೇಸಿಗೆಯಲ್ಲಿ ಎಲ್ಲಿ ಹೋದರೂ  ಖಾಲಿ ಜಮೀನು, ಕಲ್ಲು ಬಂಡೆಗಳೇ ಕಾಣುತ್ತವೆ.

ಮುಖ್ಯವೆಂದರೆ, ಇತ್ತೀಚಿನ ವರ್ಷಗಳಲ್ಲಿ ಮಳೆ ಕಡಿಮೆ ಪ್ರಮಾಣದಲ್ಲಿ ಬೀಳುತ್ತಿರುವ ಕಾರಣ ಬೆಳೆಗಳು ಬರುತ್ತಿಲ್ಲ. ಅಲ್ಲದೆ ಅಂತರ್ಜಲ ಮಟ್ಟ ಕುಸಿದಿದ್ದರಿಂದ ಬಾವಿಗಳಿಗೆ ನೀರಿಲ್ಲದೆ ತೋಟದ ಬೆಳೆಗಳು ಸಹ ಒಣಗುತ್ತಿವೆ. ಹೀಗಿದ್ದಾಗ ಪರಿಸರದಲ್ಲಿ ಎಲ್ಲಿ ಹಸಿರು ಕಂಗೊಳಿಸುತ್ತದೆ ಎಂದು ಗ್ರಾಮೀಣ ಭಾಗದವರು ಕೇಳುವಂತಾಗಿದೆ.

ನಗರ ಪ್ರದೇಶದಲ್ಲಿ ಮನೆಗಳ ಎದುರು ಗಿಡಗಳನ್ನು ಬೆಳೆಸಲಾಗುತ್ತದೆ. ಆದರೆ, ಗ್ರಾಮೀಣ ಭಾಗದಲ್ಲಿ ಹೊಲ ಹಾಗೂ ಖಾಲಿ ಜಾಗದಲ್ಲಿ ಗಿಡಗಳನ್ನು ಬೆಳೆಸಲು ಯಾರೂ ಮನಸ್ಸು ಮಾಡುತ್ತಿಲ್ಲ. ಅರಣ್ಯ ಇಲಾಖೆಯವರು ಸಸಿಗಳನ್ನು ಸರಿಯಾಗಿ ಬೆಳೆಸುವಲ್ಲಿ ಕಾಳಜಿ ತೋರುತ್ತಿಲ್ಲ ಎನ್ನಲಾಗುತ್ತಿದೆ. ಇದಲ್ಲದೆ ಇಲಾಖೆಯವರು ಅಲ್ಲಲ್ಲಿ ಬೆಳೆಸಿದ ಗಿಡಗಳನ್ನು ಕೆಲವರು ಕಡಿಯುತ್ತಿರುವುದು ಕಂಡುಬರುತ್ತಿದೆ. ರಸ್ತೆ ಬದಿಯಲ್ಲಿ ಬೆಳೆಸಿದ ನೀಲಗಿರಿ ಗಿಡಗಳನ್ನು ಕಡಿಯುವ ಪ್ರಕರಣಗಳು ಹೆಚ್ಚುತ್ತಿವೆ.

ಪ್ರತಿವರ್ಷ ಗುಡ್ಡಗಾಡು ಪ್ರದೇಶ ಮತ್ತು ಪ್ರಮುಖ ರಸ್ತೆಗಳ ಬದಿಗಳಲ್ಲಿ ಗಿಡಗಳನ್ನು ಹಚ್ಚುತ್ತಿದ್ದೇವೆ. ಆದರೆ ನೀರಿನ ಕೊರತೆಯಿಂದ ಕೆಲವೊಂದು ಗಿಡಗಳು ಬೆಳೆಯುತ್ತಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಕಳೆದ ವರ್ಷ ಮಳೆಗಾಲ ಆರಂಭ ಆಗುವಾಗ ಒಂದು ಲಕ್ಷಕ್ಕೂ ಹೆಚ್ಚಿನ ಸಸಿಗಳನ್ನು ನೆಟ್ಟಿದ್ದೇವೆ. ಮುಂಬರುವ ಜೂನ್- ಜುಲೈ ತಿಂಗಳಲ್ಲಿ ನೆಡುವುದಕ್ಕಾಗಿ ವಿವಿಧ ಪ್ರಕಾರದ 1.60 ಲಕ್ಷ ಸಸಿಗಳನ್ನು ಬೆಳೆಸಿದ್ದು ರಸ್ತೆ ಬದಿಗಳಲ್ಲಿ ಒಂದು ಸಾವಿರ ಹೊಂಡ ತೋಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.