ADVERTISEMENT

ಬಸವಕಲ್ಯಾಣ: ಧಾರಾಕಾರ ಮಳೆಗೆ ಹೊಂಡ ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 5:44 IST
Last Updated 26 ಏಪ್ರಿಲ್ 2013, 5:44 IST

ಬಸವಕಲ್ಯಾಣ: ಇಲ್ಲಿ ಗುರುವಾರ ಗುಡುಗು, ಮಿಂಚು, ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿದಿದ್ದರಿಂದ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡಗಳು ಸೃಷ್ಟಿಯಾದವು. ಅಲ್ಲದೆ ಜನಜೀವನ ಅಸ್ತವ್ಯಸ್ತವಾಯಿತು.

ಬೆಳಿಗ್ಗೆಯಿಂದ ಧಗೆ ಹೆಚ್ಚಾಗಿತ್ತು. ಫ್ಯಾನಿನ ಗಾಳಿಗೆ ಕುಳಿತರೂ ಮೈಗೆ ಬೇವರು ಬರುತಿತ್ತು. ಮಧ್ಯಾಹ್ನ ಒಮ್ಮೆಲೆ ಆಗಸದಲ್ಲಿ ಕರಿ ಮೋಡಗಳು ಗೋಚರಿಸಿದವು. ನಂತರ ಮಳೆ ಸುರಿಯಲು ಆರಂಭಿಸಿತು. ಮೊದಲು ಜಿಟಿಜಿಟಿಯಾಗಿ ಸುರಿಯಿತಾದರೂ ನಂತರ ಅರ್ಧಗಂಟೆಗೂ ಹೆಚ್ಚು ಕಾಲದವರೆಗೆ ಧಾರಾಕಾರ ಮಳೆ ಬಂತು. ಮಧ್ಯದಲ್ಲಿ ಆಗಾಗ ಸಣ್ಣ ಆಕಾರದ ಆಲಿಕಲ್ಲು ಸಹ ಬಿದ್ದವು.

ಹೀಗಾಗಿ ನಗರದಲ್ಲಿ ಎಲ್ಲ ರಸ್ತೆಗಳಲ್ಲಿ ನೀರು ತುಂಬಿ ಹರಿಯಿತು. ಕೆಸರು ನಿರ್ಮಾಣವಾಯಿತು. ತಗ್ಗುಗಳಿರುವ ಸ್ಥಳದಲ್ಲಿ ಅಲ್ಲಲ್ಲಿ ಹೊಂಡಗಳು ಸೃಷ್ಟಿಯಾದವು. ಗಾಂಧಿ ವೃತ್ತದಲ್ಲಿನ ತಿರುವಿನಲ್ಲಿ ಮೊಳಕಾಲು ಮಟ್ಟಕ್ಕೆ ನೀರು ಹರಿದಿದ್ದರಿಂದ ವಾಹನ ಸಂಚಾರಕ್ಕೆ ಅಡೆತಡೆಯಾಯಿತು. ಅಂಬೇಡ್ಕರ ವೃತ್ತ, ತಾಲ್ಲೂಕು ಪಂಚಾಯಿತಿ ಎದುರಿನ ರಸ್ತೆ, ಬನಶಂಕರಿ ಓಣಿ ರಸ್ತೆ, ಬಸವೇಶ್ವರ ಮಂದಿರ ರಸ್ತೆ ಮುಂತಾದೆಡೆ ಅಲ್ಲಲ್ಲಿ ನೀರು ನಿಂತುಕೊಂಡಿತು.

ಈ ಕಾರಣ ವಿಧಾನಸಭೆ ಚುನಾವಣೆ ಅಂಗವಾಗಿ ಪ್ರಚಾರ ಕೈಗೊಂಡವರಿಗೆ ತೊಂದರೆಯಾಯಿತು. ಗ್ರಾಹಕರು ಮತ್ತು ವ್ಯಾಪಾರಸ್ಥರು ಸಮಸ್ಯೆ ಅನುಭವಿಸಬೇಕಾಯಿತು. ಮಳೆ ಬರುವಾಗ ಅನೇಕ ಸಲ ದೊಡ್ಡ ಶಬ್ದದೊಂದಿಗೆ ಮಿಂಚು ಕಾಣಿಸಿಕೊಂಡಿದ್ದರಿಂದ ಜನರು ಭಯಭೀತ ಆಗುವಂತಾಯಿತು. ಆದರೆ, ಎಲ್ಲಿಯೂ ಸಿಡಿಲು ಬಡಿದ ಘಟನೆ ಮಾತ್ರ ವರದಿಯಾಗಿಲ್ಲ.

ತಾಲ್ಲೂಕಿನ ನಾರಾಯಣಪುರ, ಪ್ರತಾಪುರ, ರಾಜೇಶ್ವರ, ಗೌರ ಮುಂತಾದೆಡೆಯೂ ಸಣ್ಣ ಪ್ರಮಾಣದಲ್ಲಿ ಮಳೆ ಸುರಿದ ಬಗ್ಗೆ ಗೊತ್ತಾಗಿದೆ. ಮಳೆ ಬಂದಿದ್ದರಿಂದ ಬಿಸಿಲಿನ ಧಗೆ ಸ್ವಲ್ಪ ಕಡಿಮೆ ಆಗುವಂತಾಯಿತು ಎಂಬುದು ಜನರ ಅನಿಸಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.