ADVERTISEMENT

ಭಾರತ ಯಾತ್ರೆಗೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2011, 8:55 IST
Last Updated 26 ಆಗಸ್ಟ್ 2011, 8:55 IST
ಭಾರತ ಯಾತ್ರೆಗೆ ಸ್ವಾಗತ
ಭಾರತ ಯಾತ್ರೆಗೆ ಸ್ವಾಗತ   

ಬೀದರ್: ಸುಭಾಷಚಂದ್ರ ಬೋಸ್ ಅವರ ಜನ್ಮದಿನವನ್ನು ದೇಶಪ್ರೇಮಿ ದಿನ ಎಂದು ಘೋಷಿಸುವಂತೆ ಆಗ್ರಹಿಸಿ ಅಖಿಲ ಹಿಂದ್ ಫಾರ್ವರ್ಡ್ ಬ್ಲಾಕ್ ಕೈಗೊಂಡಿರುವ ಭಾರತ ಯಾತ್ರೆಗೆ ನಗರದಲ್ಲಿ ಗುರುವಾರ ಭವ್ಯ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.

ಯಾತ್ರೆ ನಗರದ ಅಂಬೇಡ್ಕರ್ ವೃತ್ತದ ಬಳಿ ಆಗಮಿಸುತ್ತಿದ್ದಂತೆಯೇ ನೇತಾಜಿ ಸುಭಾಷಚಂದ್ರ ಬೋಸ್ ಫೌಂಡೇಶನ್, ಭಾರತ ಸಂರಕ್ಷಣಾ ಸಮಿತಿ ಹಾಗೂ ಸರ್ದಾರ್ ವಲ್ಲಬಭಾಯಿ ಪ್ರತಿಷ್ಠಾನದಿಂದ ಸ್ವಾಗತ ಕೋರಲಾಯಿತು.

ನೇತಾಜಿ ಕನಸಿನ ಭಾರತ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಅಖಿಲ ಹಿಂದ್ ಫಾರ್ವರ್ಡ್ ಬ್ಲಾಕ್ ಮಹಾರಾಷ್ಟ್ರ ಅಧ್ಯಕ್ಷ ಶಿವದಾಸ ಲಖದೀವೆ ಅಭಿಪ್ರಾಯಪಟ್ಟರು.

ಉನ್ನತ ಶಿಕ್ಷಣ ರಾಷ್ಟ್ರೀಕರಣ ನಿಲ್ಲಿಸಬೇಕು. ಅರಣ್ಯ ಭೂಮಿ ಲೂಟಿ ತಡೆಯಬೇಕು. ಹಾಗೂ ಬೆಲೆ ಏರಿಕೆ ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.

ಸರ್ದಾರ್ ವಲ್ಲಬಭಾಯಿ ಪಟೇಲ್ ಪ್ರತಿಷ್ಠಾನದ ಅಧ್ಯಕ್ಷರಾದ ಶಿವಶರಣಪ್ಪ ವಾಲಿ ಮಾತನಾಡಿ, ಭ್ರಷ್ಟಾಚಾರ, ಹಸಿವು ಹಾಗೂ ಭಯೋತ್ಪಾದನೆ ಮುಕ್ತ ಭಾರತ ನಿರ್ಮಾಣ ಯಾತ್ರೆಯ ಉದ್ದೇಶವಾಗಿದೆ ಎಂದು ತಿಳಿಸಿದರು.

ನೇತಾಜಿ ಅವರ ಜನ್ಮದಿನವಾದ ಜನವರಿ 23ನ್ನು ದೇಶಪ್ರೇಮಿ ದಿನವನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿದರು.

ಪ್ರೊ. ದೇವೇಂದ್ರ ಕಮಲ್, ಬಾಬುರಾವ ಹೊನ್ನಾ ಮಾತನಾಡಿದರು. ನಂತರ ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಮೆರವಣಿಗೆ ನಡೆಯಿತು. ಅಖಿಲ ಹಿಂದ್ ಫಾರ್ವರ್ಡ್ ಬ್ಲಾಕ್‌ನ ರಾಮೇಶ್ವರ ಚೌಂಡಾ, ಸ್ನೇಹಂಕ್ ಪಾಠಕ್, ಮಹೇಶ, ಶಕುಂತಲಾ ವಾಲಿ, ದೀಪಕ ವಾಲಿ, ಡಾ. ರಜನೀಶ ವಾಲಿ, ಬೀದರ್-ಗುಲಬರ್ಗಾ ಹಾಲು ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನ ಬಿರಾದಾರ, ಪತ್ರಕರ್ತರಾದ ಸಿದ್ರಾಮಯ್ಯ ಸ್ವಾಮಿ, ಸಂತೋಷ ದೇವಣಿ, ಮಾಳಪ್ಪ ಅಡಸಾರೆ, ಶಶಿ ಪಾಟೀಲ್, ಭಾರತ ಸೇವಾ ದಳದ ಪ್ರಕಾಶ ಗಾದಗಿ, ಮಾರುತಿ, ಎ.ಎಂ. ಯಾದವ ಮತ್ತಿತರರು ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.