ADVERTISEMENT

ಬೀಜ ಖರೀದಿಸಲು ರೈತರ ಪರದಾಟ

​ಪ್ರಜಾವಾಣಿ ವಾರ್ತೆ
Published 12 ಜೂನ್ 2013, 6:11 IST
Last Updated 12 ಜೂನ್ 2013, 6:11 IST

ಬಸವಕಲ್ಯಾಣ: ತಾಲ್ಲೂಕಿನ ನಾರಾಯಣಪುರ, ಮೋರಖಂಡಿ ಮತ್ತು ಬೇಲೂರನಲ್ಲಿನ ಬಿತ್ತನೆ ಬೀಜ ವಿತರಣಾ ಕೇಂದ್ರಗಳನ್ನು ಆರಂಭಿಸದ ಕಾರಣ ರೈತರು ಪರದಾಡಬೇಕಾಗುತ್ತಿದೆ. ಈ ಭಾಗದ ರೈತರಿಗೆ ಬಸವಕಲ್ಯಾಣ ಕೇಂದ್ರದಲ್ಲಿ ಬೀಜ ವಿತರಿಸುವುದರಿಂದ ನೂಕುನುಗ್ಗಲು ಉಂಟಾಗುತ್ತಿದೆ.

ಇದಲ್ಲದೆ ಕೆಲ ರೈತರಿಗೆ ಕೇಳಿದಷ್ಟು ಬೀಜ ಕೊಡಲಾಗುತ್ತಿದೆ. ಆದರೆ ಬೇರೆಯವರಿಗೆ ಇಷ್ಟೇ ಕೊಡಬೇಕೆಂಬ ನಿಯಮವಿದೆ ಎಂದು ಹೇಳಿ ಕಡಿಮೆ ಪ್ರಮಾಣದಲ್ಲಿ ಬೀಜ ವಿತರಿಸಲಾಗುತ್ತಿದೆ ಎಂಬುದು ರೈತರ ಗೋಳಾಗಿದೆ. ಮುಡಬಿ ಮತ್ತು ಕೊಹಿನೂರ ರೈತ ಸಂಪರ್ಕ ಕೇಂದ್ರಗಳಿಗೆ ಕಡಿಮೆ ಪ್ರಮಾಣದಲ್ಲಿ ಬೀಜ ಪೂರೈಸಿದ್ದರಿಂದ ಬಿತ್ತನೆ ಕೈಗೊಳ್ಳಲು ವಿಳಂಬ ಆಗುತ್ತಿದೆ ಎಂದು ಆ ಭಾಗದ ಜನರು ತಿಳಿಸುತ್ತಾರೆ.

ಕೊರತೆ: ಸಿಬ್ಬಂದಿ ಕೊರತೆ ಕಾರಣ ತಾಲ್ಲೂಕಿನ ಮೂರು ಕೇಂದ್ರಗಳಲ್ಲಿ ಬೀಜ ವಿತರಣೆ ಮಾಡಲಾಗುತ್ತಿಲ್ಲ. ಮುಚಳಂಬ ಕೇಂದ್ರ ಸಹ ಆರಂಭಿಸಿರಲಿಲ್ಲ. ಆದರೆ, ಅಲ್ಲಿ ಪಿಕೆಪಿಎಸ್‌ನಿಂದ ವಿತರಣಾ ವ್ಯವಸ್ಥೆ ಮಾಡಿದ್ದರಿಂದ ಅನುಕೂಲ ಆಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವಿಶ್ವನಾಥ ಚೆನ್ನಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

ಯಾರಿಗೆ ಎಷ್ಟು ಜಮೀನು ಇದೆ ಎಂಬುದನ್ನು ನೋಡಿಕೊಂಡು 2-3 ಚೀಲಗಳಷ್ಟು ಬೀಜ ಕೊಡಲಾಗುತ್ತಿದೆ. ಬೀಜದ ಪ್ರಮಾಣದಲ್ಲಿ ಮತ್ತು ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಹಾಗೂ ತಾರತಮ್ಯ ಮಾಡುತ್ತಿಲ್ಲ. ಶೇ 50 ರಷ್ಟು ರಿಯಾಯಿತಿ ಎಲ್ಲಿಯೂ, ಯಾವ ಬೀಜಕ್ಕೂ ಕೊಡಲಾಗುತ್ತಿಲ್ಲ. ಸರ್ಕಾರದ ಸುತ್ತೋಲೆ ಪ್ರಕಾರ ರಿಯಾಯಿತಿ ಕೊಡಲಾಗುತ್ತಿದೆ ಎಂದಿದ್ದಾರೆ.

ಮುಡಬಿ ಮತ್ತು ಕೊಹಿನೂರ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜದ ಕೊರತೆ ಆಗಿತ್ತು. ಆದ್ದರಿಂದ ಮುಡಬಿಗೆ 200 ಕ್ವಿಂಟಲ್ ಬೀಜ ತರಿಸಲಾಗಿದೆ. ಕೊಹಿನೂರಗೆ 210 ಕ್ವಿಂಟಲ್ ಬೀಜದ ಪೊರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ನಾರಾಯಣಪುರ ಮತ್ತು ಪ್ರತಾಪುರ ಭಾಗದ ರೈತರು ಆಗಮಿಸುತ್ತಿರುವ ಕಾರಣ ಬಸವಕಲ್ಯಾಣ ಕೇಂದ್ರದಲ್ಲಿ ಇದುವರೆಗೆ ವಿವಿಧ ಪ್ರಕಾರದ 1554 ಕ್ವಿಂಟಲ್ ಬಿತ್ತನೆ ಬೀಜ ಖರೀದಿಯಾಗಿದೆ.

ಹುಲಸೂರ ಕೇಂದ್ರದಲ್ಲಿ 952 ಕ್ವಿಂಟಲ್, ರಾಜೇಶ್ವರದಲ್ಲಿ 870 ಕ್ವಿಂಟಲ್ ಬೀಜ ದಾಸ್ತಾನು ಮಾಡಲಾಗಿತ್ತು. ಅದೆಲ್ಲ ಮುಗಿಯುವ ಹಂತಕ್ಕೆ ತಲುಪಿದೆ. ಆದ್ದರಿಂದ ಇನ್ನಷ್ಟು ಬೇಡಿಕೆ ಸಲ್ಲಿಸಲಾಗಿದೆ ಎಂದು ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.