ಬಸವಕಲ್ಯಾಣ: ತಾಲ್ಲೂಕಿನ ಹಾರಕೂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ದಲಿತರಿಗೆ ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಮಂಜೂರಾದ ಹೆಚ್ಚುವರಿ ಮನೆಗಳ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ನಿಗಮಕ್ಕೆ ಸಲ್ಲಿಸದಿರುವುದನ್ನು ಪ್ರತಿಭಟಿಸಿ ದಲಿತ ಸಂಘರ್ಷ ಸಮಿತಿಯಿಂದ ಗುರುವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸಲಾಯಿತು.
ಗ್ರಾಮಸಭೆ ನಡೆಸಿ ಫಲಾನುಭವಿಗಳ ಆಯ್ಕೆ ಮಾಡಿದ ನಂತರ ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಬೇಕು ಅಂತಲೇ ನಿಗಮಕ್ಕೆ ಪಟ್ಟಿ ಸಲ್ಲಿಸಿಲ್ಲ. ಅವರ ಮೇಲೆ ಅಗತ್ಯ ಕ್ರಮ ಕೈಗೊಂಡು ಪಟ್ಟಿ ಸಲ್ಲಿಸುವಂತೆ ಮಾಡಬೇಕು ಎಂದು ಸ್ಥಳಕ್ಕೆ ಆಗಮಿಸಿದ್ದ ತಹಸೀಲ್ದಾರ ಡಿ.ಎಂ.ಪಾಣಿ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಲಾಗಿದೆ.
ಹಾರಕೂಡದ ದಲಿತರ ಓಣಿಯಲ್ಲಿ ಅನೇಕ ತಿಂಗಳುಗಳಿಂದ ಉದ್ಭವಿಸಿದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಇಲ್ಲಿನ ಸರ್ಕಾರಿ ಪ್ರೌಢಶಾಲೆ ಕಟ್ಟಡ ಹೊಸದಾಗಿ ಕಟ್ಟಿದ್ದರೂ ಬೀಳುವ ಸ್ಥಿತಿಗೆ ತಲುಪಿದೆ. ಆದ್ದರಿಂದ ಬೇರೆ ಕಟ್ಟಡ ಒದಗಿಸಬೇಕು. ಬಿಸಿಎಂ ವಸತಿ ನಿಲಯದ ವ್ಯವಸ್ಥೆ ಸುಧಾರಿಸಬೇಕು. ಅಲ್ಲದೆ ಸರಿಯಾಗಿ ಸೇವೆ ಸಲ್ಲಿಸದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ಮೇಲೆ ಕ್ರಮ ಜರುಗಿಸಬೇಕು.
ಗ್ರಾಮದಲ್ಲಿ ಜಲನಿರ್ಮಲ ಯೋಜನೆಯಲ್ಲಿ ಕಳಪೆ ಮಟ್ಟದ ಕಾಮಗಾರಿ ನಡೆಯುತ್ತಿದ್ದು, ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ರವಿಕಿರಣ ಯಮ್ಹಾನ, ಜೈಭೀಮ ಸರಜೋಳಗಾ, ದೇವೇಂದ್ರ ಬಾಳಿ, ನಿವರ್ತಿ ಮೆಹತಾ, ಶಿವಾನಂದ ಹೊಳ್ಕರ್, ಸುಭಾಷ, ಗುಂಡಮ್ಮ, ಲಕ್ಷ್ಮೀಬಾಯಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.