ಬೀದರ್: ಬಸವಲಿಂಗ ಅವಧೂತರ ಆಗಮನದ ನಾಲ್ಕನೇ ವಾರ್ಷಿಕೋತ್ಸವ ಅಂಗವಾಗಿ ಬೀದರ್ ತಾಲ್ಲೂಕಿನ ಅಷ್ಟೂರು ಗ್ರಾಮದಲ್ಲಿ ಶುಕ್ರವಾರ ಭಕ್ತಿ, ಶ್ರದ್ಧೆಯೊಂದಿಗೆ ಬೆಳ್ಳಿ ರಥದಲ್ಲಿ ಬಸವಲಿಂಗ ಅವಧೂತರ ಮೆರವಣಿಗೆ ನಡೆಯಿತು.
ಗ್ರಾಮದ ಅಲ್ಲಮಪ್ರಭು ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆಯು ಪ್ರಮುಖ ಬೀದಿಗಳ ಮೂಲಕ ಬಸವ ಆಶ್ರಮಕ್ಕೆ ತೆರಳಿ ಸಮಾವೇಶಗೊಂಡಿತು.
ಕಳಶ ಹೊತ್ತ ನೂರಾರು ಮಹಿಳೆಯರು ಮೆರವಣಿಗೆಯ ಮೆರಗು ಹೆಚ್ಚಿಸಿದರು. ಧ್ವನಿವರ್ಧಕಗಳಲ್ಲಿ ಭಕ್ತಿ ಗೀತೆಗಳು ಮೊಳಗಿದವು. ಭಕ್ತ ಸಮೂಹದಿಂದ ಬಸವಲಿಂಗ ಅವಧೂತರಿಗೆ ಜಯವಾಗಲಿ ಎಂಬ ಘೋಷಣೆಗಳು ಕೇಳಿ ಬಂದವು. ಮಹಿಳೆಯರು ಭಜನೆ ಮಾಡಿದರೆ ಯುವಕರು ಭಕ್ತಿ ಗೀತೆಗಳ ಮೇಲೆ ಮೈ ಮರೆತು ನರ್ತನ ಮಾಡಿದರು. ಸುಡುವ ಬಿಸಿಲಿನ ಮಧ್ಯೆಯೂ ನಾಲ್ಕೈದು ಗಂಟೆಯವರೆಗೆ ಉತ್ಸಾಹದಿಂದ ಮೆರವಣಿಯಲ್ಲಿ ಪಾಲ್ಗೊಂಡರು.
ಅವಧೂತರ ಭಾವಚಿತ್ರ ಇರುವ ಪಲ್ಲಕ್ಕಿಯೂ ಮೆರವಣಿಗೆಯಲ್ಲಿತ್ತು. ಮೆರವಣಿಗೆಯ ಉದ್ದಕ್ಕೂ ಭಕ್ತರು ಅವಧೂತರ ಪಾದಕ್ಕೆ ನಮಸ್ಕರಿಸಿದರು. ಜಿಲ್ಲೆ ಮಾತ್ರವಲ್ಲದೆ, ನೆರೆ ಜಿಲ್ಲೆ ಹಾಗೂ ರಾಜ್ಯಗಳ ಅಪಾರ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಬಸವ ಆಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಬಸವಲಿಂಗ ಅವಧೂತರು, ದೇವರು ಪ್ರತಿಯೊಬ್ಬರ ಹೃದಯಲ್ಲಿದ್ದಾನೆ ಎಂದು ನುಡಿದರು.
ಭಕ್ತಿ, ವಿಶಾಲ ಹೃದಯ ಇದ್ದರೆ ದೇವರು ಒಲಿಯುತ್ತಾನೆ. ಸತ್ಸಂಗಗಳಿಂದ ದೈವ ಭಕ್ತಿ ಉಂಟಾಗುತ್ತದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.