ADVERTISEMENT

ಬಾಗಿಲು ತೆರೆದ ಕಸ್ತೂರಬಾ ವಸತಿ ನಿಲಯ

​ಪ್ರಜಾವಾಣಿ ವಾರ್ತೆ
Published 19 ಜೂನ್ 2011, 10:20 IST
Last Updated 19 ಜೂನ್ 2011, 10:20 IST

ಭಾಲ್ಕಿ: ಕೊನೆಗೂ ಬಡ ವಿದ್ಯಾರ್ಥಿನಿಯರ ಆಸರೆಗಾಗಿ ಸರ್ಕಾರ ಮಂಜೂರು ಮಾಡಿದ ಕಸ್ತೂರಬಾ ಗಾಂಧಿ ವಸತಿ ನಿಲಯ ಶನಿವಾರ ಆರಂಭಗೊಂಡಿದೆ. `ಇನ್ನೂ ಆರಂಭವಾಗದ ವಸತಿ ನಿಲಯ~ ಎಂಬ ಶೀರ್ಷಿಕೆಯಡಿ `ಪ್ರಜಾವಾಣಿ~ಯಲ್ಲಿ ವಾರದ ಹಿಂದೆ ಸಚಿತ್ರ ವರದಿ ಪ್ರಕಟಗೊಂಡಿತ್ತು.

ಈ ಸುದ್ದಿಯನ್ನು ಗಮನಿಸಿದ ಶಾಸಕ ಈಶ್ವರ ಖಂಡ್ರೆ ಅವರು ಗುರುವಾರ ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿ, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು. ಜೂನ್ 18ರೊಳಗೆ ವಸತಿ ನಿಲಯವನ್ನು ಆರಂಭಿಸುವಂತೆ ಸೂಚಿಸಿದ್ದರು.

ಜಿಲ್ಲಾ ಪಂಚಾಯಿತಿಯಲ್ಲಿ ಕೂಡಾ ಜಿಲ್ಲಾ ಉಸ್ತುವಾರಿ ಸಚಿವರು ನಡೆಸಿದ್ದ ಸಭೆಯಲ್ಲೂ ಈ ವಿಷಯ ಪ್ರಸ್ತಾಪವಾಗಿತ್ತು. ಉಪ ನಿರ್ದೇಶಕರು ಸಂಬಂಧಿತ ಸಮಿತಿಯ ತುರ್ತು ಸಭೆಯನ್ನು ನಡೆಸಿದ್ದರು.

ಈ ಎಲ್ಲ ಬೆಳವಣಿಗೆಯ ಮಧ್ಯೆ ಶನಿವಾರ ಜಾಗೃತಗೊಂಡ ಅಧಿಕಾರಿಗಳು 12 ಮಕ್ಕಳ ದಾಖಲಾತಿಯೊಂದಿಗೆ ವಸತಿ ನಿಲಯವನ್ನು ವಿದ್ಯುಕ್ತವಾಗಿ ಆರಂಭಿಸಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳು ಸ್ವತ: ವಸತಿ ನಿಲಯಕ್ಕೆ ಭೇಟಿ ನೀಡಿ, ಪೊಲೀಸ್ ಮತ್ತು ಇತರೆ ಅಧಿಕಾರಿಗಳ ಸಮ್ಮುಖದಲ್ಲಿ ಬೀಗವನ್ನು ಒಡೆಸಿದರು. ಒಳಗಿದ್ದ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಮುಂದಿನ ಉಸ್ತುವಾರಿಯನ್ನು ನೋಡಿಕೊಳ್ಳಲು ನೋಡಲ್ ಅಧಿಕಾರಿಯಾಗಿ ಶಿಕ್ಷಣ ಸಂಯೋಜಕ ಬಾಲಾಜಿ ರಾಜೂರೆ ಅವರಿಗೆ ಒಪ್ಪಿಸಿದರು. ಗುಣಮಟ್ಟದಿಂದ ಹಾಸ್ಟೆಲ್ ವ್ಯವಸ್ಥೆಯನ್ನು ನಿರ್ವಹಿಸುವಂತೆ ತಿಳಿಸಿದರು.

ಸದ್ಯಕ್ಕೆ ಕೊಟಗ್ಯಾಳವಾಡಿ, ಧಾರಜವಾಡಿ ತಾಂಡಾ, ಡೋಣಗಾಪೂರ, ಅಂಬೇಸಾಂಗವಿ, ಬೀರಿ(ಬಿ) ವಳಸಂಗ ಮುಂತಾದ ಗ್ರಾಮಗಳ 12 ಮಕ್ಕಳು ಪ್ರವೇಶ ಪಡೆದಿದ್ದು, ಇನ್ನೂ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಬಿಇಓ ಎಚ್.ಆರ್. ಬಸಪ್ಪ ತಿಳಿಸಿದ್ದಾರೆ.

ಬಿ.ಆರ್.ಸಿ ಸಮನ್ವಯ ಅಧಿಕಾರಿ ಪ್ರಕಾಶ ಡೋಂಗರೆ, ಶಿಕ್ಷಣ ಸಂಯೋಜಕ ಬಾಲಾಜಿ ರಾಜೂರೆ, ಜಗನ್ನಾಥ ಭಂಡೆ, ಅಕ್ಷರದಾಸೋಹದ ಸಹಾಯಕ ನಿರ್ದೇಶಕ ಕೆ.ಬಿ. ಗೋಖಲೆ ಮುಂತಾದವರು ಇದ್ದರು.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.