ಬೀದರ್: ಭ್ರಷ್ಟಾಚಾರ ಆರೋಪ ಹೊತ್ತವರನ್ನು ತಮ್ಮ ಜೊತೆಯಲ್ಲೇ ಇರಿಸಿಕೊಂಡಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹೇಳಿದರು.
ನಗರದ ಗಣೇಶ ಮೈದಾನದಲ್ಲಿ ಗುರುವಾರ ನಡೆದ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಬಗ್ಗೆ ಮಾತನಾಡದ ಮೋದಿ 2ಜಿ ತರಂಗಾಂತರ, ಕಾಮನ್‌ವೆಲ್ತ್ ಕ್ರೀಡಾಕೂಟ ಪ್ರಕರಣ ಉಲ್ಲೇಖಿಸುತ್ತಾರೆ. ಆಗ, ಭ್ರಷ್ಟಾಚಾರ ಆರೋಪ ಹೊತ್ತ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಈಶ್ವರಪ್ಪ, ಅನಂತಕುಮಾರ್ ಪಕ್ಕದಲ್ಲೇ ಕೂತಿರುತ್ತಾರೆ ಎಂದು ಆರೋಪಿಸಿದರು.
ಭ್ರಷ್ಟಾಚಾರವನ್ನು ಪ್ರಸ್ತಾಪಿಸುವ ಮೋದಿ ಅವರು ಕಳೆದ 10 ವರ್ಷಗಳಿಂದ ಗುಜರಾತಿನಲ್ಲಿ ಲೋಕಾಯುಕ್ತರನ್ನು ಏಕೆ ನೇಮಕ ಮಾಡಿಲ್ಲ. ಹಾಗಾದರೆ ಅವರಿಗೆ ತಮ್ಮ ಭ್ರಷ್ಟಾಚಾರ ಬಯಲಿಗೆ ಬರುವ ಭಯ ಇದೆಯೇ ಎಂದು ಪ್ರಶ್ನಿಸಿದರು.
ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ತಾವು ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾಗಿ ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಸಂಸದ ಎನ್. ಧರ್ಮಸಿಂಗ್ ಹೇಳಿದರು. ಕಾಂಗ್ರೆಸ್ ಸೇರಿದ ವೈಜನಾಥ ಪಾಟೀಲ್ ಮಾತನಾಡಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಚಿವರಾದ ರೋಷನ್ ಬೇಗ್, ಉಮಾಶ್ರೀ, ಖಮರುಲ್ ಇಸ್ಲಾಂ, ಧರ್ಮಸಿಂಗ್ ಅವರ ಪತ್ನಿ ಪ್ರಭಾವತಿ, ಮಾಜಿ ಶಾಸಕ ವೀರಣ್ಣ ಮತ್ತಿಕಟ್ಟಿ, ಶಾಸಕರಾದ ಈಶ್ವರ ಖಂಡ್ರೆ, ರಾಜಶೇಖರ್ ಪಾಟೀಲ್, ಡಾ. ಉಮೇಶ್ ಜಾಧವ್, ಡಾ. ಅಜಯ್ ಸಿಂಗ್, ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ಮಾಜಿ ಶಾಸಕರಾದ ರಹೀಮ್‌ಖಾನ್, ಎಂ.ಜಿ. ಮುಳೆ, ಗುಂಡಪ್ಪ ವಕೀಲ, ಕೆ. ಪುಂಡಲಿಕರಾವ್, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ ಇದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಾಜಿ ಅರ್ಷದ್ ಅಲಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅರವಿಂದಕುಮಾರ್ ಅರಳಿ ನಿರೂಪಿಸಿದರು.
ವೈಜಿನಾಥ ಪಾಟೀಲ್ ಸೇರಿ ಹಲವರು ಕಾಂಗ್ರೆಸ್ ಸೇರ್ಪಡೆ: ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷರೂ ಆದ ಮಾಜಿ ಸಚಿವ ವೈಜಿನಾಥ ಪಾಟೀಲ್ ಸೇರಿದಂತೆ ಹಲವರು ನಗರದ ಗಣೇಶ ಮೈದಾನದಲ್ಲಿ ಗುರುವಾರ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಾಜಿ ಅರ್ಷದ್ ಅಲಿ ಪಕ್ಷಕ್ಕೆ ಸೇರ್ಪಡೆಯಾದವರ ಹೆಸರುಗಳನ್ನು ಪ್ರಕಟಿಸಿದರು.
ಪಕ್ಷಕ್ಕೆ ಸೇರ್ಪಡೆಯಾದವರಲ್ಲಿ ಮಾಜಿ ಶಾಸಕ ಎಂ.ಜಿ. ಮುಳೆ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ರಾಜಶ್ರೀ ಸ್ವಾಮಿ, ಅನಿಲ್ ಭೂಸಾರೆ, ರಘುನಾಥ ಜಾಧವ್, ಪ್ರಮುಖರಾದ ಶಾಂತಲಿಂಗ ಸಾವಳಗಿ, ಶಾಹೀನ್ ಪಟೇಲ್, ಶ್ರೀಕಾಂತ್ ಸ್ವಾಮಿ, ಅಮೃತರಾವ್ ಚಿಮಕೋಡೆ, ಬಾಬಾ ಬುಖಾರಿ, ವಿಕ್ರಂ ಪಾಟೀಲ್, ಬಾಬುರಾವ್ ಪಾಟೀಲ್ ಸೇರಿದ್ದಾರೆ.
ಧರ್ಮಸಿಂಗ್ ಗುಣಗಾನ
ಬೀದರ್: ನಗರದ ಗಣೇಶ ಮೈದಾನದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿಯೂ ಆದ ಬೀದರ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎನ್. ಧರ್ಮಸಿಂಗ್ ಅವರ ಗುಣಗಾನ ಮಾಡಿದರು.
ಧರ್ಮಸಿಂಗ್ ಅಜಾತ ಶತ್ರು, ರಾಜ್ಯದಲ್ಲೇ ಅವರಿಗೆ ಶತ್ರುಗಳಿಲ್ಲ. ವಿರೋಧ ಪಕ್ಷಗಳಲ್ಲೂ ಸ್ನೇಹಿತರಿದ್ದಾರೆ. ಅನೇಕ ಬಾರಿ ವಿರೋಧ ಪಕ್ಷದವರೇ ಬೆಂಬಲ ನೀಡಿದ್ದಾರೆ. ಈ ಬಾರಿಯೂ ಅದೇ ಆಗಲಿದೆ ಎಂದು ಹೇಳಿದರು.
ಬಿಜೆಪಿ ಜೊತೆಗೆ ನಮ್ಮ ಸ್ಪರ್ಧೆ, ಜೆಡಿಎಸ್ ಹೆಸರಿಗೆ ಮಾತ್ರ ಇದೆ. ಕೋಮುವಾದಿ ಬಿಜೆಪಿ ಗೆದ್ದರೂ ಪರವಾಗಿಲ್ಲ, ಕಾಂಗ್ರೆಸ್ ಅನ್ನು ಸೋಲಿಸಬೇಕು ಎನ್ನುವ ಉದ್ದೇಶದಿಂದ ಮತಗಳ ವಿಭಜನೆಗಾಗಿ ದೇವೇಗೌಡರು ಬಂಡೆಪ್ಪ ಕಾಶೆಂಪೂರ್ ಅವರನ್ನು ಕಣಕ್ಕಿಳಿಸಿದ್ದಾರೆ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.