ADVERTISEMENT

ಬೀದರ್ ಜಿಲ್ಲಾ ಪಂಚಾಯಿತಿ ಬಿಜೆಪಿ ಮಡಿಲಿಗೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2011, 9:55 IST
Last Updated 5 ಜನವರಿ 2011, 9:55 IST

ಬೀದರ್: ಬೀದರ್ ಜಿಲ್ಲಾ ಪಂಚಾಯಿತಿ ಬಿಜೆಪಿ ಮಡಿಲಿಗೆ ಬಿದ್ದಿದೆ. ಕಳೆದ ಬಾರಿ ಅಂತಂತ್ರವಾಗಿದ್ದ ಜಿಲ್ಲಾ ಪಂಚಾಯಿತಿಯಲ್ಲಿ ಈ ಬಾರಿ ಮಾತ್ರ ಆಡಳಿತಾರೂಢ ಪಕ್ಷಕ್ಕೆ ನಿಚ್ಚಳ ಬಹುಮತ ದೊರೆತಿದೆ.

ಜಿಲ್ಲಾ ಪಂಚಾಯಿತಿಯ 31 ಸ್ಥಾನಗಳ ಪೈಕಿ ಬಿಜೆಪಿ 18 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದೆ. 5 ಸ್ಥಾನಗಳಲ್ಲಿ ಜೆಡಿಎಸ್ ಜಯಭೇರಿ ಬಾರಿಸಿದರೆ ಕಾಂಗ್ರೆಸ್ ಪಕ್ಷ ಕೇವಲ 2 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಮುಖಭಂಗ ಅನುಭವಿಸಿದೆ. ಇನ್ನುಳಿದ 6 ಸ್ಥಾನಗಳಲ್ಲಿ ಪಕ್ಷೇತರರು ವಿಜಯ ದುಂದುಬಿ ಹಾರಿಸಿದ್ದಾರೆ.

ವಿಜಯೋತ್ಸವ: ಮತ ಎಣಿಕೆಯ ಹಿನ್ನೆಲೆಯಲ್ಲಿ ನಗರದ ಬಿ.ವಿ.ಬಿ. ಕಾಲೇಜು ಪ್ರದೇಶದಲ್ಲಿ ಮಂಗಳವಾರ ಜನಜಾತ್ರೆ ನೆರೆದಿತ್ತು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಅಭ್ಯರ್ಥಿಗಳ ಬೆಂಬಲಿಗರು ಫಲಿತಾಂಶಕ್ಕಾಗಿ ಕಾತರರಾಗಿದ್ದರು.

ಮತ ಎಣಿಕೆಯು ಕೇಂದ್ರದ ಒಳಗಡೆ ಇದ್ದ ಅಭ್ಯರ್ಥಿಗಳ ದುಗುಡ ಹೆಚ್ಚಿಸಿದರೆ ಹೊರಗಡೆ ಕಾಯುತ್ತಿದ್ದ ಕಾರ್ಯಕರ್ತರಲ್ಲಿ ಕುತೂಹಲಕ್ಕೆ ಕಾರಣವಾಗಿತ್ತು. ಹೀಗಾಗಿ ಅವರು ಪ್ರತಿ ಸುತ್ತಿನ ಮಾಹಿತಿ ಪಡೆಯುವುದಕ್ಕಾಗಿಯು ಕಸರತ್ತು ನಡೆಸಿದ್ದರು.

ಮತ ಎಣಿಕೆ ಕೇಂದ್ರದ ಒಳಗಿಂದ ಯಾರಾದರೂ ಹೊರಗಡೆ ಬಂದರೆ ಸಾಕು ಕಾರ್ಯಕರ್ತರು ಅವರನ್ನು ಸುತ್ತುವರೆದು ಮಾಹಿತಿ ಪಡೆಯುತ್ತಿದ್ದರು. ಅಲ್ಲದೇ ತಮ್ಮ ಅಭ್ಯರ್ಥಿ ಮುನ್ನಡೆ ಸಾಧಿಸಿದಾಗ ಜಯಘೋಷ ಹಾಕುತ್ತಿದ್ದರು. ಮತ ಎಣಿಕೆ ಪೂರ್ಣಗೊಳ್ಳುವವರೆಗೆ ಅಲ್ಲಿಂದ ಕದಲದ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳ ಬೆಂಬಲಿಗರು ಕಡ್ಲೆಪುರಿ, ಪಾನಿಪುರಿ, ಸಮೋಸಾ, ಮಿರ್ಚಿ, ಚುಡವಾ ತಿನ್ನುತ್ತ ಟೈಮ್‌ಪಾಸ್ ಮಾಡುತ್ತಿದ್ದರು.

ಫಲಿತಾಂಶ ಪೂರ್ಣಗೊಳ್ಳುತ್ತಿದ್ದಂತೆಯೇ ಕಣದಲ್ಲಿ ಇದ್ದ ಅಭ್ಯರ್ಥಿಗಳು ಒಬ್ಬೊಬ್ಬರಾಗಿ ಮತ ಎಣಿಕೆ ಕೇಂದ್ರದಿಂದ ಹೊರಬಂದರು. ಗೆಲುವು ಸಾಧಿಸಿದವರಲ್ಲಿ ಮಂದಹಾಸ ಮನೆ ಮಾಡಿದರೆ ಸೋತವರ ಮುಖ ಬಾಡಿದಂತೆ ಕಂಡು ಬಂದಿತ್ತು.

ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಬೆಂಬಲಿಗರು ಹೂಮಾಲೆ ಹಾಕಿ ಎತ್ತಿಕೊಂಡು ಸಂಭ್ರಮಿಸಿದರು. ಪರಸ್ಪರ ಗುಲಾಲ್ ಎರಚಿಕೊಂಡರು. ನಿಷೇಧಾಜ್ಞೆ ನಡುವೆಯೂ ಕೆಲ ಅಭ್ಯರ್ಥಿಗಳ ಬೆಂಬಲಿಗರು ಮೆರವಣಿಗೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.