ಬೀದರ್: ಜಿಲ್ಲೆಯಲ್ಲಿ ಅಕಾಲಿಕ ಮಳೆ ಮತ್ತು ಆಲಿಕಲ್ಲು, ಬಿರುಗಾಳಿಯಿಂದ ಕಬ್ಬು ಮತ್ತು ಇತರ ಬೆಳೆಗಳು ಹಾನಿಯಾಗಿರುವ ಪ್ರದೇಶಗಳಿಂದ ಎರಡು ದಿನಗಳಲ್ಲಿ ಕಾರ್ಖಾನೆಗೆ ಕಬ್ಬು ಪಡೆಯಬೇಕು ಎಂದು ಜಿಲ್ಲಾಧಿಕಾರಿ ಜಿಲ್ಲೆಯ ಮೂರು ಕಾರ್ಖಾನೆಗಳಿಗೆ ಸೂಚಿಸಿದ್ದಾರೆ.
ಈ ಕುರಿತು ಬಿಎಸ್‌ಎಸ್‌ಕೆ, ಎನ್‌ಎಸ್‌ಎಸ್‌ಕೆ ಮತ್ತು ಎಂಜಿಎಸ್‌ಕೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿರುವ ಅವರು, ಮುಂದಿನ ಎರಡು ದಿನದಲ್ಲಿ ಕಬ್ಬು ಪಡೆಯದಿದ್ದರೆ ಇಳುವರಿ ಕಡಿಮೆಯಾಗುವ ಸಂಭವವಿದ್ದು, ಇದರಿಂದ ಹಾನಿ ಪ್ರಮಾಣ ಹೆಚ್ಚಲಿದೆ ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಆದ್ಯತೆ ಮೇರೆಗೆ ಆಲಿಕಲ್ಲು ಮಳೆಯಿಂದಾಗಿ ಬೆಳೆಹಾನಿ ಸಂಭವಿಸಿರುವ ಪ್ರದೇಶಗಳಲ್ಲಿ ಬೆಳೆಯಲಾದ ಕಬ್ಬು ಪಡೆಯಬೇಕು. ಆಯಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ಮತ್ತು ತಹಶೀಲ್ದಾರ್ ಜೊತೆಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಪರಿಹಾರ ನೀಡಲು ಶಾಸಕರ ಆಗ್ರಹ: ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದ ಅಪಾರ ಬೆಳೆ ಹಾನಿಯಾಗಿದ್ದು, ಇಂಥ ಪ್ರದೇಶಗಳಲ್ಲಿ ಬೆಳೆಹಾನಿಗಾಗಿ ಪ್ರತಿ ಎಕರೆಗೆ ₨10 ಸಾವಿರ ಪರಿಹಾರವನ್ನು ನೀಡಬೇಕು ಎಂದು ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ಮನವಿ ಮಾಡಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಜಿಲ್ಲೆಯಲ್ಲಿ ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂಬ ಅಂದಾಜಿದ್ದು, ಸುಮಾರು ₨500 ಕೋಟಿ ಹೆಚ್ಚಿನ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.